ಹೊಸದಿಲ್ಲಿ: ಶುಕ್ರವಾರದಿಂದ ಬೆಂಗಳೂರಿನಲ್ಲಿ ಆರಂಭವಾಗಲಿರುವ ವನಿತಾ ರಾಷ್ಟ್ರೀಯ ಹಾಕಿ ಶಿಬಿರಕ್ಕೆ 33 ಆಟಗಾರ್ತಿಯರನ್ನೊಳಗೊಂಡ ತಂಡ ಪ್ರಕಟವಾಗಿದ್ದು, ಯೂತ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ತಂಡದಲ್ಲಿದ್ದ ಸಲೀಮಾ ಟೆಟೆ ಹಾಗೂ ಲಾಲ್ರೆಮಿಯಾಮಿ ಆಯ್ಕೆ ಆಗಿದ್ದಾರೆ.
ಭಾರತೀಯ ವನಿತಾ ಹಾಕಿ ತಂಡ ಜನವರಿ 24 ರಂದು ಸ್ಪೇನ್ ಪ್ರವಾಸ ಕೈಗೊಳ್ಳಲಿದ್ದು, ಕೋಚ್ ಸೋರ್ಡ್ ಮರಿನ್ ಈ 20 ದಿನಗಳ ಶಿಬಿರದಲ್ಲಿ ಆಟಗಾರ್ತಿಯ ಪ್ರದರ್ಶನದ ಮೇಲೆ ನಿಗಾ ಇರಿಸಲಿದ್ದಾರೆ.
“ಈ ಅವಧಿಯಲ್ಲಿ ಸ್ಪೇನ್ ಪ್ರವಾಸಕ್ಕಾಗಿ ಫಿಟ್‌ನೆಸ್ ಕಾಪಾಡಿಕೊಳ್ಳಲು ತರಬೇತಿ ನೀಡಲಾಗುವುದು. ನಮ್ಮ ಆಟದಲ್ಲಿ ಅಳವಡಿಸಬಹುದಾದ ಹೊಸ ಶೈಲಿಯ ಕುರಿತೂ ಈ ಶಿಬಿರದಲ್ಲಿ ಚರ್ಚಿಸಲಾಗುತ್ತದೆ. ಆಟವನ್ನು ಪರಿಪೂರ್ಣ ರೀತಿಯಲ್ಲಿ ಮುಗಿಸುವ ಹಾಗೂ ಗೋಲು ಹೊಡೆಯವ ಅವಕಾಶವನ್ನು ಸೃಷ್ಟಿಸುವ ಅಂಶಗಳಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಶಿಬಿರದಲ್ಲಿ ಈ ಅಂಶಗಳ ಬಗ್ಗೆ ಹೆಚ್ಚಿನ ಗಮನಹರಿಸಲಾಗುತ್ತದೆ’ ಎಂದು ಕೋಚ್ ಮರಿನ್ ತಿಳಿಸಿದ್ದಾರೆ.
ಸಲೀಮಾ ಹಾಗೂ ಲಾಲ್ರೆಮಿಯಾಮಿ ಹೊರತು ಪಡಿಸಿ ಅನೇಕ ಹಿರಿಯ ಆಟಗಾರ್ತಿಯರು ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
2018ರಲ್ಲಿ ಗಮನಾರ್ಹ ಸಾಧನೆ
ಕಳೆದ ವರ್ಷ ವನಿತಾ ಹಾಕಿ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ವಿಶ್ವ ರ್‍ಯಾಂಕಿಂಗ್‌ನಲ್ಲಿ 9ನೇ ಸ್ಥಾನಕ್ಕೇರಿತ್ತು. ಏಶ್ಯನ್ ಚಾಂಪಿಯನ್ಸ್ ಟ್ರೋಫಿ, ಏಶ್ಯಾಡ್‌ನಲ್ಲಿ ಬೆಳ್ಳಿ ಪದಕ ಜಯಿಸಿತ್ತು. ಆದರೆ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯ ತಂಡ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಸೋತಿತ್ತು.