Advertisement

ಬಿಬಿಎಂಪಿಯಲ್ಲಿ 3500 ಕೋಟಿ ತೆರಿಗೆ ಹಣ ಲೂಟಿ

11:38 AM Feb 21, 2017 | Team Udayavani |

ಬೆಂಗಳೂರು: “ಬಿಬಿಎಂಪಿ ವ್ಯಾಪ್ತಿಯಲ್ಲಿ ತೆರಿಗೆದಾರಿಂದ ಸಂಗ್ರಹಿಸಿರುವ ಅಂದಾಜು 3,500 ಕೋಟಿ ರೂ. ಹಣ ದುರುಪಯೋಗವಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು,” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆಗ್ರಹಿಸಿದ್ದಾರೆ.

Advertisement

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಟೌನ್‌ಹಾಲ್‌ ಬಳಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, “ಹಣ ದುರುಪಯೋಗದ ಕುರಿತು ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆಯಲಾಗುವುದು. ಅಲ್ಲದೆ, ದಾಖಲೆಗಳನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ ತನಿಖೆಗೆ ಆಗ್ರಹಿಸಲಾಗುವುದು,” ಎಂದು ಹೇಳಿದರು.

“ಕಳೆದ ಮೂರು ವರ್ಷಗಳಿಂದ ಏಳು ಲಕ್ಷ ತೆರಿಗೆದಾರರಿಂದ 3,500 ಕೋಟಿ ರೂ. ಮೊತ್ತವನ್ನು ಸಂಗ್ರಹಿಸಲಾಗಿದೆ. ಆದರೆ, ಆ ಹಣ ಪಾಲಿಕೆಗೆ ಸಂದಾಯವಾಗಿಲ್ಲ. 
ತೆರಿಗೆ ಸಂಗ್ರಹಿಸಿದ್ದಕ್ಕೆ ನಾಗರಿಕರಿಗೆ ರಸೀದಿ ನೀಡಲಾಗಿದೆ. ಈ ಹಣ ಎಲ್ಲಿ ಹೋಯಿತು? ಹಗರಣದ ದಾಖಲೆಗಳನ್ನು ಪಾಲಿಕೆಯ ಬಿಜೆಪಿ ಸದಸ್ಯರಿಗೆ ನೀಡಲಾಗುವುದು. ಪಾಲಿಕೆ ಸಭೆಯಲ್ಲಿ ದಾಖಲನೆಗಳನ್ನು ಪ್ರದರ್ಶಿಸಿ ಹೋರಾಟ ನಡೆಸುವಂತೆ ಸೂಚನೆ ನೀಡಲಾಗುವುದು,” ಎಂದು ತಿಳಿಸಿದರು.

“ಬ್ಯಾಂಕ್‌ ಖಾತೆಗಳಲ್ಲಿ ಸಂಗ್ರಹವಾದ ತೆರಿಗೆ ಹಣವನ್ನು ಡಿಮ್ಯಾಂಡ್‌ ಡ್ರಾಫ್ಟ್ ಮತ್ತು ಚೆಕ್‌ಗಳ ಮೂಲಕ ಡ್ರಾ ಮಾಡಲಾಗಿದೆ. ಆ ಡಿಡಿ ಮತ್ತು ಚೆಕ್‌ ಸಂಖ್ಯೆಗಳು ನನ್ನ ಬಳಿ ಇವೆ. ಸಂಗ್ರಹವಾದ ತೆರಿಗೆ ಮತ್ತು ಪಾಲಿಕೆಗೆ ಸಂದಾಯವಾದ ಮೊತ್ತದ ಕುರಿತು ಬ್ಯಾಂಕ್‌ನಿಂದ ಮಾಹಿತಿ ತರಿಸಿಕೊಳ್ಳಬೇಕು. ಆ ಮಾಹಿತಿ ಆಧರಿಸಿ ಸರ್ಕಾರ ತನಿಖೆ ನಡೆಸಬೇಕು,” ಎಂದು ಬಿಎಸ್‌ವೈ ಒತ್ತಾಯಿಸಿದ್ದಾರೆ. 

ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಎಸ್‌.ಸುರೇಶ್‌ಕುಮಾರ್‌, ಅರವಿಂದ ಲಿಂಬಾವಳಿ, ಬಿ.ಎನ್‌.ವಿಜಯಕುಮಾರ್‌, ವೈ.ಎ.ನಾರಾಯಣಸ್ವಾಮಿ, ಎಸ್‌.ಮುನಿರಾಜು, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಎಸ್‌.ರಘು, ಎಲ್‌.ಎ.ರವಿಸುಬ್ರಮಣ್ಯ, ಎಂ.ಸತೀಶ್‌ ರೆಡ್ಡಿ, ಎಂ.ಕೃಷ್ಣಪ್ಪ, ನಗರ ಜಿಲ್ಲಾಧ್ಯಕ್ಷ ಪಿ.ಎನ್‌.ಸದಾಶಿವ, ಬೆಂಗಳೂರು ನಗರ ಘಟಕದ ಅಧ್ಯಕ್ಷ ಎಸ್‌.ಮುನಿರಾಜು ಮತ್ತಿತರರು ಇದ್ದರು. 

Advertisement

ಪಾಲಿಕೆ ಏನು ಸತ್ತು ಹೋಗಿದೆಯೇ?
ಮಾಜಿ ಡಿಸಿಎಂ ಆರ್‌.ಅಶೋಕ್‌ ಮಾತನಾಡಿ, “ಬಿಬಿಎಂಪಿ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆ ಮೂಲಕ ಸಾವಿರಾರು ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ನಡೆಸಲಾಗಿದೆ. ಈ ಮೂಲಕ ಹಣ ಲೂಟಿ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕೆಲಸ ಮಾಡಿಸುವುದಾದರೆ ಪಾಲಿಕೆ ಏನು ಸತ್ತುಹೋಗಿದೆಯೇ?” ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next