ಕಲಬುರಗಿ: ನಗರದಲ್ಲಿ ಸಿದ್ಧರಾಮೇಶ್ವರ ಭವನ ನಿರ್ಮಾಣಕ್ಕೆ 3.5 ಕೋಟಿ ರೂ. ಅನುದಾನ ನೀಡಲಾಗಿದ್ದು, ಸಮಾಜದ ಮುಖಂಡರು ಸಮರ್ಪಕ ನಿವೇಶನ ಒದಗಿಸಿ ಭವನ ನಿರ್ಮಿಸಿಕೊಳ್ಳಬೇಕೆಂದು ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ನಗರದ ವಡ್ಡರ ಗಲ್ಲಿಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ವಡ್ಡರ ಗಲ್ಲಿಯಲ್ಲಿರುವ ಮಠದ ಪಕ್ಕದಲ್ಲಿ ಸಮಾಜದವರಿಗಾಗಿ ಸಣ್ಣ ಪ್ರಮಾಣದ ಸಮುದಾಯ ಭವನ ನಿರ್ಮಾಣಕ್ಕೆ ಲೋಕಸಭೆ ಸದಸ್ಯರ ನಿಧಿಯಿಂದ ಒಟ್ಟು 10 ಲಕ್ಷ ರೂ. ಗಳನ್ನು ನೀಡಲಾಗುವುದು. ಸದ್ಯ 7 ಲಕ್ಷ ರೂ. ಗಳನ್ನು ತಕ್ಷಣ ಬಿಡುಗಡೆ ಮಾಡಿ, ಮುಂದಿನ ವಾರ್ಷಿಕ ನಿಧಿಯಲ್ಲಿ 3 ಲಕ್ಷ ರೂ.ಗಳನ್ನು ನೀಡಲಾಗುವುದು ಎಂದರು.
ನಗರದಲ್ಲಿ ಬಡವರಿಗೆ ಬೋರವೆಲ್ ಹಾಕಿ ನೀರು ಒದಗಿಸುವುದಕ್ಕಿಂತ ಕಡಿಮೆ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ದೊರಕಿಸಲು ತಲಾ 15 ಲಕ್ಷ ರೂ. ಗಳಲ್ಲಿ ಬುದ್ಧ ನಗರ ಮತ್ತು ಅಶೋಕ ನಗರಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಲಾಗಿದೆ. ತಲಾ 15 ಲಕ್ಷ ರೂ.ಗಳಲ್ಲಿ ವಿದ್ಯಾನಗರ ಹಾಗೂ ವಡ್ಡರ ಗಲ್ಲಿಯಲ್ಲಿ ನಿರ್ಮಿಸಲಾಗುವ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಘಟಕಗಳನ್ನು ನಿರ್ವಹಣೆ ಮಾಡುವ ಮೂಲಕ ಕಡಿಮೆ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಪಡೆಯಬೇಕು ಎಂದರು.
ಶುದ್ಧ ಕುಡಿಯುವ ನೀರಿನ ಘಟಕಗಳಿಂದ 5 ರೂ.ದಲ್ಲಿ 25 ಲೀಟರ್ ಶುದ್ಧ ಕುಡಿಯುವ ನೀರು ದೊರೆಯುತ್ತದೆ. ಇದರಿಂದಾಗಿ ನೀರಿನಿಂದ ಬರುವ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು. ಎಲ್ಲ ಘಟಕಗಳಲ್ಲಿ ನೀರು ಬಳಕೆ ಮಾಡುವುದನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ತಿಳಿಸಿದ ಸಂಸದರು ನಗರದ ಒಳ ರಸ್ತೆಗಳಲ್ಲಿ ತುಂಬಾ ತಗ್ಗುಗಳಿವೆ ಅವುಗಳನ್ನು ಪಾಲಿಕೆಯಿಂದ ಮುಚ್ಚುವ ಕ್ರಮ ಕೈಗೊಳ್ಳಬೇಕು. ಬಡವರ ಓಣಿಗಳಲ್ಲಿ ಸ್ವತ್ಛತೆ ಕಾಪಾಡಬೇಕು ಎಂದರು.
ಜಿಲ್ಲೆಯ ಮತದಾರರ ಆಶೀರ್ವಾದದಿಂದ ಲೋಕಸಭಾ ಸದಸ್ಯನಾಗಿ ಲೋಕಸಭೆಯಲ್ಲಿ ಎಲ್ಲ ಸಂಸದರ ಮನಗೆದ್ದು ಈ ಭಾಗಕ್ಕೆ ಕಲಂ 371(ಜೆ) ನೀಡುವ ಮೂಲಕ ಅಭಿವೃದ್ಧಿ ಬಾಗಿಲನ್ನು ತೆರೆಯಲಾಗಿದೆ. ಇದನ್ನು ಯಾವುದೇ ಜಾತಿ ಜನಾಂಗಕ್ಕೆ ಸೀಮಿತಗೊಳಿಸದೇ ಇಡೀ ಹೈದ್ರಾಬಾದ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಬಳಸಿಕೊಳ್ಳಲಾಗುತ್ತಿದೆ.
371(ಜೆ)ನೇ ಕಲಂದಿಂದಾಗಿ ಈ ಭಾಗಕ್ಕೆ ದೊರೆತಿರುವ ಶಿಕ್ಷಣ ಮತ್ತು ನೌಕರಿಯಲ್ಲಿ ಮೀಸಲಾತಿಯಿಂದಾಗಿ ಇಂದು ಬಡ ಕುಟುಂಬದ ಯುವಕರು ಸಾಕಷ್ಟು ನೌಕರಿ ಮತ್ತು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಡಾ| ಬಾಬಾಸಾಹೇಬ ಅಂಬೇಡ್ಕರ್ ರಚಿಸಿರುವ ದೇಶದ ಸಂವಿಧಾನ ಬದಲಿಸಲು ಕೆಲವು ಜನ ಪ್ರಯತ್ನಿಸುತ್ತಿದ್ದಾರೆ. ಇದು ನೆರವೇರದಂತೆ ಎಲ್ಲರೂ ಗಟ್ಟಿಯಾಗಿ ನಿಲ್ಲಬೇಕು. ಸಂವಿಧಾನ ಬದಲಾವಣೆಯಲ್ಲಿ ತೊಡಗಿರುವವರಿಗೆ ಮುಂದಿನ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕು ಎಂದರು.
ಮುಖಂಡರಾದ ಜಗದೇವ ಗುತ್ತೇದಾರ, ಅಲ್ಲಮಪ್ರಭು ಪಾಟೀಲ, ಭಾಗನಗೌಡ ಸಂಕನೂರ, ಮಾರುತಿ ಮಾಲೆ, ಆಲಂ ಖಾನ್, ತಿಮ್ಮಣ್ಣ ಒಡೆಯರಾಜ್, ಭೀಮರಡ್ಡಿ ಪಾಟೀಲ ಕುರಕುಂದಾ, ಪಾಲಿಕೆ ಸದಸ್ಯರಾದ ಲತಾ ರವಿ ರಾಠೊಡ, ಪರಶುರಾಮ ನಸಲವಾಯಿ, ಪರಶುರಾಮ ಎಸ್. ಹೊಳ್ಕರ್, ನಾಗೇಂದ್ರ ದಂಡಪ್ಪ ಗುಂಡಗುರ್ತಿ, ಲೋಕೋಪಯೋಗಿ ಪ್ರಕಾಶ ಶ್ರೀಹರಿ, ಅಮೀನ್ ಮುಖಾರ ಮತ್ತಿತರರು ಪಾಲ್ಗೊಂಡಿದ್ದ.