Advertisement
ಉಡುಪಿ: ನಗರದಲ್ಲಿ ಸ್ವಂತ ಸೂರು ಇಲ್ಲದ ಕೊಳೆಗೇರಿ ಹಾಗೂ ಬಡತನ ರೇಖೆಗಿಂತ ಕೆಳಗಿರುವ ನಿವಾಸಿಗಳಿಗೆ ಮನೆ ಹೊಂದುವ ಕನಸು ಸದ್ಯದಲ್ಲಿ ನನಸಾಗಲಿದೆ. ನಗರಸಭಾ ವ್ಯಾಪ್ತಿಯ ಹೆರ್ಗ ಗ್ರಾಮದಲ್ಲಿ ಜಿ (ನೆಲ ಅಂತಸ್ತು) ಪ್ಲಸ್ 3 ಫ್ಲ್ಯಾಟ್ ನಿರ್ಮಾಣ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭವಾಗಲಿದೆ.
ಸುಮಾರು 8.22 ಎಕ್ರೆ ಜಾಗದಲ್ಲಿ 460 ಮನೆಗಳು ತಲೆಯೆತ್ತಲಿದ್ದು, ಒಟ್ಟು 19 ಬ್ಲಾಕ್‌ಗಳನ್ನು ಹೊಂದಿದೆ. ಒಂದು ಬ್ಲಾಕ್‌ನಲ್ಲಿ ತಲಾ 24 ಮನೆಗಳು ನಿರ್ಮಾಣಗೊಳ್ಳುತ್ತವೆ. ಜಿ ಪ್ಲಸ್ 3 ಮಾದರಿಯಲ್ಲಿ ಮನೆಗಳ ನಿರ್ಮಾಣ ಕಾರ್ಯ ನಡೆಯಲಿದೆ. ತಳಮಹಡಿ ಮತ್ತು ಎರಡು ಮಹಡಿಗಳಿರಲಿವೆ. ಪ್ರತಿ ಮಹಡಿಯಲ್ಲಿ 8 ಮನೆಗಳಿರುತ್ತವೆ. ಒಂದು ಮನೆಯ ಒಟ್ಟು ವಿಸ್ತೀರ್ಣ ಸುಮಾರು 350 ಚ. ಅಡಿ, ಪ್ರತಿ ಮನೆಯಲ್ಲಿ ತಲಾ ಒಂದು ಹಾಲ…, ಅಡುಗೆ ಕೋಣೆ, ಮಲಗುವ ಕೋಣೆ, ಸ್ನಾನದ ಕೋಣೆ, ಶೌಚಾಲಯ ಜತೆಗೆ ರಸ್ತೆ, ಚರಂಡಿ ಸೌಲಭ್ಯ ಇರಲಿದೆ.
Related Articles
ಇದೇ ಜಾಗದಲ್ಲಿ ಎರಡನೇ ಹಂತದಲ್ಲಿ 260 ಮನೆಗಳು ನಿರ್ಮಾಣವಾಗಲಿವೆ. ಈ ಬಗ್ಗೆ ಸಚಿವರಲ್ಲಿ ಅನುಮೋದನೆ ದೊರೆತ ಬಳಿಕ ಮುಂದಿನ ಕೆಲಸ ಪ್ರಾರಂಭಿಸಲಾಗುತ್ತದೆ.
ಸಣ್ಣಕ್ಕಿಬೆಟ್ಟಿನಲ್ಲಿ 1.12 ಎಕ್ರೆ ಜಾಗ, ಸುಬ್ರಹ್ಮಣ್ಯ ನಗರದಲ್ಲಿ 0.63 ಎಕ್ರೆ ಜಾಗದಲ್ಲಿ ಮನೆಯಿಲ್ಲದವರಿಗೆ ಫ್ಲ್ಯಾಟ್ ನಿರ್ಮಿಸಿ ಕೊಡಲಾಗುತ್ತದೆ. ಇನ್ನಷ್ಟೇ ಡಿಪಿಆರ್ ಸಿದ್ಧವಾಗಬೇಕಾಗಿದೆ. ಒಟ್ಟು ಸುಮಾರು 1000 ಮನೆ ನಿರ್ಮಾಣ ಗುರಿಯಿದೆ.
Advertisement
ಷರತ್ತುಗಳು– ಫಲಾನುಭವಿಗಳು 20 ವರ್ಷಗಳ ಕಾಲ ಮಾರಾಟ ಮಾಡುವಂತಿಲ್ಲ.
– ಬ್ಯಾಂಕ್ ಸಾಲ ಮುಗಿಯದೆ ಮನೆಯ ಮೇಲೆ ಮತ್ತೆ ಸಾಲ ಮಾಡಲು ಸಾಧ್ಯವಿಲ್ಲ.
– ಮನೆ ಬಾಡಿಗೆಗೆ ನೀಡಲು ಅನುಮತಿ ಇಲ್ಲ. ಇದೇ ಜಾಗದಲ್ಲಿ ಎರಡನೇ ಹಂತದಲ್ಲಿ ಸುಮಾರು 260 ಮನೆಗಳು ನಿರ್ಮಾಣವಾಗವೆ.ಇಲ್ಲಿ ಗಾರ್ಡನ್, ಅಂಗನವಾಡಿ,ಶಾಲೆ ಸೇರಿದಂತೆ ವಿವಿಧ ಅಭಿವೃದ್ಧಿಗೆ ಅಗತ್ಯವಿರುವ ಜಾಗವನ್ನು ಕಾಯ್ದಿರಿಸಲಾಗಿದೆ. ಪ್ರತಿ ಮನೆಗೆ ತಗಲುವ ವೆಚ್ಚ 7.42 ಲ.ರೂ.
ಇಲ್ಲಿ ನಿರ್ಮಾಣವಾಗುವ ಪ್ರತಿ ಮನೆಗೆ 7.42 ಲ.ರೂ. ವೆಚ್ಚ ತಗಲುತ್ತಿದೆ. ಇದಕ್ಕೆ ಕೇಂದ್ರ ಸರಕಾರ 1.50 ಲ.ರೂ., ರಾಜ್ಯ ಸರಕಾರದಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ 2 ಲ.ರೂ., ಇತರ ವರ್ಗದ ಫಲಾನುಭವಿಗಳಿಗೆ 1.20 ಲಕ್ಷ ರೂ.ಲಭ್ಯವಾಗಲಿದೆ. ಉಳಿದಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ವರ್ಗದವರಿಗೆ ನಗರಸಭೆ ಅನುದಾನ ಯೋಜನಾ ವೆಚ್ಚದ 74,299 ರೂ. ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಫಲಾನುಭವಿಗಳು 60,000 ರೂ., ಇತರೆ ವರ್ಗದವರು 90,000 ರೂ. ಭರಿಸಬೇಕಾಗುತ್ತದೆ. ಹಣಕ್ಕೆ ಸ್ಲಂ ಬೋರ್ಡ್ ವತಿಯಿಂದಲೇ ಬ್ಯಾಂಕ್‌ನಿಂದ ಸಾಲ ತೆಗೆಸಿ ಕೊಡುವ ಸೌಲಭ್ಯವಿದೆ. ಸ್ವಯಂ ಸಂದರ್ಶನ
ಬಡತನ ರೇಖೆಗಿಂತ ಕೆಳಗಿರುವ ನಿವೇಶನ ರಹಿತ ಎಲ್ಲ ಬಡ ಜನರಿಗೆ ಶಾಶ್ವತ ಸೂರು ಕಲ್ಪಿಸುವ ನಿಟ್ಟಿನಲ್ಲಿ 460 ಕುಟುಂಬಗಳಿಗೆ ಶಾಶ್ವತ ಸೂರಿನ ಜತೆಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಜಿ ಪ್ಲಸ್ ತ್ರೀ ಮಾದರಿಯಲ್ಲಿ ಫ್ಲಾ$Âಟ್ ನಿರ್ಮಿಸಲಾಗುತ್ತದೆ. ಫಲಾನುಭವಿಗಳನ್ನು ಸ್ವಯಂ ಸಂದರ್ಶನ ತೆಗೆದುಕೊಂಡು ಆಯ್ಕೆ ಮಾಡಲಾಗಿದೆ.
-ರಘುಪತಿ ಭಟ್, ಶಾಸಕರು, ಉಡುಪಿ. ಈಗಾಗಲೇ 770 ಅರ್ಜಿ
ನಗರಸಭೆ ವ್ಯಾಪ್ತಿಯಲ್ಲಿ ನಿವೇಶ ರಹಿತರಿಂದ ಸುಮಾರು 770 ಅರ್ಜಿಗಳುಬಂದಿವೆ. ನಗರದ ವಿವಿಧ ಭಾಗಗಳಲ್ಲಿ ಈಗಾಗಲೇ ಭೂಮಿಯನ್ನು ಗುರುತಿಸಲಾಗಿದೆ. ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ದೊರಕುತ್ತಿದಂತೆ ಮುಂದಿನ ದಿನದಲ್ಲಿ 1,000 ಮನೆಗಳ ನಿರ್ಮಾಣದ ಗುರಿ ಇದೆ. ಅಂಗವಿಕಲ ಸದಸ್ಯರನ್ನು ಹೊಂದಿರುವ ಕುಟುಂಬಕ್ಕೆ ನೆಲ ಮಾಳಿಗೆಯ ಮನೆ ನೀಡಲಾಗುತ್ತದೆ.
-ಆನಂದ ಸಿ. ಕಲ್ಲೋಳಿಕರ್, ಪೌರಾಯುಕ್ತ ನಗರಸಭೆ ಸ್ವಂತ ಮನೆ ಸಿಕ್ಕಿದೆ
ಕಳೆದ ಅನೇಕ ವರ್ಷಗಳಿಂದ ಇಂದಿರಾ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ಬಾಡಿಗೆ ತುಂಬುವುದರಲ್ಲಿ ಜೀವನ ಮುಗಿಯುತ್ತದೆ ಎನ್ನುವ ಭಯವಿತ್ತು. ಇದೀಗ ಸ್ಥಳೀಯಾಡಳಿತ ಸೂರಿಲ್ಲದವರಿಗೆ ಮನೆ ನೀಡಲು ಮುಂದಾಗಿದೆ. ಇದರಿಂದ ನಮ್ಮಂತಹ ನೂರಾರು ಜನರಿಗೆ ಸ್ವಂತ ಮನೆ ಸಿಕ್ಕಿದೆ. ಬಾಡಿಗೆ ಕಟ್ಟುವ ಹಣದಲ್ಲಿ (ಬ್ಯಾಂಕ್ ಇಎಂಐ) ಮನೆ ನಮ್ಮದಾಗುತ್ತಿದೆ.
-ವಾಣಿಶ್ರೀ ದೇವಾಡಿಗ, ಫಲಾನುಭವಿ.