ಕಾರವಾರ: ಉತ್ತರ ಕನ್ನಡ ಜಿಲೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ಸುರಿದ ಮಳೆಯಿಂದ ಜುಲೈನಲ್ಲಿ ಗಂಗಾವಳಿ, ಶರಾವತಿ ನದಿಗಳು ಉಕ್ಕಿ ಹರಿದಿದ್ದವು. ಆಗ ಪ್ರವಾಹದಿಂದ ನದಿ ದಂಡೆ ಮೇಲಿನ 37 ಗ್ರಾಮಗಳು ತೊಂದರೆಗೆ ಒಳಗಾಗಿದ್ದವು.
1615 ಜನರನ್ನು ನೆರೆ, ಪ್ರವಾಹದಿಂದ ರಕ್ಷಿಸಲಾಗಿತ್ತು. 2019ರಲ್ಲಿ ಬಂದ ನೆರೆ ಕಾರವಾರ ತಾಲೂಕಿನ ಕಾಳಿ ನದಿ ದಂಡೆ ಗ್ರಾಮಗಳ ಮನೆಗೆ ನೀರು ನುಗ್ಗಿ ಹೆಚ್ಚು ಹಾನಿಯುಂಟು ಮಾಡಿತ್ತು. 2020ರಲ್ಲಿ ಕಾಳಿ ನದಿ ಅಣೆಕಟ್ಟುಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗದಂತೆ ನೋಡಿಕೊಂಡ ಪರಿಣಾಮ ಕಾಳಿ ನದಿ ದಂಡೆಯ ಹತ್ತಾರು ಗ್ರಾಮಗಳ ಜನರು ನೆರೆಯಿಂದ ತಪ್ಪಿಸಿಕೊಂಡರು. ಆದರೆ ಗಂಗಾವಳಿ, ಅಘನಾಶಿನಿ, ಶರಾವತಿ ನದಿ ದಂಡೆಯ ಜನರಿಗೆ ಮಾತ್ರ ಸಂಕಷ್ಟ ತಪ್ಪಲಿಲ್ಲ. ನೆರೆ ನೀರು ಹತ್ತು ತಾಸು ಇದ್ದರೂ, ಹಲವು ತಾಸು ಮನೆಗೆ ನುಗ್ಗಿದರೂ ಆಗುವ ಹಾನಿ ಅಪಾರವಾದುದು.
ಪ್ರಸ್ತುತ 2020ರ ಮಳೆಗಾಲದಲ್ಲಿ ಹೊನ್ನಾವರದ 877 ಕುಟುಂಬಗಳು, ಅಂಕೋಲಾ ತಾಲೂಕಿನ 558, ಕುಮಟಾದ100, ಸಿದ್ದಾಪುರದ 8, ಯಲ್ಲಾಪುರ 2 ಹಾಗೂ ಕಾರವಾರ, ಮುಂಡಗೊಡದಲ್ಲಿ ತಲಾ ಒಂದೊಂದು ಕುಟುಂಬಗಳು ನೆರೆಯಿಂದಾಗಿ ಸಂಕಷ್ಟ ಎದುರಿಸಿದವು. ಈ ಎಲ್ಲ ಕುಟುಂಬಗಳಿಗೆ ಸರ್ಕಾರದಿಂದ ತಲಾ 10 ಸಾವಿರದಂತೆ ಒಟ್ಟು 154.7 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ.
ಸಾವನ್ನಪ್ಪಿದವರಿಗೂ ಪರಿಹಾರ: ಅಂಕೋಲಾ, ಹಳಿಯಾಳ ಹಾಗೂ ಯಲ್ಲಾಪುರ ತಾಲೂಕಿನಲ್ಲಿ ತಲಾ ಒಬ್ಬರು, ಕುಮಟಾದಲ್ಲಿ ನಾಲ್ವರು ನೆರೆಗೆ ಸಿಕ್ಕು ಸಾವನ್ನಪ್ಪಿದ್ದರು. ಮೃತಪಟ್ಟವರ ಕುಟುಂಬದವರಿಗೆ ತಲಾ 5 ಲಕ್ಷದಂತೆ ಒಟ್ಟು,7 ಕುಟುಂಬಗಳಿಗೆ 40 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. 43 ಜಾನುವಾರು ಮೃತಪಟ್ಟಿದ್ದು, ಜಾನವಾರು ಮಾಲೀಕರಿಗೆ 9.86 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ: ನೆರೆ ಬಂದ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ್ ಕುಮಟಾ, ಹೊನ್ನಾವರ ತಾಲೂಕಿಗೆ ಭೇಟಿ ನೀಡಿದ್ದರು. ಮಳೆ ಕಡಿಮೆಯಾದ ನಂತರ ಕಂದಾಯ ಸಚಿವ ಆರ್.ಅಶೋಕ ಒಮ್ಮೆ ಹೊನ್ನಾವರಕ್ಕೆ ಬಂದು ಪರಿಹಾರ ಕಾರ್ಯದ ಮಾಹಿತಿ ಪಡೆದಿದ್ದರು. ಮನೆ ನಿರ್ಮಿಸಲು ಇರುವ ಅರಣ್ಯ ಅತಿಕ್ರಮಣ ಭೂಮಿಯಲ್ಲಿ ಪಟ್ಟಾ ಇಲ್ಲದೇ ಮನೆ ನಿರ್ಮಾಣಕ್ಕೆ ಅನುಮತಿ ಕೊಡಿಸಲು ಪ್ರಯತ್ನಿಸುವುದಾಗಿ ಹೇಳಿದ್ದರು. ಮುಖ್ಯಮಂತ್ರಿಗಳಿಂದ ಉತ್ತರ ಕನ್ನಡದಲ್ಲಿ ವೈಮಾನಿಕ ಸಮೀಕ್ಷೆ ನಡೆದಿಲ್ಲ. ನೆರೆಯಿಂದಾಗಿ ಮನೆ ಬಿದ್ದು ಹಾನಿ: 13 ಮನೆಗಳು ವಾಸಕ್ಕೆ ಯೋಗ್ಯ ಇಲ್ಲದಂತೆ ನೆಲಸಮವಾಗಿದ್ದವು. 157 ಮನೆ ತೀವ್ರ ಹಾನಿಯಾಗಿವೆ. 969 ಮನೆ ಭಾಗಶಃ ಹಾನಿಯಾಗಿವೆ. 43 ಜಾನುವಾರು ಪ್ರಾಣ ಕಳೆದುಕೊಂಡಿವೆ. ಜೀವ ಹಾನಿಯಾದವರಿಗೆ ಪರಿಹಾರ ವಿತರಿಸಲಾಗಿದೆ. ನೆರೆ ಸಂತ್ರಸ್ತರಾದ 1547 ಜನರಿಗೆ ತಲಾ 10 ಸಾವಿರ ರೂ.ದಂತೆ 154.7 ಲಕ್ಷ ರೂ. ವಿತರಿಸಲಾಗಿದೆ.
ರಸ್ತೆ ಹಾನಿ: ಗ್ರಾಮೀಣ, ರಾಜ್ಯ ಹೆದ್ದಾರಿ ಸೇರಿ 1541 ಕಿಮೀ ರಸ್ತೆ ಹಾಳಾಗಿದೆ. 24667 ಲಕ್ಷ ರೂ. ಮೊತ್ತದ ರಸ್ತೆ ಹಾನಿಯಾಗಿದೆ. 276 ಸೇತುವೆ ಹಾಳಾಗಿವೆ.
5439 ಲಕ್ಷ ರೂ. ಸೇತುವೆಗಳಿಂದ ಹಾನಿಯಾಗಿದೆ. 1086.35 ಹೆಕ್ಟೇರ್ ಕೃಷಿ ಭೂಮಿ ಹಾನಿಗೆ ತುತ್ತಾಗಿದೆ. 499.35 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಪ್ರವಾಹದಿಂದ 37 ಗ್ರಾಮಗಳು ತೊಂದರೆಗೆ ಒಳಗಾಗಿವೆ. 1615 ಜನರನ್ನು ನೆರೆ, ಪ್ರವಾಹದಿಂದ ರಕ್ಷಿಸಲಾಗಿದೆ.