ರಾಯಚೂರು: ಮಹಿಳೆಯರು ಮದ್ಯಪಾನದ ವಿರುದ್ಧ ಹೋರಾಟ ಮಾಡುವ ಮೂಲಕ ಕುಟುಂಬ ರಕ್ಷಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಎಚ್.ಸಿ.ರುದ್ರಪ್ಪ ಹೇಳಿದರು. ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಮತ್ತು ಜಿಲ್ಲಾಡಳಿತದ ಸಹಯೋಗದಲ್ಲಿ ಗುರುವಾರ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಏರ್ಪಡಿಸಿದ್ದ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಜನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗಂಡನನ್ನು ಕುಡಿತದ ಚಟದಿಂದ ಬಿಡಿಸಿದ ಪತ್ನಿಯರಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ಇಲ್ಲಿಂದಲೇ ಆರಂಭಿಸಲಾಗಿದೆ. ಇದನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಕುಡಿತದ ಚಟ ಬಿಡಿಸಲು ವಿಶೇಷ ಆಸ್ಪತ್ರೆಗಳಿವೆ. ಗಂಡಂದಿರು ಕುಡಿದು ಬಂದು ತೊಂದರೆ ನೀಡುತ್ತಿದ್ದರೆ ಮಂಡಳಿಗೆ ದೂರು ನೀಡಬಹುದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸಂಘಗಳ ಸಹಕಾರದಿಂದ ತಮ್ಮ ಸಮಸ್ಯೆಗಳಿಗೆ ಪರಿಹಾರ ಕೊಂಡುಕೊಳ್ಳಬಹುದು ಎಂದರು.
ಮನೋವೈದ್ಯ ಮನೋಹರ ಪತ್ತಾರ ವಿಶೇಷ ಉಪನ್ಯಾಸ ನೀಡಿ, ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆ. ಜಗತ್ತಿನಲ್ಲಿ ಭೀಕರ ಸಮಸ್ಯೆಯಾಗಿದೆ. ವಿಶ್ವದ ಅಂಕಿ ಅಂಶಗಳ ಪ್ರಕಾರ ಶೇ.25ರಿಂದ 40 ರಷ್ಟು 15ರಿಂದ 25 ವಯೋಮಾನದ ಯುವಕರು ಮದ್ಯ ಮತ್ತು ಮಾದಕ ವಸ್ತುಗಳ ದಾಸರಾಗಿದ್ದಾರೆ ಎಂದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ನಿರ್ದೇಶಕ ರಾಯಚೂರಿನ ಎಂ.ಶೇಖರಗೌಡ ಮಾತನಾಡಿ, ಡಿ.ವಿರೇಂದ್ರ ಹೆಗ್ಗಡೆ ಅವರು ಸ್ಥಾಪಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ನಡೆಯುತ್ತಿರುವ ಮದ್ಯವರ್ಜನ ಶಿಬಿರಗಳ ಕುರಿತು ವಿವರಿಸಿದರು. ಎಪಿಎಂಸಿ ಅಧ್ಯಕ್ಷ ಅಮರೇಗೌಡ ಹಂಚಿನಾಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ಕರೀಂ, ಜಿಲ್ಲಾ ಧಿಕಾರಿ ಡಾ| ಬಗಾದಿ ಗೌತಮ್, ಜಿಪಂ ಸಿಇಒ ಅಭಿರಾಂ ಜಿ.ಶಂಕರ, ಮಂಡಳಿ ನಿರ್ದೇಶಕ ತಿಮ್ಮಪ್ಪ ನಾಯಕ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ|ಎಂ.ಕೆ.ಎಸ್. ನಸೀರ್, ನಿರ್ಮಲಾ ಬೆಣ್ಣೆ ಸೇರಿ ಇತರರು ಉಪಸ್ಥಿತರಿದ್ದರು.