ವಾಡಿ: ಮಳೆಯಿಂದಾಗಿ ಹೊಳೆಯಲ್ಲಿ ಹರಿಯುತ್ತಿರುವ ಕಲುಷಿತ ನೀರು ಶಾಲೆಯ ಬಿಸಿಯೂಟದಲ್ಲಿ ಬೆರೆತು ಮಕ್ಕಳು ಅಸ್ವಸ್ಥಗೊಂಡ ಪ್ರಕರಣ ಸೋಮವಾರ ಚಿತ್ತಾಪುರ ತಾಲೂಕಿನ ಕೊಲ್ಲೂರ ಕ್ಲಸ್ಟರ್ ವ್ಯಾಪ್ತಿಯ ಕನಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭವಿಸಿದೆ.
ಕುಡಿಯುವ ಶುದ್ಧ ನೀರಿನ ಕೊರತೆಯಿಂದ ಮಕ್ಕಳ ಪೌಷ್ಟಿಕ ಆಹಾರ ಹಳಸಿದ್ದು, ಅಕ್ಷರ ಕಲಿಕೆಗೆ ದಾಖಲಾಗಿರುವ 33 ಮಕ್ಕಳು ವಾಂತಿ, ಬೇಧಿ, ಹೊಟ್ಟೆ ನೋವು ಹಾಗೂ ಕರಳು ಬೇನೆಯಿಂದ ನರಳಾಡಿದ್ದಾರೆ.
ಎಂದಿನಂತೆ ಸೋಮವಾರ ಮಧ್ಯಾಹ್ನ ವಿದ್ಯಾರ್ಥಿಗಳು ಬಿಸಿಯೂಟ ಸೇವಿಸಿದ್ದಾರೆ ಎನ್ನಲಾಗಿದ್ದು, ಸಂಜೆ 3:00 ಗಂಟೆಗೆ ಕೆಲ ಮಕ್ಕಳಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡರೆ, ಇನ್ನೂ ಕೆಲವರು ವಾಂತಿ ಮಾಡಿಕೊಂಡಿದ್ದಾರೆ. ಬಹುತೇಕ ಎಲ್ಲಾ ಮಕ್ಕಳು ಹೊಟ್ಟೆಗೆ ಕೈ ಹಿಡಿದುಕೊಂಡು ನರಳಿದ್ದಾರೆ. ಮಕ್ಕಳಿಗೆ ಏನಾಗುತ್ತಿದೆ ಎಂದು ಶಿಕ್ಷಕರು ಗಾಬರಿಗೊಳ್ಳುತ್ತಿದ್ದಂತೆ ಗ್ರಾಮಸ್ಥರು ಹಾಗೂ ಪೋಷಕರು ಶಾಲೆಗೆ ದೌಡಾಯಿಸಿ ಮಕ್ಕಳ ನೆರವಿಗೆ ಮುಂದಾಗಿದ್ದಾರೆ.
ತೀವ್ರ ಅಸ್ವಸ್ಥಗೊಂಡ ಹತ್ತಾರು ವಿದ್ಯಾರ್ಥಿಗಳನ್ನು ಬೈಕ್‌ಗಳ ಸಹಾಯದಿಂದ ತಕ್ಷಣ ಸಮೀಪದ ಕೊಲ್ಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಗಂಭೀರ ಸ್ಥಿತಿ ಎಂದು ಪರಿಗಣಿಸಿ ಐವರು ವಿದ್ಯಾರ್ಥಿಗಳನ್ನು ವಾಡಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಂದು ದಾಖಲಿಸಿದ್ದಾರೆ.
ಶಿಕ್ಷಕರು ಹಾಗೂ ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಮಕ್ಕಳಿಗೆ ಕೊಲ್ಲೂರು ಮತ್ತು ವಾಡಿ ಆಸ್ಪತ್ರೆಗಳಲ್ಲಿ ಸಕಾಲಿಕ ಚಿಕಿತ್ಸೆ ಕೊಡಿಸಲಾಗಿದ್ದು, ಸಂಜೆ ವೇಳೆಗೆ ಮಕ್ಕಳು ಚೇತರಿಸಿಕೊಂಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಯ ಎಲ್ಲಾ ಮಕ್ಕಳಿಗೂ ಸಾಮೂಹಿಕವಾಗಿ ತಪಾಸಣೆ ನಡೆಸುವ ಮೂಲಕ ವೈದ್ಯರು ಔಷಧ ಮಾತ್ರೆಗಳನ್ನು ನೀಡಿ ಉಪಚಾರ ಮಾಡಿದ್ದಾರೆ.
ಸುದ್ದಿ ತಿಳಿದು ಆಸ್ಪತ್ರೆಗಳಿಗೆ ಭೇಟಿ ನೀಡಿದ ಕ್ಷೇತ್ರಶಿಕ್ಷಣಾಧಿಕಾರಿ ಜಗದೇವಿ ಹತ್ತೂರ, ತಹಶೀಲ್ದಾರ ಅಂಬರೀಶ ಬಿರಾದಾರ, ಅಕ್ಷರ ದಾಸೋಹ ಸಹಾಯಕ ನಿದೇರ್ಶಕ ಪ್ರಕಾಶ ನಾಯ್ಕೋಡಿ, ಡಿವೈಎಸ್‌ಪಿ ಶಂಕರಗೌಡ ಪಾಟೀಲ, ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್‌ಐ ತಿರುಮಲೇಶ ಕುಂಬಾರ, ಬಿಆರ್‌ಸಿ ಮಲ್ಲಿಕಾರ್ಜುನ ಸೇಡಂ, ಸಿಆರ್‌ಪಿ ಸಂಜೀವ್ ಹರಿಜನ್ ಸೇರಿದಂತೆ ಇತರ ಅಧಿಕಾರಿಗಳು ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.
ಕಲುಷಿತ ನೀರು ಬಳಕೆಯಿಂದ ಬಿಸಿಯೂಟ ವಿಷವಾಗಿ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಪ್ರಕರಣಗಳು ಜಿಲ್ಲೆಯ ವಿವಿಧೆಡೆ ವರದಿಯಾಗುತ್ತಿರುವುದು ಸರ್ಕಾರಿ ಶಾಲೆಗಳ ಮಕ್ಕಳ ಪೋಷಕರಲ್ಲಿ ಆತಂಕ ಮೂಡಿಸಿದೆ.
ಬಿಸಿಯೂಟಕ್ಕೆ ಶುದ್ಧ ನೀರನ್ನೇ ಬಳಸಬೇಕು ಎಂದು ಕರವೇ ಅಧ್ಯಕ್ಷ ಸಿದ್ದು ಪೂಜಾರಿ ಆಗ್ರಹಿಸಿದ್ದಾರೆ.