ಬೆಂಗಳೂರು: ಉದ್ಯೋಗ ವೀಸಾ ಅವಧಿ ಮುಗಿದು ಸೌದಿ ಅರೇಬಿಯಾದಲ್ಲಿ ಸಿಕ್ಕಿಕೊಂಡು ಬಂಧನಕ್ಕೆ ಒಳಗಾಗಿದ್ದ 32 ಕನ್ನಡಿಗರ ನೆರವಿಗೆ ರಾಜ್ಯ ಸರಕಾರ ಧಾವಿಸಿದ್ದು, ಅವರೆಲ್ಲರನ್ನೂ ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್ ಕರೆಸಿಕೊಂಡಿದೆ.
ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರ ಸೂಚನೆಯಂತೆ ಸೌದಿ ಕನ್ನಡಿಗರ ನೆರವಿಗೆ ಧಾವಿಸಿದ ಕೌಶಲ್ಯಾಭಿವೃದ್ಧಿ ನಿಗಮದ ಅಧಿಕಾರಿಗಳು, ಕಷ್ಟಕ್ಕೆ ಸಿಲುಕಿರುವ ಎಲ್ಲ ಕನ್ನಡಿಗರನ್ನು ತಾಯ್ನಾಡಿಗೆ ವಾಪಸ್ ಕರೆಸಿಕೊಂಡಿದ್ದಾರೆ. ಗುರುವಾರ ಸಂಜೆ ಎಲ್ಲರೂ ಬೆಂಗಳೂರು ತಲುಪಿದ್ದಾರೆ ಎನ್ನಲಾಗಿದೆ.
ಸೌದಿಯಲ್ಲಿ ಕನ್ನಡಿಗರು ಸಿಲುಕಿದ್ದಾರೆಂಬ ಮಾಹಿತಿ ಸಿಕ್ಕಕೂಡಲೇ ಉಪ ಮುಖ್ಯಮಂತ್ರಿ, ತಮ್ಮ ಅಧೀನದಲ್ಲಿರುವ ಕೌಶಲ್ಯಾಭಿವೃದ್ಧಿ ನಿಗಮದ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು. ಕೂಡಲೇ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ದೆಹಲಿಯ ವಿದೇಶಾಂಗ ಇಲಾಖೆ, ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳ ಜತೆ ಸುದೀರ್ಘ ಮಾತುಕತೆ ನಡೆಸಿದರಲ್ಲದೆ, ಅಷ್ಟೂ ಉದ್ಯೋಗಿಗಳನ್ನು ಚೆನ್ನೈಗೆ ಕರೆಸಿಕೊಂಡು, ಅಲ್ಲಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ.
ಇವರೆಲ್ಲರೂ ಬೆಂಗಳೂರು ವಿವಿಯಲ್ಲಿರುವ ಹಾಸ್ಟೆಲ್ ನಲ್ಲಿ ಇಟ್ಟಿದ್ದು, ಅಲ್ಲಿ ಎಲ್ಲರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಸೌದಿಯಲ್ಲಿಯೂ ಉದ್ಯೋಗ ನಷ್ಟವಾಗಿದ್ದು, ಇನ್ನು ಕೆಲ ದಿನಗಳ ಕಾಲ ಅಲ್ಲಿ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಅಲ್ಲಿ ವಿನಾಕಾರಣ ಕಷ್ಟಕ್ಕೆ ಸಿಲುಕಿಕೊಳ್ಳುವ ಬದಲು ತಾಯ್ನಾಡಿಗೆ ವಾಪಸ್ ಬರುವುದು ಉತ್ತಮ ಎಂದು ಡಿಸಿಎಂ ಹೇಳಿದ್ದಾರೆ.
ಎಲ್ಲರಿಗೂ ಉದ್ಯೋಗ:
ಸೌದಿಯಿಂದ ವಾಪಸ್ ಬಂದಿರುವ ಎಲ್ಲ ಕನ್ನಡಿರಿಗೂ ಉದ್ಯೋಗ ಕಲ್ಪಿಸಲಾಗುವುದು. ಅವರವರ ಕೌಶಲ್ಯತೆಯನ್ನು ಗುರುತಿಸಿ ಉದ್ಯೋಗಾವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಅಶ್ವಥನಾರಾಯಣ ಹೇಳಿದ್ದಾರೆ.
ಈ ವೇಳೆ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧಿಕಾರಿಗಳು ಹಾಜರಿದ್ದರು.