ತರಹೇವಾರಿ ದೋಸೆಗಳನ್ನು ತಯಾರಿಸುವ ದೋಸಾ ಕ್ಯಾಂಪ್‌ಗಳು ಬೆಂಗಳೂರಿನಲ್ಲಿ ಹಲವಾರು ಸಿಗುತ್ತವೆ, ಆದರೆ ನಮ್ಮ ಮನೆಗಳಲ್ಲಿ ಅಜ್ಜಿ ಕಾವಲಿಯಲ್ಲಿ ತಯಾರಿಸುತ್ತಿದ್ದ ದೋಸೆಗಳ ರುಚಿಯ ಮುಂದೆ ಅವ್ಯಾವುವೂ ನಿಲ್ಲವು ಎನ್ನುವುದು ಒಪ್ಪತಕ್ಕಂಥ ಮಾತು. ಆದರೆ ಈಗ ಅದೂ ಸಿಗುತ್ತದೆ ಎಂದರೆ ನಂಬುತ್ತೀರಾ? ನಂಬಿಕೆ ಬರುತ್ತಿಲ್ಲ ಎಂದರೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಬಸ್‌ಸ್ಟಾಂಡ್ ರಸ್ತೆಯಲ್ಲಿ ಸ್ವಲ್ಪ ಮುಂದೆ ಬಂದು ಶ್ರೀಕಂಠೇಶ್ವರ ದೇವಸ್ಥಾನದ ಮುಂದುಗಡೆಯಿರುವ ದರ್ಶಿನಿಗೆ ಭೇಟಿ ಕೊಡಬಹುದು. ಅಲ್ಲಿನ ಮೆನುನಲ್ಲಿರುವ 35 ದೋಸೆಗಳಲ್ಲಿ ನಿಮಗಿಷ್ಟದ ದೋಸೆ ಆರ್ಡರ್ ಮಾಡಿ, ತಿಂದು ನಮ್ಮ ಮಾತನ್ನು ಪರೀಕ್ಷಿಸಬಹುದು. ಅಂದ ಹಾಗೆ, ಈ ದರ್ಶಿನಿ ಹೆಸರು “ಕಾವಲಿ’.
ಆದರೆ ಹೊಸತನ ಎನ್ನುವುದು ದರ್ಶಿನಿ ಹೆಸರಲ್ಲಿ ಮಾತ್ರವೇ ಇಲ್ಲ, ತಿಂಡಿ ತಿನಿಸುಗಳಲ್ಲೂ ಇವೆ. ಗುಣಮಟ್ಟ ಮತ್ತು ರುಚಿಯನ್ನು ಕಾಪಾಡಿಕೊಳ್ಳುವುದು ತಮ್ಮ ಪ್ರಮುಖ ಆದ್ಯತೆಯೆನ್ನುವುದು ಐಟಿ ಉದ್ಯೋಗ ಬಿಟ್ಟು ಆಹಾರ ಉದ್ಯಮಕ್ಕೆ ಕಾಲಿಟ್ಟಿರುವ “ಕಾವಲಿ’ ಒಡತಿ ಮೀನಾರವರ ಮಾತು.
ಎಲ್ಲೋ ಬೆರಳೆಣಿಕೆಯಷ್ಟು ಕಡೆಗಳಲ್ಲಿ ಸಿಗಬಹುದಾದ ಮೇಥಿ ದೋಸೆ ಇಲ್ಲಿನ ಸ್ಪೆಷಾಲಿಟಿ. ದೋಸೆ ಮಾತ್ರವಲ್ಲದೆ ರವಾಇಡ್ಲಿ, ಶ್ಯಾವಿಗೆ, ಪುಲಾವ್, ಬೋಂಡಾ ಸೂಪ್, ವಡಾ ಇತರ ಜನಪ್ರಿಯ ಖಾದ್ಯಗಳು. ಅವಲ್ಲದೆ ಜಾಮೂನ್, ಜಿಲೇಬಿ, ಬೌರಿಂಗ್ ಕುಲ್ಫಿ ಮುಂತಾದ ಸಿಹಿ ಖಾದ್ಯಗಳ ರುಚಿಯನ್ನೂ ಸವಿಯಬಹುದು. ಬೆಳಿಗ್ಗೆ 7ರಿಂದ 12.30ರವರೆಗೆ ತೆರೆದಿರುವ ಕಾವಲಿ ಮತ್ತೆ ತೆರೆಯುವುದು ಸಂಜೆ. ಅಲ್ಲಿನ ಕೆಲಸಗಾರರಿಗೆ ಹೊರೆಯಾಗದಂತೆ ಸಂತಸದಿಂದ ಕೆಲಸ ಮಾಡಲು ಸುಲಭವಾಗುವಂತೆ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಅಲ್ಲದೆ ಸಂಜೆಯ ಅವಧಿಗೆ ಮೆನು ಸಿದ್ಧಪಡಿಸಿಟ್ಟುಕೊಳ್ಳಲು ಕೊಂಚ ಸಮಯ ದೊರೆಯುವುದರಿಂದ ಈ ವ್ಯವಸ್ಥೆ. ಇಲ್ಲಿನ ತಿಂಡಿ ತಿನಿಸುಗಳನ್ನು ಫ್ರೆಶ್ ಆಗಿಯೇ ತಯಾರಿಸಲಾಗುತ್ತದೆ ಯಾವುದನ್ನೂ ಉಳಿಸಿಕೊಳ್ಳುವುದಿಲ್ಲ. ರುಚಿಗಾಗಿ, ಶುಚಿ ಮತ್ತು ಗುಣಮಟ್ಟದೊಂದಿಗೆ ರಾಜಿಯಾಗುವ ಹೊಟೇಲುಗಳ ನಡುವೆ “ಕಾವಲಿ’ ವಿಶೇಷವಾಗಿ ನಿಲ್ಲುತ್ತದೆ.
ಒಮ್ಮೆ ಕಾವಲಿಯಲ್ಲಿ ಮೆಂತ್ಯೆ ಸೊಪ್ಪಿನ ದೋಸೆಯನ್ನು ತಿಂದ ವ್ಯಕ್ತಿಯೊಬ್ಬರು ಹತ್ತು ವರ್ಷಗಳ ಹಿಂದೆ ಇದೇ ಸ್ವಾದದ, ಇಂಥದೇ ರುಚಿಯ ಮೆಂತ್ಯೆ ಸೊಪ್ಪಿನ ದೋಸೆಯನ್ನು ಜಯನಗರದಲ್ಲಿ ತಿಂದದ್ದನ್ನು ಮೆಲುಕು ಹಾಕಿದ್ದರಂತೆ. ಆ ಹೊಟೇಲು ಮುಚ್ಚಿದ್ದರಿಂದ ಆವತ್ತಿನಿಂದ ಆ ಸ್ವಾದದ ರುಚಿಗಾಗಿ ತಾವು ಹೋದೆಡೆಯಲ್ಲೆಲ್ಲಾ ಹುಡುಕುತ್ತಿದ್ದರಂತೆ. ಹತ್ತು ಹದಿನೈದು ವರ್ಷಗಳ ಹಿಂದೆ “ಕಾವಲಿ’ ಶುರುವಾಗುವ ಮೊದಲು ಮೀನಾರವರು ಜಯನಗರ 8ನೇ ಬ್ಲಾಕಿನಲ್ಲಿ “ಶೃಂಗಾರ್ ದೋಸಾ ಪ್ಯಾಲೇಸ್’ಅನ್ನು ನಡೆಸುತ್ತಿದ್ದರು. ಆಮೇಲೆ ವಿಷಯ ಗೊತ್ತಾಗಿದ್ದೇನೆಂದರೆ ಅಲ್ಲೇ ಆ ವ್ಯಕ್ತಿ ದೋಸೆಯನ್ನು ತಿಂದಿದ್ದು. ಇದೇ ಆ ದೋಸೆ ಎಂದು ತಿಳಿದ ಮೇಲೆ ಅವರು ತುಂಬಾ ಸಂತಸ ಪಟ್ಟರಂತೆ. ಈ ರೀತಿ ದರ್ಶಿನಿಯ ಖಾಯಂ ಗಿರಾಕಿಗಳಾದವರು ಅನೇಕರು. ಪಿ.ಇ.ಎಸ್ ಕಾಲೇಜಿನಲ್ಲಿ ಬಿ.ಸಿ.ಎ ಓದುತ್ತಿರುವ ಸಾಗರದ ವಿದ್ಯಾರ್ಥಿನಿ ಪೂಜಾ ಅಂಥವರಲ್ಲೊಬ್ಬರು. ಅವರು ದಿನಾ ಬೆಳಿಗ್ಗೆ ವಾಕಿಂಗ್ ನಂತರದ ಟೀ ಸಹಿತ, ತಿಂಡಿ, ರಾತ್ರಿ ಊಟಕ್ಕೆ ಬರುವುದು ಇಲ್ಲಿಗೇ. ಸೋಡಾ ಬೆರೆಸದ, ಫ್ಲೇವರ್‌ಗಳನ್ನು ಬಳಸದ, ತಾಜಾ ತರಕಾರಿ, ಅಡುಗೆ ಸಾಮಗ್ರಿಗಳನ್ನು ಬಳಸಿ ಗ್ರಾಹಕರ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ತಯಾರಿಸುವುದರಿಂದಲೇ ತಾನು ಇಲ್ಲಿಗೆ ಕಳೆದ ಎರಡು ಮೂರು ವರ್ಷಗಳಿಂದ ಬರುತ್ತಿದ್ದೇನೆ ಎನ್ನುತ್ತಾರೆ ಪೂಜಾ.
ಮಸಾಲಾ ದೋಸೆ, ರವೆ ದೋಸೆ, ನೀರು ದೋಸೆ, ನೀರುಳ್ಳಿ ದೋಸೆ, ಕ್ಯಾಪ್ಸಿಕಂ ದೋಸೆ, ಚಿಲ್ಲಿ ದೋಸೆ ಪೈನಾಪಲ್ ದೋಸೆ ಇಲ್ಲಿನ ದೋಸೆ ಮೆನುನಲ್ಲಿರುವ ಕೆಲ ಬಗೆಗಳು. ಟೀ, ಕಾಫಿಯೂ ಇಲ್ಲಿನ ಸ್ಪೆಷಾಲಿಟಿ. ಇತ್ತೀಚಿಗಷ್ಟೇ ಬೆಲ್ಲದ ಟೀಯನ್ನು ಮೆನುನಲ್ಲಿ ಸೇರಿಸಿದ್ದಾರೆ. ಇನ್ನಷ್ಟು ಬಗೆಗಳ ಬಗ್ಗೆ ತಿಳಿದುಕೊಳ್ಳಬೇಕೆಂದಲ್ಲಿ ನೇರವಾಗಿ ಕಾವಲಿಗೇ ಹೋಗಿ ರುಚಿಕರ ದೋಸೆ ಮೆಲ್ಲುತ್ತಾ ಅಲ್ಲಿನ ಮೆನು ಕಾರ್ಡಿನ ಮೇಲೆ ಹಾಗೇ ಒಮ್ಮೆ ಕಣ್ಣಾಡಿಸಬಹುದು. ತಟ್ಟೆ ಮೇಲಿನ ದೋಸೆ ಖಾಲಿಯಾಗುವ ಮುನ್ನ ಮುಂದಿನ ಆರ್ಡರ್ ಸಿದ್ಧಪಡಿಸಿಟ್ಟುಕೊಳ್ಳುವುದನ್ನು ಮರೆಯದಿರಿ.
ಎಲ್ಲಿದೆ?- ಕತ್ರಿಗುಪ್ಪೆ
ರಜಾದಿನ- ಮಂಗಳವಾರ
ವೇಳೆ- ಬೆಳಗ್ಗೆ 7ರಿಂದ 12.30 ಮತ್ತು ಸಂಜೆ 5ರಿಂದ ರಾತ್ರಿ 9.30