ಕುಷ್ಟಗಿ: ತಾಲೂಕಿನ ಕೊರಡಕೇರಾ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ವಾಂತಿ-ಬೇಧಿ ಕಾಣಿಸಿಕೊಂಡಿದ್ದು, 35ಕ್ಕೂ ಅಧಿಕ ಜನರು ಅಸ್ವಸ್ಥಗೊಂಡಿದ್ದಾರೆ.
ವಾಂತಿ ಬೇಧಿಯಿಂದ 18 ಜನ ಅಸ್ವಸ್ಥರಾಗಿ ದಾಖಲಾದ ಹಿನ್ನೆಲೆಯಲ್ಲಿ ಚಳಗೇರಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಶರಣು ನೇತೃತ್ವದಲ್ಲಿ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಮನೆ ಮನೆಗೆ ತೆರಳಿ, ವಾಂತಿ-ಬೇಧಿ ಉಲ್ಭಣಿಸದಂತೆ ಮನೆ ಮನೆಗೆ ಮಾತ್ರೆ, ಒಆರ್‌ಎಸ್ ತಲುಪಿಸಿದರಲ್ಲದೇ ಕುದಿಸಿ, ಆರಿಸಿದ ಶುದ್ಧ ನೀರನ್ನೇ ಕುಡಿಯುವಂತೆ ಸಲಹೆ ನೀಡುತ್ತಿದ್ದಾರೆ.
ಕುಷ್ಟಗಿ ತಾಲೂಕು ಆಸ್ಪತ್ರೆಯಲ್ಲಿ 18, ಕೊರಡಕೇರಾದಲ್ಲಿ 17 ಜನ ಸಕಾಲಿಕವಾಗಿ ಚಿಕಿತ್ಸೆ ಪಡೆದಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.
ತಿಪ್ಪೆಗುಂಡಿಯಲ್ಲಿ ಪೈಪ್‌ಲೈನ್ ಸೋರಿಕೆ?: ಕೊರಡಕೇರಾದಲ್ಲಿ ವಾಂತಿ ಬೇಧಿ ಪ್ರಕರಣ ಹೆಚ್ಚಾಗಲು ತಿಪ್ಪೆಗುಂಡಿಯಲ್ಲಿರುವ ಪೈಪ್‌ಲೈನ್ ಸೋರಿಕೆಯೇ ಕಾರಣ ಎಂದು ಶಂಕಿಸಲಾಗುತ್ತಿದೆ. ಬೇಸಿಗೆ ಹಿನ್ನೆಲೆಯಲ್ಲಿ ಇಲ್ಲಿನ ತೆರೆದ ಬಾವಿಗೆ ಖಾಸಗಿಯವರಿಂದ ಕೊಳವೆಬಾವಿಯಿಂದ ಪಡೆದ ನೀರನ್ನು ತುಂಬಿಸಲಾಗುತ್ತಿದ್ದು, ಆರಂಭದಲ್ಲಿ ತೆರೆದ ಬಾವಿಯ ನೀರನ್ನು ಸೇವಿಸಿದ್ದರಿಂದ ಜನ ಅಸ್ವಸ್ಥರಾಗಿದ್ದಾರೆಂದು ಶಂಕೆ ವ್ಯಕ್ತಪಡಿಸಲಾಗಿದೆ.
Advertisement
ಚಳಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕೊರಡಕೇರಾ ಗ್ರಾಮದ ತಳವಗೇರಾ ರಸ್ತೆಯ ಹೊಸೂರು ಓಣಿಯಲ್ಲಿ ಕಳೆದ ವಾರದಿಂದ ಕೆಲವರಿಗೆ ವಾಂತಿ-ಬೇಧಿ ಪ್ರಕರಣ ಕಾಣಿಸಿಕೊಂಡಿದ್ದು, ಜನರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಸೋಮವಾರ ವಾಂತಿ ಬೇಧಿ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಆತಂಕಗೊಂಡ ಜನರು ಕುಷ್ಟಗಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ.
Related Articles
Advertisement
ವೈದ್ಯರ ತಂಡ ತೆರೆದ ಬಾವಿ ನೀರು ಹಾಗೂ ನಳಗಳ ಮೂಲಕ ಜನರು ಸಂಗ್ರಹಿಸಿದ ನೀರನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ತೆರೆದ ಬಾವಿ ನೀರು ಕುಡಿಯಲು ಬಳಸದಿರಲು ಎಚ್ಚರಿಸಲಾಗಿದೆ.
ನಿರುಪಯುಕ್ತ ಆರ್‌ಒ: ಗ್ರಾಪಂ ಕೇಂದ್ರಸ್ಥಾನವಾಗಿರುವ ಕೊರಡಕೇರಾದಲ್ಲಿ ಗ್ರಾಮೀಣ ನೀರು, ನೈರ್ಮಲ್ಯ ವಿಭಾಗದ ಎರಡು ಶುದ್ಧ ನೀರಿನ ಘಟಕ (ಆರ್‌ಒ)ಗಳಿದ್ದರೂ ನಿರುಪಯುಕ್ತವಾಗಿದ್ದು ಇದ್ದು ಇಲ್ಲದಂತಿವೆ. ಶುದ್ಧ್ದ ನೀರಿನ ಘಟಕಗಳಿಗೆ ಯಂತ್ರಗಳನ್ನು ಜೋಡಿಸಲಾಗಿದ್ದರೂ ಶುರು ಮಾಡದಿರುವುದಕ್ಕೆ ಗ್ರಾಪಂ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ತೆರೆದಬಾವಿಯ ನೀರನ್ನು ಕುಡಿಯಲು ಬಳಸುವುದಿಲ್ಲ ಎಂದು ಗ್ರಾಮಸ್ಥರು ಹೇಳಿದ ಮೇಲೆ, ತೆರೆದ ಬಾವಿಗೆ ಖಾಸಗಿ ಕೊಳವೆಬಾವಿಯಿಂದ ನೀರು ಪೂರೈಸಲಾಗುತ್ತಿತ್ತು. ತಿಪ್ಪೆಗುಂಡಿಯಲ್ಲಿ ಪೈಪ್‌ಲೈನ್ ಸೋರಿಕೆ ಪತ್ತೆ ಹಚ್ಚಿ, ಹೊಸ ಪೈಪ್‌ಲೈನ್ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ.
• ನಾಗರತ್ನ ಪಿಡಿಒ, ಕೊರಡಕೇರಾ
ಕೊರಡಕೇರಾದಲ್ಲಿ ತಿಪ್ಪೆಗುಂಡಿಯಲ್ಲಿ ಸೋರಿಕೆ ಹಿನ್ನೆಲೆಯಲ್ಲಿ ವಾಂತಿ ಬೇಧಿ ಪ್ರಕರಣಗಳಾಗಿದ್ದು, ಕೂಡಲೇ ಸರಿಪಡಿಸಲು ಪಿಡಿಒ ಅವರಿಗೆ ಸೂಚಿಸಲಾಗಿದೆ. ಚಳಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಆರೋಗ್ಯ ಸಹಾಯಕಿಯರು ಕೊರಡಕೇರಾದಲ್ಲಿ ಮೊಕ್ಕಾಂ ಹೂಡಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
• ಡಾ|ಆನಂದ ಗೋಟೂರು,ತಾಲೂಕು ಆರೋಗ್ಯ ವೈದ್ಯಾಧಿಕಾರಿ, ಕುಷ್ಟಗಿ