ಸಿಂಧನೂರು: ಪ್ರತಿಯೊಂದು ಕುಟುಂಬಕ್ಕೆ ವಾರ್ಷಿಕ 100 ದಿನಗಳ ಉದ್ಯೋಗ ಖಾತ್ರಿಪಡಿಸುವ ಯೋಜನೆ ಇದ್ದರೂ ಸೌಲಭ್ಯದಿಂದ ಹೊರಗುಳಿದ ಜನರನ್ನು ಪತ್ತೆ ಹಚ್ಚಿ, ಅವರಿಗೆ ಕೂಲಿ ಕಲ್ಪಿಸುವುದಕ್ಕಾಗಿ ರಾಜ್ಯದಲ್ಲಿ ರೋಜಗಾರ್ ಮಿತ್ರರ ಮೊರೆ ಇಡಲಾಗಿದೆ.
ರಾಜ್ಯದಲ್ಲಿರುವ ತಾಂಡಾಗಳಲ್ಲಿನ ಜನರಿಗೆ ನರೇಗಾದಡಿ ಕೆಲಸ, ವೈಯಕ್ತಿಕ ಸೌಲಭ್ಯ ಒದಗಿಸುವ ಉದ್ದೇಶದಿಂದ ರೋಜಗಾರ್ ಮಿತ್ರರನ್ನು ನೇಮಿಸಲಾಗುತ್ತಿದೆ. 250ರಿಂದ 300 ಕುಟುಂಬಗಳಿಗೆ ಒಬ್ಬರಂತೆ ಸಿಬ್ಬಂದಿ ನಿಯೋಜಿಸಲಿದ್ದು, ಅವರು ಖುದ್ದು ಮನೆ-ಮನೆಗೆ ತೆರಳಿ ಅವರಿಗೆ ಕೆಲಸ ಖಾತ್ರಿಪಡಿಸಬೇಕಿದೆ. ಉದ್ಯೋಗಖಾತ್ರಿ ಅಧಿನಿಯಮ ಬಂದ ಬಳಿಕವೂ ಸೌಲಭ್ಯದಿಂದಲೇ ದೂರ ಉಳಿದಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಈ ಕ್ರಮ ಅನುಸರಿಸಲಾಗಿದೆ.
ಸಮೀಕ್ಷೆಯಲ್ಲಿ ಬಯಲು: ಸಾಮಾಜಿಕ ಪರಿಶೋಧನೆ ನಿರ್ದೇಶನಾಲಯ ರಾಜ್ಯದ 14 ಜಿಲ್ಲೆಗಳ 111 ತಾಂಡಾಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಹಲವು ಸಂಗತಿ ಬೆಳಕಿಗೆ ಬಂದಿದ್ದವು. 7,514 ಕುಟುಂಬಗಳನ್ನು ಗಮನಿಸಿದಾಗ 2,604 (ಶೇ.35) ಕುಟುಂಬ ಈವರೆಗೂ ಉದ್ಯೋಗ ಚೀಟಿಯನ್ನೇ ಹೊಂದಿಲ್ಲವೆಂಬುದು ಗೊತ್ತಾಗಿದೆ.
ಉದ್ಯೋಗ ಚೀಟಿ ಹೊಂದಿದ್ದರೂ ಅವುಗಳು ತಮ್ಮಲ್ಲಿ ಇಲ್ಲವೆಂದು ಶೇ.50 ಜನ ಹೇಳಿಕೊಂಡಿದ್ದರು. ಸಮೀಕ್ಷೆಯಲ್ಲಿ 14,868 ಜನರ ಪೈಕಿ 7,617 ಜನ ಉದ್ಯೋಗಖಾತ್ರಿ ದಿನಗೂಲಿ ಲಭ್ಯವಾಗುವ ಬಗ್ಗೆಯೇ ಗೊತ್ತಿಲ್ಲವೆಂದು ತಿಳಿಸಿದ್ದರು. ನರೇಗಾ ಕುರಿತು ಮಾಹಿತಿ ನೀಡಿದಾಗ ಶೇ.75 ಜನ ಕೆಲಸ ಮಾಡಲು ಸಿದ್ಧವೆಂದು ಹೇಳಿಕೊಂಡ ಹಿನ್ನೆಲೆಯಲ್ಲಿ ಅವರಿಗೆ ಕಲ್ಪಿಸಲು ರೋಜಗಾರ್ ಮಿತ್ರರನ್ನು ನೇಮಿಸಲಾಗುತ್ತಿದೆ.
ಆರು ತಿಂಗಳ ಅಭಿಯಾನ: ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಕೊಟ್ಟಿರುವ ಮಾಹಿತಿ ಪ್ರಕಾರ, ಸದ್ಯ ರಾಜ್ಯದ 300 ತಾಂಡಾಗಳಿಗೆ ಸಿಬ್ಬಂದಿ ನೇಮಿಸಲಾಗುತ್ತಿದೆ. ನೇಮಕವಾದ ರೋಜಗಾರ್ ಮಿತ್ರರು ಆರು ತಿಂಗಳ ಕಾಲ ನರೇಗಾದ ಅಭಿಯಾನ ನಡೆಸಬೇಕು. ಉದ್ಯೋಗ ಖಾತ್ರಿ ಅರಿವು
ಮೂಡಿಸುವುದು, ಉದ್ಯೋಗ ಚೀಟಿಗಳ ವಿತರಣೆ, ಅಕುಶಲ ಕೆಲಸ ಕಲ್ಪಿಸುವುದು, ವೈಯಕ್ತಿಕ ಸೌಲಭ್ಯ ಕಲ್ಪಿಸುವುದು ಈ ಸಿಬ್ಬಂದಿ ಮೇಲಿನ ಜವಾಬ್ದಾರಿ. ತಾಪಂ ಕಾರ್ಯನಿರ್ವಾಹಕ ಅ ಧಿಕಾರಿ ನೇತೃತ್ವದ ಸಮಿತಿ ಆಯ್ಕೆ ಪ್ರಕ್ರಿಯೆ ನಡೆಸಿ, ಗುರುತಿಸಿದ ಕ್ಯಾಂಪ್‌ಗ್ಳಿಗೆ ರೋಜಗಾರ್ ಮಿತ್ರರನ್ನು ಕಳಿಸಲಿದೆ. ಮಾ.15ರೊಳಗಾಗಿ ಈ ಅಭಿಯಾನ ರಾಜ್ಯದಲ್ಲಿ ಚುರುಕು ಪಡೆಯಲಿದೆ.
*ಯಮನಪ್ಪ ಪವಾರ