Advertisement
ಬೆಳ್ತಂಗಡಿ ಸಾಮಾಜಿಕ ಅರಣ್ಯ ವಲಯ ದಿಂದ ಇಲಾಖೆಯ ನಡ ನರ್ಸರಿಯಲ್ಲಿ 2021ನೇ ಸಾಲಿನ ಮಳೆಗಾಲದಲ್ಲಿ ಸರಕಾರಿ ಸ್ಥಳ, ಶಾಲಾ ವಠಾರ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಾಗೂ ರೈತರಿಗೆ ಮತ್ತು ಸಾರ್ವಜನಿಕರಿಗೆ ವಿತರಣೆಗಾಗಿ 15,000 ಗಿಡಗಳನ್ನು ಬೆಳಸಲಾಗಿದೆ.
Related Articles
Advertisement
ಪ್ರಮುಖವಾಗಿ ಹಲಸು, ಮಾವು, ರಾಂಪತ್ರೆ, ಕಹಿಬೇವು, ಬಿಲ್ವಪತ್ರೆ, ನೆಲ್ಲಿ, ಸಂಪಿಗೆ ಇತ್ಯಾದಿ ಜಾತಿಯ ಗಿಡಗಳನ್ನು ಬೆಳೆಯಲಾಗಿದೆ. ಇಲಾಖೆ ವತಿಯಿಂದ ಮುಂದಿನ ಮಳೆಗಾಲದಲ್ಲಿ ಅಳದಂಗಡಿ, ಕುತ್ಲೂರು ರಸ್ತೆಯಲ್ಲಿ 5 ಕಿ.ಮೀ. ಹಾಗೂ ಬಂದಾರು, ಬೆಳಾಲು ರಸ್ತೆಯ ಬದಿ 3 ಕಿ.ಮೀ. ನೆಡುತೋಪು ನಿರ್ಮಿಸುವ ಯೋಜನೆ ಇದೆ.
ನರೇಗಾದಲ್ಲೂ ಅವಕಾಶ :
ಸಾರ್ವಜನಿಕರು ಹಾಗೂ ರೈತರು ನರ್ಸರಿಯಿಂದ ಸಸಿಗಳನ್ನು ರಿಯಾಯಿತಿ ದರದಲ್ಲಿ ಅಂದರೆ 8×12 ಗಾತ್ರದ ಚೀಲದ ಸಸಿಗಳಿಗೆ 3 ರೂ., ಹಾಗೂ 6×9 ಗಾತ್ರದ ಚೀಲದ ಸಸಿಗಳಿಗೆ ತಲಾ 1 ರೂ. ನಂತೆ ಪಡೆಯಬಹುದಾಗಿದೆ. ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ರೈತರು, ಸಾರ್ವಜನಿಕರು ಗಿಡಗಳನ್ನು ಪಡೆದು ನಾಟಿ ಮಾಡಬಹುದಾಗಿದೆ. ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಮಂಜೊಟ್ಟಿ ಸಸ್ಯ ಕ್ಷೇತ್ರದಿಂದ ಸಾರ್ವಜನಿಕರು ಸಸ್ಯ ಪಡೆಯಬಹುದಾಗಿದೆ.
ವಲಯ ಅರಣ್ಯ ಇಲಾಖೆ :
ಬೆಳ್ತಂಗಡಿ ವಲಯ ಅರಣ್ಯ ವಿಭಾಗದಿಂದಲೂ ಈ ಬಾರಿ 17,000 ಗಿಡಗಳನ್ನು ಬೆಳೆಸಲಾಗಿದೆ. ಕಳೆದ ವರ್ಷ 50,000 ಗಿಡಗಳನ್ನು ಬೆಳೆಸಿದ್ದು, ಸರಕಾರದ ಅನುದಾನ ಕೊರತೆಯಿಂದ ಈ ಬಾರಿ ಗಿಡಗಳ ಸಂಖ್ಯೆ ತೀರ ಕಡಿಮೆಯಾಗಿದೆ.
64 ಹೆಕ್ಟೇರ್‌ನಲ್ಲಿ ನಾಟಿ :
ಬೆಳ್ತಂಗಡಿ ತಾಲೂಕಿನಲ್ಲಿ ಸುಮಾರು 64 ಹೆಕ್ಟೇರ್‌ನಲ್ಲಿ ಬೆಳೆಯಲಾಗಿದ್ದ ಅಕೇಶಿಯಾ ಗಿಡಗಳನ್ನು ಈ ಬಾರಿ ತೆರವು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಂತರ್ಜಲ ಮಟ್ಟಕ್ಕೆ ಅಕೇಶಿಯಾ ಗಿಡ ಮಾರಕ ಎಂಬುದನ್ನು ಕೆಲ ಸಂಶೋಧನೆಗಳು ಉಲ್ಲೇಖೀಸಿದ್ದರಿಂದ ಅದರ ತೆರವಿಗೆ ಆದೇಶಿಸಲಾಗಿದೆ ಎಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಅರಣ್ಯ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದರು. ಅದರಂತೆ ಗೇರುಕಟ್ಟೆ-21 ಹೆಕ್ಟೇರ್, ಉಜಿರೆ-11 ಹೆಕ್ಟೇರ್, ಚಾರ್ಮಾಡಿ-17 ಹೆಕ್ಟೇರ್, ಪುದುವೆಟ್ಟು- 15 ಹೆಕ್ಟೇರ್ ಸೇರಿ 64 ಹೆಕ್ಟೇರ್‌ನಲ್ಲಿ ಗಾಳಿ ಹಾಗೂ ಪರಿಸರಕ್ಕೆ ಅನುಗುಣವಾಗಿ ಇತರ ಜಾತಿಯ ಗಿಡಗಳನ್ನು ನೆಡಲು ಸಿದ್ಧತೆ ನಡೆಸಲಾಗಿದೆ. ಇದಕ್ಕಾಗಿಯೇ ಮುಂಡಾಜೆ ನರ್ಸರಿಯಲ್ಲಿ 35,000 ಗಾಳಿ ಗಿಡಗಳನ್ನು ಪ್ರತ್ಯೇಕವಾಗಿ ಬೆಳೆಸಲಾಗಿದೆ.
ಸಾಮಾಜಿಕ ಅರಣ್ಯ ಇಲಾಖೆಯಿಂದ ಸಾರ್ವಜನಿಕರಿಗೆ, ಸಂಘ-ಸಂಸ್ಥೆಗಳಿಗೆ ಗಿಡಗಳು ಲಭ್ಯವಿವೆ. ಮಳೆಗಾಲ ಸಮೀಪಿ ಸುತ್ತಲೆ ಗಿಡ ವಿತರಣೆ, ನೆಡು ತೋಪು ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗುತ್ತದೆ.-ಸುಬ್ರಹ್ಮಣ್ಯ ಆಚಾರ್,ವಲಯ ಅರಣ್ಯಾಧಿಕಾರಿ, ಸಾಮಾಜಿಕ ಅರಣ್ಯ ಇಲಾಖೆ.
ವಲಯ ಅರಣ್ಯ ವಿಭಾಗದಿಂದ 17,000 ಗಿಡಗಳನ್ನು ಬೆಳೆಯಲಾಗಿದೆ. ಜತೆಗೆ 30,000 ಗಾಳಿ ಗಿಡ ನೆಡುವ ಉದ್ದೇಶ ಇದೆ. ರೈತರು ಗಿಡ ನೆಟ್ಟು ಪೋಷಿಸುವ ಸಲುವಾಗಿ ಮೂರು ವರ್ಷಕ್ಕೆ 135 ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ. ಹಸುರೀಕರಣಕ್ಕೆ ಒಲವು ತೋರಬೇಕು.-ತ್ಯಾಗರಾಜ್ ಎಚ್.ಎಸ್., ವಲಯ ಅರಣ್ಯಧಿಕಾರಿ, ಬೆಳ್ತಂಗಡಿ.
-ವಿಶೇಷ ವರದಿ