ಬೆಂಗಳೂರು: ಮಾನವ ಕಳ್ಳಸಾಗಾಣಿಕೆಯ ಸಂತ್ರಸ್ತೆಯರಾಗಬೇಕಿದ್ದ 32 ಮಂದಿ ನರ್ಸಿಂಗ್ ಕಲಿತ ಯುವತಿಯರನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಕ್ಷಿಸಿದ ಘಟನೆ ಮಂಗಳವಾರ ನಡೆದಿದೆ.
ಜರ್ಮನಿಯ ಅರ್ಮೇನಿಯಾದ ಯುಟಿಎಂಎ ವಿವಿಯಲ್ಲಿ ಅಲ್ಪಾವಧಿ ಉನ್ನತ ಶಿಕ್ಷಣಕ್ಕೆಂದು ಇವರನ್ನು ಕರೆದೊಯ್ಯಲಾಗುತ್ತಿತ್ತು. ಟೋನಿ ಟಾಮ್ ಎಂಬಾತ ಯುವತಿಯರನ್ನು ಕರೆದೊಯ್ಯುತ್ತಿದ್ದು, ಆತನನ್ನು ಕೆಐಎ ವಲಸೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಈಶಾನ್ಯ ವಲಯ ಡಿಸಿಪಿ ಕಾಲ ಕೃಷ್ಣಸ್ವಾಮಿ ಅವರು ಮಾನವ ಕಳ್ಳಸಾಗಾಣಿಕೆ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.
ಯುವತಿಯರ ಪೈಕಿ ಹೆಚ್ಚಿನವರು ಕೇರಳದವರಾಗಿದ್ದು ಮಂಗಳೂರಿನಲ್ಲಿ ಶಿಕ್ಷಣ ಪಡೆದಿದ್ದರು ಎಂದು ತಿಳಿದು ಬಂದಿದೆ.
ಯುವತಿಯರು ಸೋಮವಾರ ರಾತ್ರಿಯೇ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು ಮಂಗಳವಾರ ನಸುಕಿನ 4 ಗಂಟೆಯ ವಿಮಾನದಲ್ಲಿ ಅರ್ಮೇನಿಯಾಗೆ ತೆರಳುವವರಿದ್ದರು. ವಿಮಾನ ನಿಲ್ದಾಣದ ಅಧಿಕಾರಿಗಳು ಸಂಶಯಗೊಂಡು ತೀವ್ರ ವಿಚಾರಣೆ ನಡೆಸಿದಾಗ ವಿಚಾರ ತಿಳಿದು ಬಂದಿದ್ದು, ಟೋನಿ ಟಾಮ್‌ನನ್ನು ವಶಕ್ಕೆ ಪಡೆದು ಬಿಐಎಎಲ್ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ವಿಚಾರಣೆ ಮುಂದುವರಿದಿದೆ.