ಮಂಗಳೂರು: ಕರ್ಣಾಟಕ ಬ್ಯಾಂಕ್ ಜೂ.30ಕ್ಕೆ ಮುಕ್ತಾಯಗೊಂಡ ಪ್ರಸಕ್ತ ವರ್ಷದ ಮೊದಲ ತ್ತೈಮಾಸಿಕದಲ್ಲಿ 370.70 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.
ಕಳೆದ ವರ್ಷದ ಮೊದಲ ತ್ತೈಮಾಸಿಕ ಅಂತ್ಯಕ್ಕೆ 114.18 ಕೋಟಿ ರೂ. ಲಾಭ ದಾಖಲಿಸಿತ್ತು. ಇದರಿಂದ ಬ್ಯಾಂಕ್‌ನ ನಿವ್ವಳ ಲಾಭದಲ್ಲಿ ಶೇ. 224.66ರ ಬೆಳವಣಿಗೆ ಸಾಧಿಸಿದಂತಾಗಿದೆ.
ಮಂಗಳೂರಿನಲ್ಲಿರುವ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಸಂಪನ್ನಗೊಂಡ ಆಡಳಿತ ಮಂಡಳಿಯ ಸಭೆಯಲ್ಲಿ 2023-24ರ ಮೊದಲ ತ್ತೈಮಾಸಿಕದ ಹಣಕಾಸು ವರದಿಯನ್ನು ಅಂಗೀಕರಿಸಲಾಯಿತು.
ಬ್ಯಾಂಕ್‌ನ ನಿರ್ವಹಣ ಲಾಭವು ಜೂ. 30ಕ್ಕೆ 601.17 ಕೋಟಿ ರೂ. ಹಾಗೂ ನಿವ್ವಳ ಬಡ್ಡಿ ಆದಾಯವು 814.68 ಕೋಟಿ ರೂ.ಗಳಿಗೆ ತಲುಪಿದೆ. ಒಟ್ಟು ವ್ಯವಹಾರವು ಶೇ. 6.85ರ ವೃದ್ಧಿಯೊಂದಿಗೆ 1,48,449.27 ಕೋಟಿ ರೂ. ತಲುಪಿದ್ದು, ಇದು ಕಳೆದ ಸಾಲಿನ ಇದೇ ಅವಧಿಯಲ್ಲಿ 1,38,936.17 ಕೋಟಿ ರೂ. ಆಗಿತ್ತು. ಠೇವಣಿಗಳ ಮೊತ್ತವು ಶೇ. 7.92ರ ವೃದ್ಧಿಯೊಂದಿಗೆ 86,959.86 ಕೋಟಿ ರೂ. ಹಾಗೂ ಮುಂಗಡ ಶೇ. 5.36ರ ವೃದ್ಧಿಯೊಂದಿಗೆ 61,489.41ಕೋಟಿ ರೂ.ಗಳಿಗೆ ಏರಿಕೆ ಕಂಡಿದೆ.
ಬ್ಯಾಂಕ್‌ನ ಅನುತ್ಪಾದಕ ಆಸ್ತಿಗಳಲ್ಲಿ ಸಾಕಷ್ಟು ಚೇತರಿಕೆ ಕಂಡಿದೆ. ಸ್ಥೂಲ ಅನುತ್ಪಾದಕ ಆಸ್ತಿಗಳು ಶೇ. 3.68ಕ್ಕೆ ಇಳಿಕೆ ಕಂಡಿದ್ದು, ಹಿಂದಿನ ಸಾಲಿನ ಇದೇ ಅವಧಿಯಲ್ಲಿ ಶೇ. 4.03 ಆಗಿತ್ತು. ಬ್ಯಾಂಕ್‌ನ ನಿವ್ವಳ ಅನುತ್ಪಾದಕ ಸ್ವತ್ತುಗಳು ಶೇ.1.43ಕ್ಕೆ ಇಳಿಕೆಯಾಗಿದ್ದು, ಹಿಂದಿನ ಸಾಲಿನ ಇದೇ ಅವಧಿಯಲ್ಲಿ ಶೇ.2.16ರಷ್ಟಿತ್ತು.
ಮೊದಲ ತ್ತೈಮಾಸಿಕ ಫಲಿತಾಂಶದ ಬಗ್ಗೆ ಮಾತನಾಡಿದ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಶ್ರೀಕೃಷ್ಣನ್ ಎಚ್.ಅವರು, ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ತೈಮಾಸಿಕದ ಫಲಿತಾಂಶ ಸಂತಸ ತಂದಿದೆ. ಸದೃಢವಾದ ಮೂಲ ಅಂಶಗಳ ಭದ್ರಬುನಾದಿಯಲ್ಲಿರುವ ಕರ್ಣಾಟಕ ಬ್ಯಾಂಕ್ ಗ್ರಾಹಕರ ಆಶೋತ್ತರಗಳಿಗೆ ಸ್ಪಂದಿಸುತ್ತ ಪ್ರಗತಿಯ ಪಥದಲ್ಲಿ ದೃಢವಾದ ಹೆಜ್ಜೆಯನ್ನು ಇರಿಸುತ್ತಿದೆ. ಅನೇಕ ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಬ್ಯಾಂಕ್ ವಿಶೇಷ ಗಮನ ಹರಿಸುತ್ತಿದೆ ಎಂದರು.
ನೂತನ ಡಿಜಿಟಲ್ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸುವಲ್ಲಿ ಸಿಬ್ಬಂದಿ ಸಜ್ಜಾಗುತ್ತಿದ್ದಾರೆ. ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ (ಎಂಎಸ್‌ಎಂಇ)ಗಳಿಗೆ , ಚಿಲ್ಲರೆ (ರಿಟೇಲ್) ಹಾಗೂ ಕೃಷಿ ಆಧಾರಿತ ಮುಂಗಡಗಳ ಮೇಲೆ ವಿಶೇಷ ಗಮನ ಹರಿಸಿ ಅವುಗಳ ವಿಸ್ತರಣೆಯಲ್ಲಿ ಕಾರ್ಯ ಪ್ರವೃತ್ತರಾಗುತ್ತಲಿದ್ದೇವೆ. ಬ್ಯಾಂಕ್‌ನ ಅಭಿವೃದ್ಧಿಗೆ ಪೂರಕವಾಗುವಂತೆ ಹೊಸಯುಗದ ಫಿನ್‌ಟೆಕ್ ಕಂಪೆನಿಗಳ ಸಹಭಾಗಿತ್ವದೊಂದಿಗೆ ಎರಡನೆಯ ಶತಮಾನದತ್ತ ಬ್ಯಾಂಕ್ ದಾಪುಗಾಲು ಹಾಕಲಿದೆ ಎಂದೂ ತಿಳಿಸಿದ್ದಾರೆ.