ಹೊನ್ನಾಳಿ: 2019-20ನೇ ಸಾಲಿನ ಹೊನ್ನಾಳಿ ಪಟ್ಟಣ ಪಂಚಾಯಿತಿಯ 33.44 ಲಕ್ಷ ರೂ. ಉಳಿತಾಯ ಬಜೆಜ್‌ನ್ನು ಪಟ್ಟಣ ಪಂಚಾಯಿತಿ ಅಡಳಿತಾಧಿಕಾರಿ ಹಾಗೂ ತಹಶೀಲ್ದಾರ್ ತುಷಾರ್ ಬಿ. ಹೊಸೂರು ಮಂಡಿಸಿದರು. ಪಟ್ಟಣ ಪಂಚಾಯಿತಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಆಡಳಿತಾಧಿಕಾರಿಯೊಬ್ಬರು ಬಜೆಟ್ ಮಂಡಿಸಿದಂತಾಗಿದೆ.
ಪಟ್ಟಣ ಪಂಚಾಯಿತಿ ಚುನಾವಣೆ ಮುಗಿದು ಕೆಲ ತಿಂಗಳುಗಳಾದರೂ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಪ.ಪಂ ಸದಸ್ಯರು ಇನ್ನೂ ಪ್ರಮಾಣವಚನ ಸ್ವೀಕರಿಸಿಲ್ಲ, ಹಾಗಾಗಿ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಆಡಳಿತಾಧಿಕಾರಿ ತಹಶೀಲ್ದಾರ್ ತುಷಾರ್ ಬಿ ಹೊಸೂರ ಬಜೆಟ್ ಮಂಡಿಸಿದರು.
2019-20ನೇ ಸಾಲಿಗೆ ಆರಂಭದ ಶಿಲ್ಕು 39.45 ಲಕ್ಷಗಳಿದ್ದು, 8,04,73,500 ರೂ. ಜಮೆ ಹಾಗೂ 8,10,75,000 ಖರ್ಚಿನ ಅಂದಾಜು ಮಾಡಲಾಗಿದೆ. ಹೀಗಾಗಿ 33,44,443 ಉಳಿತಾಯ ಬಜೆಟ್ ಮಂಡಿಸಿದಂತಾಗಿದೆ.
ಆಸ್ತಿ ತೆರಿಗೆ ಮೂಲಕ ರೂ. 70 ಲಕ್ಷ, ಉದ್ದಿಮೆ ಪರವಾನಿಗೆ ಶುಲ್ಕ ರೂ. 2ಲಕ್ಷ, ಅಂಗಡಿ ಮಳಿಗೆಗಳ ಬಾಡಿಗೆಯಿಂದ ರೂ. 60 ಲಕ್ಷ, ಕಟ್ಟಡ ಪರವಾನಿಗೆಯಿಂದ 2.35 ಲಕ್ಷ, ನಿವೇಶನ ಅಭಿವೃದ್ಧಿ ಶುಲ್ಕದಿಂದ ರೂ. 10 ಲಕ್ಷ, ನೀರಿನ ಕರ ವಸೂಲಾತಿಯಿಂದ ರೂ. 30 ಲಕ್ಷ, ಸರ್ಕಾರದಿಂದ ಎಸ್‌ಎಫ್‌ಸಿ ಅಭಿವೃದ್ಧಿ ಅನುದಾನ 74 ಲಕ್ಷ, ಸರ್ಕಾರದ ಇತರೆ ಅನುದಾನ ರೂ. 92ಲಕ್ಷ, ಎಸ್‌ಎಫ್‌ಸಿ ವಿದ್ಯುತ್ ಅನುದಾನ-ಇತರೆ ನಿರ್ದಿಷ್ಟ ಅನುದಾನದಿಂದ ರೂ. 2 ಕೋಟಿ ಸೇರಿದಂತೆ ಎಲ್ಲಾ ಮೂಲಗಳಿಂದ ಒಟ್ಟು ರೂ. 8,04,73,500 ಆದಾಯ ನಿರೀಕ್ಷಿಸಲಾಗಿದೆ.
ರಸ್ತೆ, ಚರಂಡಿ, ಬೀದಿ ದೀಪ, ಅಂಗನವಾಡಿ ಕಟ್ಟಡ, ನೀರು ಸರಬರಾಜು ನಿರ್ವಹಣೆ, ಉದ್ಯಾನವನ ನಿರ್ವಹಣೆ ಹಾಗೂ ದುರಸ್ತಿ, ಘನತ್ಯಾಜ್ಯ ವಿಲೇವಾರಿ, ನೈರ್ಮಲ್ಯ ಕಾಮಗಾರಿ ವಿಭಾಗಕ್ಕೆ ಹೊಸ ಯಂತ್ರೋಪಕರಣ ಖರೀದಿ ಸೇರಿದಂತೆ ಒಟ್ಟು ಖರ್ಚಿಗಾಗಿ ರೂ. 8,10,75,000 ತೆಗೆದಿರಿಸಲಾಗಿದೆ.
ಬಜೆಟ್ ಮಂಡನೆಯ ನಂತರ ಮಾತನಾಡಿದ ಪಪಂ ಆಡಳಿತಾಧಿಕಾರಿ ತುಷಾರ್ ಬಿ. ಹೊಸೂರು, ಕಾರಣಾಂತರಗಳಿಂದ ಚುನಾಯಿತ ಆಡಳಿತ ಮಂಡಳಿ ಅಧಿಕೃತವಾಗಿ ಕಾರ್ಯಾರಂಭ ಮಾಡಿಲ್ಲದಿದ್ದರೂ ಸಾರ್ವಜನಿಕರ, ಜನಪ್ರತಿನಿಧಿಗಳ ಬಜೆಟ್ ಪೂರ್ವಭಾವಿ ಸಭೆ ನಡೆಸಿ ಜನಪರ ಅಂಶಗಳನ್ನು ಒಳಗೊಂಡ ಬಜೆಟ್ ಮಂಡಿಸಲಾಗಿದೆ ಎಂದರು.
ಪಪಂ ಮುಖ್ಯಾಧಿಕಾರಿ ಎಸ್.ಆರ್. ವೀರಭದ್ರಯ್ಯ, ಜನಪ್ರತಿನಿಧಿಗಳಾದ ಓಬಳದಾರ್ ಬಾಬು, ರಂಗಪ್ಪ, ಕೆ.ವಿ. ಶ್ರೀಧರ್, ಧರ್ಮಪ್ಪ, ಸುರೇಶ್, ರಾಜೇಂದ್ರ, ಸವಿತಾ ಮಹೇಶ್ ಹುಡೇದ, ಸುಮಾ ಮಂಜುನಾಥ್, ಉಷಾ, ಬಾವಿಮನೆ ರಾಜಪ್ಪ, ಸಾವಿತ್ರಮ್ಮ ವಿಜೇಂದ್ರಪ್ಪ, ಸುಮಾ ಸತೀಶ್, ಪದ್ಮಪ್ರಶಾಂತ್, ರಂಜಿತ, ಮೈಲಪ್ಪ, ಸಿಬ್ಬಂದಿ ನಾಗೇಶ್, ಚೇತನ್ ಇದ್ದರು.