ಕೊಪ್ಪಳ: ಜಿಪಂ ಅ ಧೀನದಡಿ ಬರುವ ಕೆಲ ಇಲಾಖೆಗಳಲ್ಲಿ ಬರೊಬ್ಬರಿ 3,384 ಹುದ್ದೆಗಳು ಖಾಲಿಯಿವೆ. ಸರ್ಕಾರ ಹುದ್ದೆಗಳ ಭರ್ತಿಗೆ ಮುಂದಾಗುತ್ತಿಲ್ಲ. ಹೀಗಾಗಿ ಇರುವ ನೌಕರ ವರ್ಗದಿಂದಲೇ ಸರ್ಕಾರ ಕೆಲಸ ಮಾಡಿಸಿಕೊಳ್ಳುತ್ತಿದ್ದು ನೌಕರರಿಗೂ ಕೆಲಸದ ಹೊರೆ ಹೆಚ್ಚಾಗಿದೆ. ಇದರಿಂದ ಅಭಿವೃದ್ಧಿಗೂ ಹಿನ್ನಡೆಯಾಗುತ್ತಿದೆ ಎನ್ನುವ ಮಾತು ಕೇಳಿ ಬಂದಿದೆ.
ಹೌದು.. ಕೊಪಳ ಜಿಲ್ಲೆ ಮೊದಲೇ ಅಭಿವೃದ್ಧಿಯಲ್ಲಿ ಆಮಗತಿಯಲ್ಲಿ ನಡೆಯುತ್ತಿದೆ. ಸರ್ಕಾರದ ಪ್ರತಿಯೊಂದು ಯೋಜನೆಯನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಜವಾಬ್ದಾರಿ ಸರ್ಕಾರಿ ನೌಕರನ ಮೇಲಿದೆ. ಹೀಗಾಗಿ ನೌಕರರ ಹುದ್ದೆಗಳೇ ಬಹುಪಾಲು ಖಾಲಿಯಿದ್ದು, ಸರ್ಕಾರದ ಯೋಜನೆಗಳ ಅನುಷ್ಠಾನ ಮಾಡುವುದಾದರೂ ಹೇಗೆ? ಜನರಿಗೆ ಯೋಜನೆಗಳು ಸಕಾಲಕ್ಕೆ ತಲುಪುವುದಾದರೂ ಹೇಗೆ? ಸಾಧ್ಯ ಎನ್ನುವ ಪ್ರಶ್ನೆ ಪ್ರಜ್ಞಾವಂತರನ್ನು ಕಾಡುತ್ತಿದೆ.
3384 ಹುದ್ದೆಗಳು ಭರ್ತಿಯಾಗಿಲ್ಲ: ಜಿಪಂ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಇಲಾಖೆಗಳಲ್ಲಿ ಸರ್ಕಾರದಿಂದ ಎ,ಬಿ,ಸಿ ಹಾಗೂ ಡಿ ಗ್ರೂಪ್‌ನಡಿ 12,269 ಹುದ್ದೆಗಳು ಮಂಜೂರಾಗಿವೆ. ಈ ಪೈಕಿ 8885 ಹುದ್ದೆಗಳಲ್ಲಿ ನೌಕರರು ಕಾರ್ಯ ನಿರ್ವಹಿಸುತ್ತಿದ್ದರೆ, ಬರೊಬ್ಬರಿ 3384 ಹುದ್ದೆಗಳು ಖಾಲಿಯಿವೆ. ಇದರಲ್ಲಿ ಎ ಗ್ರುಪ್ ನಲ್ಲಿ 150 ಹುದ್ದೆ ಖಾಲಿಯಿದ್ದರೆ, ಬಿ ಗ್ರುಪ್‌ನಲ್ಲಿ 166, ಸಿ ಗ್ರುಪ್‌ನಲ್ಲಿ 2293 ಹಾಗೂ ಡಿ ಗ್ರುಪ್‌ನಲ್ಲಿ 775 ಹುದ್ದೆಗಳು ಖಾಲಿಯಿವೆ. ಖಾಲಿಯಾದ ಹುದ್ದೆಯಲ್ಲಿ ಕೆಲವು ನಿವೃತ್ತಿ ಬಳಿಕ ಸ್ಥಾನ ಖಾಲಿಯಿದ್ದು, ಇನ್ನೂ ಭರ್ತಿಯಾಗಿಲ್ಲ. ಇನ್ನೂ ಕೆಲವು ಹುದ್ದೆಗಳಲ್ಲಿದ್ದ ನೌಕರರು ವರ್ಗಾವಣೆಯಾಗಿದ್ದಾರೆ. ಹಾಗಾಗಿ ಆ ಸ್ಥಾನಗಳು ಖಾಲಿಯಿವೆ. ಇದಲ್ಲದೇ, ಸರ್ಕಾರವೂ ಸಹಿತ ಕೆಲವು ಹುದ್ದೆಗಳನ್ನು ಭರ್ತಿ ಮಾಡಿಯೇ ಇಲ್ಲ.
ಇರುವ ನೌಕರರಿಗೆ ಎಲ್ಲವೂ ಹೊರೆ: ಜಿಪಂ ಅಧೀನದ ವಿವಿಧ ಇಲಾಖೆಗಳಲ್ಲಿ ಎ ಹಾಗೂ ಬಿ ಗ್ರುಪ್ ಹುದ್ದೆಗಳಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದರೆ, ಉಳಿದಂತೆ ಸಿ ಹಾಗೂ ಡಿ ದರ್ಜೆಯ ನೌಕರರೇ ಹೆಚ್ಚು ಕೆಲಸ ನಿರ್ವಹಿಸಬೇಕಾಗುತ್ತದೆ. ಯಾವುದೇ ಇಲಾಖೆಯಲ್ಲಿ ದಾಖಲೆಗಳ ವರ್ಗಾವಣೆ ಹಾಗೂ ನಿರ್ವಹಣೆಗೆ ಈ ಎರಡು ಗ್ರುಪ್ ಹುದ್ದೆಗಳೇ ಹೆಚ್ಚು ಬೇಕಾಗುತ್ತದೆ. ಆದರೆ ಸರ್ಕಾರ ಅವುಗಳನ್ನೇ ಭರ್ತಿ ಮಾಡಿಲ್ಲ. ಹೀಗಾಗಿ ಇರುವ ನೌಕರರೇ ಪ್ಯೂನ್ ನಿಂದ ಹಿಡಿದು ಮೇಲು ಹಂತದ ಕೆಲಸವನ್ನೂ ಅವರೇ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.
ಹಲವು ಹುದ್ದೆಗಳು ಪ್ರಭಾರಿಗಳು: ಜಿಪಂನಲ್ಲಿನ ಎ ಹಾಗೂ ಬಿ ಗ್ರುಪ್ ನಲ್ಲಿನ ಹುದ್ದೆಗಳಲ್ಲೂ ಹಲವು ಹುದ್ದೆಗಳು ಖಾಲಿಯಿದ್ದು, ಅವುಗಳ ನಿರ್ವಹಣೆಗೆ ಪ್ರಭಾರಿ ಜವಾಬ್ದಾರಿ ನೀಡಲಾಗಿದೆ. ಹಲವು ನಿಗಮ, ಮಂಡಳಿಯಲ್ಲಿ ಪ್ರಭಾರಿಗಳೇ ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಕೆಳ ಹಂತದ ಅಧಿಕಾರಿಗಳಿಗೆ ಮೇಲಿಂದ ಮೇಲೆ ಒತ್ತಡ ಬೀಳುತ್ತಿದೆ. ಇದರಿಂದ ನೌಕರರ ವರ್ಗದ ನೆಮ್ಮದಿ ಹಾಳಾಗುತ್ತಿದೆ. ಕೊಪ್ಪಳ ಜಿಲ್ಲೆ ಮೊದಲೇ ವಿವಿಧ ರಂಗದಲ್ಲಿ ಹಿಂದುಳಿ ದಿದೆ. ಇದರಲ್ಲಿ ಹುದ್ದೆಗಳ ಖಾಲಿಯಿವೆ. ಇದರ ಮಧ್ಯೆಯೂ ಪ್ರಗತಿ ಸಾಧಿಸುವುದು ಕಷ್ಟದ ಕೆಲಸ ಎನ್ನುತ್ತಿದ್ದಾರೆ ಹಿರಿಯ ಅನುಭವಿ ಅಧಿಕಾರಿಗಳು. ನಾಲ್ವರು ಮಾಡಬೇಕಾದ ಕೆಲಸವನ್ನು ಒಬ್ಬನೆ ನಿರ್ವಹಿಸುವುದು ಹೇಗೆ ಸಾಧ್ಯ ಎನ್ನುತ್ತಿದ್ದಾರೆ.
ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಲಿ: ಖಾಲಿ ಹುದ್ದೆಗಳ ಭರ್ತಿ ಜಿಲ್ಲಾ ಹಂತದಲ್ಲಿ ನಡೆಯಲ್ಲ. ಅದೇನಿದ್ದರೂ ಸರ್ಕಾರದ ಮಟ್ಟದಲ್ಲಿ ನಡೆಯಬೇಕಾದ ಪ್ರಕ್ರಿಯೆ. ಆದರೆ ಸರ್ಕಾರದ ಮಟ್ಟದಲ್ಲಿ ಹುದ್ದೆಗಳ ಖಾಲಿ ಇರುವ ಕುರಿತು ಸರಿಯಾದ ಚರ್ಚೆ ನಡೆಯಲ್ಲ. ಬರಿ ಅಭಿವೃದ್ಧಿ ಮಾಡಬೇಕೆನ್ನುವ ಮಾತನ್ನಾಡುತ್ತಾರೆ. ಸದನದಲ್ಲಿ, ಸರ್ಕಾರದ ಮಟ್ಟದಲ್ಲಿ ಹೊಸ ಹುದ್ದೆಗಳಿಗೆ ಅಧಿಸೂಚನೆ ಕರೆಯುವ ಬದಲು ಇರುವ ಹುದ್ದೆಗಳನ್ನೇ ಸಕಾಲಕ್ಕೆ ಭರ್ತಿ ಮಾಡಿದರೆ ಅಭಿವೃದ್ಧಿಯಲ್ಲಿ ಏರಿಳಿತವನ್ನಾದರೂ ಕಾಣಲು ಸಾಧ್ಯವಿದೆ ಎನ್ನುತ್ತಿದ್ದಾರೆ ಪ್ರಜ್ಞಾವಂತ ನಾಗರಿಕರು. ಸರ್ಕಾರದ ಮಟ್ಟದಲ್ಲಿ ಇಂತಹ ಯೋಜನೆ ನಡೆಯಬೇಕಿದೆ. ಸಮಗ್ರ ಚರ್ಚೆಯಾಗಿ ನೌಕರರ ಮೇಲಿರುವ ಕರ್ತವ್ಯದ ಹೊರೆ ಕಡಿಮೆಯಾಗಬೇಕಿದೆ.
ಜಿಪಂ ವ್ಯಾಪ್ತಿಯ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿಯನ್ನು ಸರ್ಕಾರಕ್ಕೆ ಕಾಲ-ಕಾಲಕ್ಕೆ ಕಳಿಸುತ್ತಿದ್ದೇವೆ. ಹುದ್ದೆಗಳ ಭರ್ತಿ ಪ್ರಕ್ರಿಯೆ ಸರ್ಕಾರದ ಮಟ್ಟದಲ್ಲಿ ನಡೆಯಬೇಕಿದೆ. ಸದ್ಯ ಇರುವ ನೌಕರ ವರ್ಗದಿಂದ ಸೇವೆ ಪಡೆಯುತ್ತಿದ್ದೇವೆ. ಇದರಿಂದ ಅಭಿವೃದ್ಧಿಗೆ ಏನೂ ಹಿನ್ನಡೆ ಆಗಲ್ಲ.
. ವೆಂಕಟರಾಜಾ,
ಜಿಪಂ ಸಿಇಒ. ಕೊಪ್ಪಳ
ದತ್ತು ಕಮ್ಮಾರ