Advertisement

33 ಕೆವಿ ಸಬ್ ಸ್ಟೇಷನ್ ಹಳೆ ತಂತಿ ಬದಲಾವಣೆ 

12:28 PM Aug 27, 2018 | Team Udayavani |

ಸುಳ್ಯ : ಸುಳ್ಯ-ಪುತ್ತೂರು ರಸ್ತೆಯ ಕೌಡಿಚ್ಚಾರಿನಿಂದ ಸುಳ್ಯ ತನಕ ತಂತಿ ಎಳೆಯಲು ಬರೋಬ್ಬರಿ 500ಕ್ಕೂ ಮಿಕ್ಕಿ ವಿದ್ಯುತ್‌ ಕಂಬಗಳು ಕಾಯುತ್ತಿವೆ. ಪುತ್ತೂರಿನಿಂದ ಸುಳ್ಯದ 33 ಕೆ.ವಿ. ಸಬ್‌ ಸ್ಟೇಷನ್‌ಗೆ ವಿದ್ಯುತ್‌ ಪೂರೈಕೆ ಆಗುತ್ತಿರುವ ವಿದ್ಯುತ್‌ ತಂತಿ ಬದಲಾಯಿಸುವ ಕಾಮಗಾರಿ ಹಲವು ತಿಂಗಳ ಹಿಂದೆ ಕಾರ್ಯಾರಂಭಗೊಂಡಿತ್ತು. ಕೆಲಸ ಪೂರ್ಣಕ್ಕೆ ಹಲವು ವಿಘ್ನಗಳು ಅಡ್ಡಿ ಉಂಟು ಮಾಡಿವೆ.

Advertisement

ಏನಿದು ಯೋಜನೆ?
ವಿದ್ಯುತ್‌ ಬವಣೆಯಿಂದ ತತ್ತರಿಸುವ ತಾಲೂಕುಗಳ ಪೈಕಿ ಸುಳ್ಯಕ್ಕೆ ಅಗ್ರ ಸ್ಥಾನವಿದೆ. 15 ವರ್ಷಗಳ ಹಿಂದೆ ಮಂಜೂರಾತಿಗೊಂಡ 110 ಕೆ.ವಿ. ಸಬ್‌ಸ್ಟೇಷನ್‌ ನಿರ್ಮಾಣ ಸರ್ವೆ ಕಾರ್ಯದಲ್ಲಿ ಪರದಾಡುತ್ತಿದೆ. ಬೇಸಗೆಯಲ್ಲಿ ಒಂದಷ್ಟು ಪ್ರತಿಭಟನೆ ನಡೆಸಿ, ಮಳೆಗಾಲದಲ್ಲಿ ಮರೆತು ಬಿಡುವ ಜಾಯಮಾನದ ಕಾರಣದಿಂದ ಇಲ್ಲಿ ಬಹು ನಿರೀಕ್ಷಿತ ಯೋಜನೆ ಅನುಷ್ಠಾ ನದ್ದು ವರ್ಷ – ವರ್ಷ ನೆನೆಗುದಿಗೆ ಬೀಳುತ್ತಿರುವುದೇ ಆಗಿದೆ.

ಸುಳ್ಯದ 33 ಕೆ.ವಿ. ಸಬ್‌ಸ್ಟೇಷನ್‌ ಈಗ ವಿದ್ಯುತ್‌ ಹರಿಸುವ ಸಾಧನ. ಪುತ್ತೂರಿನ 110 ಕೆ.ವಿ. ಸಬ್‌ಸ್ಟೇಷನಿಂದ ಇಲ್ಲಿಗೆ ವಿದ್ಯುತ್‌ ಪೂರೈಕೆ ಆಗಿ, ಅನಂತರ ಗೃಹಬಳಕೆ, ಕೃಷಿ ಇತರೆ ಬಳಕೆದಾರರಿಗೆ ವಿತರಿಸಲಾಗುತ್ತದೆ. ತೀರಾ ಹಳೆಯ ತಂತಿ ಆಗಿರುವ ಕಾರಣ ಪುತ್ತೂರಿನಿಂದ ಸುಳ್ಯಕ್ಕೆ ಹರಿಯುವ ವಿದ್ಯುತ್‌ ಮೆ.ವ್ಯಾಟ್‌ನಲ್ಲಿ ಸೋರಿಕೆ ಉಂಟಾಗುತಿತ್ತು. ಹಾಗಾಗಿ ಹಳೆ ತಂತಿ ಬದಲಾವಣೆಗೆ ಆಗ್ರಹ ಕೇಳಿ ಬಂದಿತ್ತು. ಸಂಘ- ಸಂಸ್ಥೆಗಳ ಪ್ರತಿಭಟನೆ ಬಳಿಕ ಕಾಮಗಾರಿ ಶುರುವಾಗಿತ್ತು.

ಕಾಮಗಾರಿ ಸ್ಥಿತಿ
ಮೆಸ್ಕಾಂ ನೀಡಿದ ಮಾಹಿತಿ ಅನ್ವಯ 22 ಕಿ.ಮೀ. ಉದ್ದದ ಈ ಕಾಮಗಾರಿಗೆ 1.5 ಕೋಟಿ ರೂ. ಮಿಕ್ಕಿ ಖರ್ಚು ತಗಲುತ್ತದೆ. ಪುತ್ತೂರು 110 ಕೆ.ವಿ. ಸಬ್‌ಸ್ಟೇಷನ್‌ನಿಂದ 33 ಕೆ.ವಿ. ಸಬ್‌ಸ್ಟೇಷನ್‌ ತನಕ ಹಳೆ ತಂತಿ ಬದಲಾಯಿಸುವ ಜತೆಗೆ ಹೊಸ ಕಂಬ ಅಳವಡಿಸುವ ಯೋಜನೆ ರೂಪಿಸಲಾಗಿದೆ. ಮೆಸ್ಕಾಂ ನೋಂದಾಯಿತ ಖಾಸಗಿ ಗುತ್ತಿಗೆ ಸಂಸ್ಥೆ ಕಾಮಗಾರಿ ನಿರ್ವಹಿಸುತ್ತಿದೆ. ಐದು ತಿಂಗಳ ಹಿಂದೆ ಕಾಮಗಾರಿ ಪ್ರಾರಂಭಗೊಂಡಿದೆ. 526 ಕಂಬಗಳ ಪೈಕಿ 500 ಕಂಬ ಅಳವಡಿಸಲಾಗಿದೆ. 14 ಕಡೆ ಗಳಲ್ಲಿ ಟವರ್‌ ನಿರ್ಮಾಣಕ್ಕೆ ಕಂಬ ಅಳವಡಿಕೆ ಪ್ರಗತಿಯಲ್ಲಿದೆ. ಕೌಡಿಚ್ಚಾರಿನಿಂದ 1 ಕಿ.ಮೀ. ದೂರ ತಂತಿ ಎಳೆಯಲಾಗಿದೆ. ಕಂಬ ಅಳವಡಿಸುವ ಕಾಮಗಾರಿ ಶೇ. 95ರಷ್ಟು ಪೂರ್ಣವಾಗಿದೆ. ತಂತಿ ಎಳೆಯುವ ಕಾಮಗಾರಿ ಬಾಕಿ ಉಳಿದಿದೆ.

ಮರ, ಗೆಲ್ಲು ತೆರವು ಬಾಕಿ!
ಲೈನ್‌ ಹಾದು ಹೋಗುವ ಮಾರ್ಗದಲ್ಲಿ ಅಪಾಯಕಾರಿ ಮರ, ಗೆಲ್ಲುಗಳು ಇರುವ ಕಾರಣ ಅಲ್ಲಿ ಕಾಮಗಾರಿ ಸಾಗಲು ಅಡ್ಡಿಯಾಗಿದೆ. ಸುಳ್ಯ ವಲಯ ಅರಣ್ಯ ವ್ಯಾಪ್ತಿಯಲ್ಲಿ ತೆರವಾಗಿದೆ. ಪುತ್ತೂರು ವಲಯ ಅರಣ್ಯ ವ್ಯಾಪ್ತಿಯಲ್ಲಿ ತೆರವು ಕೆಲಸ ಆರಂಭ ಆಗಿಲ್ಲ. ಮರ ತೆರವಿಗೆ ಸಂಬಂಧಿಸಿ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದೆ. ಆ ಕಾಮಗಾರಿ ಮುಗಿಸಿದ ತತ್‌ಕ್ಷಣ ತಂತಿ ಎಳೆಯಬಹುದು. ಆನೆಗುಂಡಿ ಅರಣ್ಯ ಭಾಗದಲ್ಲಿ ಬಾಕಿ ಇರುವ 20 ಕಂಬಗಳನ್ನು ಅಳವಡಿಸಬಹುದು ಅನ್ನುವುದು ಮೆಸ್ಕಾಂ ಅಧಿಕಾರಿಗಳ ಹೇಳಿಕೆ.

Advertisement

ಗಡುವಿನ ಅವಧಿ ಕಳೆಯಿತು
ಹಳೆ ತಂತಿ ಬದಲಾವಣೆ ಕಾಮಗಾರಿ ವಿಳಂಬದ ಬಗ್ಗೆ ಬಿಜೆಪಿ ಶಾಸಕರ ಉಪಸ್ಥಿತಿಯಲ್ಲಿ ಪ್ರತಿಭಟನೆ ನಡೆಸಿ 50 ದಿನಗಳ ಗಡುವು ನೀಡಿತ್ತು. ಅದು ಮುಗಿದು ಎರಡು ತಿಂಗಳು ಕಳೆದಿದೆ. ಕಾಮಗಾರಿ ಮುಗಿದಿಲ್ಲ. ಕಾಮಗಾರಿ ನಡೆಯುತ್ತಿದ್ದ ಸಂದರ್ಭ ಇಬ್ಬರು ಕಾರ್ಮಿಕರು ವಿದ್ಯುತ್‌ ಅವಘಡಕ್ಕೆ ಬಲಿಯಾಗಿ ಕೆಲ ದಿನಗಳ ಕಾಲ ಮತ್ತೆ ಸ್ಥಗಿತಗೊಂಡಿತ್ತು. ಈಗ ಅರಣ್ಯ ಇಲಾಖೆಯ ಸರದಿ. ಅದು ಮುಗಿದ ಬಳಿಕ ಇನ್ನೇನು ಕಾದಿದೆ ಅನ್ನುವುದನ್ನು ಕಾದು ನೋಡಬೇಕಿದೆ.

ಅರಣ್ಯವೇ ಅಡ್ಡಿ !
ಬಹು ಅಗತ್ಯದ 110 ಕೆ.ವಿ.ಸಬ್‌ ಸ್ಟೇಷನ್‌ ನಿರ್ಮಾಣಕ್ಕೂ ಅರಣ್ಯ ಭೂಮಿಯಲ್ಲಿ ಲೈನ್‌ ಹಾದು ಹೋಗುವುದರಿಂದ ಇಲಾಖೆ ಒಪ್ಪಿಗೆ ಸೂಚಿಸಿಲ್ಲ. ಪರ್ಯಾಯ ಭೂಮಿ ಒದಗಣನೆ ಪ್ರಸ್ತಾವನೆ ಹಂತದಲ್ಲಿದೆ. ಅನುಷ್ಠಾನಕ್ಕೆ ಬಂದ ಬಳಿಕವೇ ಗ್ರೀನ್‌ ಸಿಗ್ನಲ್‌ ದೊರೆಯಲಿದೆ. ಈಗ 33 ಕೆ.ವಿ.ಸಬ್‌ಸ್ಟೇಷನ್‌ ಹೊಸ ತಂತಿ ಎಳೆಯುವ ಕಾಮಗಾರಿಗೆ ಅರಣ್ಯ ಭೂಮಿ ತೊಡಕಾಗಿದೆ. 

ಕಾಮಗಾರಿ ಪ್ರಗತಿ
ಪುತ್ತೂರು ವಿಭಾಗದ ಅರಣ್ಯ ಇಲಾಖೆಗೆ ಪತ್ರ ಬರೆದು ಮರ, ಗೆಲ್ಲು ತೆರವಿಗೆ ಮನವಿ ಮಾಡಲಾಗಿದೆ. ಆ ಕೆಲಸ ಆಗದೆ ತಂತಿ ಎಳೆಯಲು ಸಾಧ್ಯವಿಲ್ಲ. ಉಳಿದಂತೆ ಕಂಬ ಅಳವಡಿಕೆ ಬಹುತೇಕ ಪೂರ್ಣವಾಗಿದೆ. ಟವರ್‌ ನಿರ್ಮಾಣ ಪ್ರಗತಿಯಲ್ಲಿದೆ. 
 - ಹರೀಶ್‌,
    ಎ.ಇ, ಸುಳ್ಯ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next