Advertisement

ಆಧಾರ್‌ ಲಿಂಕ್‌ಗೆ 31ರ ಗಡುವು

01:03 PM Mar 15, 2017 | Team Udayavani |

ದಾವಣಗೆರೆ: ಜಿಲ್ಲೆಯ ಪ್ರತಿ ಬ್ಯಾಂಕ್‌ ಖಾತೆದಾರರು ಮಾ. 31ರ ಒಳಗೆ ತಮ್ಮ ಉಳಿತಾಯ ಖಾತೆಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಹೇಳಿದರು. ಉಳಿತಾಯ ಖಾತೆಗೆ ಆಧಾರ್‌ ಜೋಡಣೆಮಾಡದೇ ಹೋದಲ್ಲಿ ಸರ್ಕಾರಿ ಸೌಲಭ್ಯ ಸ್ಥಗಿತಗೊಳ್ಳಲಿವೆ.

Advertisement

ನರೇಗಾ, ಸಾಮಾಜಿಕ  ಸುರಕ್ಷಾ ಯೋಜನೆ ಪಿಂಚಣಿದಾರರು, ಜನಧನ್‌, ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌, ಸಾಮಾನ್ಯ ಹಾಗೂ ರೈತರ ಖಾತೆಗಳು ಹೀಗೆ ಎಲ್ಲ ರೀತಿಯ ಖಾತೆಗಳಿಗೆ ಸರ್ಕಾರದ ಸವಲತ್ತು, ನೇರ ನಗದು ಯೋಜನೆ (ಡಿಬಿಟಿ) ಸೌಲಭ್ಯ ದೊರಕಬೇಕಾದರೆ ಆಧಾರ್‌ ಜೋಡಣೆ ಕಡ್ಡಾಯ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಖಾತೆದಾರರು ತಮ್ಮ ಉಳಿತಾಯ ಖಾತೆಯ ಮುಖ್ಯ ಪುಟ, ಆಧಾರ್‌ ಕಾರ್ಡ್‌ ಜೆರಾಕ್ಸ್‌ ಹಾಗೂ ಬ್ಯಾಂಕ್‌ ಮಿತ್ರರ ಬಳಿ ದೊರೆಯುವ ಆಧಾರ್‌ ಜೋಡಣೆ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿಕೊಡುವ ಮೂಲಕ ಅತಿ ಸುಲಭವಾಗಿ ಆಧಾರ್‌ ಜೋಡಣೆ ಮಾಡಿಸಬಹುದು ಎಂದು ತಿಳಿಸಿದರು.ಜಿಲ್ಲೆಯ 36 ವಿವಿಧ ಬ್ಯಾಂಕ್‌ 241  ಶಾಖೆಗಳಲ್ಲಿ ಸುಮಾರು 15 ಲಕ್ಷ ಉಳಿತಾಯ ಖಾತೆ ಇದ್ದು, ಈಗಾಗಲೇ 8.5 ಲಕ್ಷ ಖಾತೆಗಳಿಗೆ ಆಧಾರ್‌ ಜೋಡಣೆಯಾಗಿದೆ. 

ಇನ್ನೂ 6.5 ಲಕ್ಷ ಖಾತೆಗಳಿಗೆ ಆಧಾರ್‌ ಜೋಡಣೆಯಾಗಬೇಕಿದೆ. ಜಿಲ್ಲೆಯಲ್ಲಿರುವ 50 ಸಾವಿರ ಜನ ಉದ್ಯೋಗ ಖಾತರಿ ಜಂಟಿ ಉಳಿತಾಯ ಖಾತೆಗಳ ಪೈಕಿ ಶೇ. 40 ಆಧಾರ್‌ ಜೋಡಣೆಯಾಗಿದೆ. ಸಾಮಾಜಿಕ ಸುರಕ್ಷಾ ಯೋಜನೆಗಳಾದ ವೃದ್ಧಾಪ್ಯ,ಅಂಗವಿಕಲರ, ವಿಧವಾ ವೇತನದಡಿಯಲ್ಲಿ ಬ್ಯಾಂಕುಗಳ ಮೂಲಕ ಹಣ ಪಡೆಯುವವರು 6,647 ಫಲಾನುಭವಿಗಳಲ್ಲಿ 1,745 ಆಧಾರ್‌ ಜೋಡಣೆಯಾಗಿಲ್ಲ.

ಜಿಲ್ಲೆಯಲ್ಲಿರುವ ಒಟ್ಟಾರೆ 2.82 ಲಕ್ಷ ಜನಧನ್‌ ಖಾತೆಯಲ್ಲಿ 1.7 ಲಕ್ಷ ಆಧಾರ್‌ ಜೋಡಣೆಯಾಗಿದ್ದು ಇನ್ನೂ 1.12 ಲಕ್ಷ ಖಾತೆಗೆ ಜೋಡಣೆ ಮಾಡಬೇಕಿದೆ ಎಂದು ತಿಳಿಸಿದರು. ಶೇ. 100 ರಷ್ಟು ಆಧಾರ್‌ ಜೋಡಣೆ ಮಾಡುವ ನಿಟ್ಟಿನಲ್ಲಿ ಮಾ. 16 ರಿಂದ 22 ರವರೆಗೆ ಮಧ್ಯಾಹ್ನ 3 ರಿಂದ ಆಯಾಯ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಜನಜಾಗೃತಿ ಶಿಬಿರ ಹಮ್ಮಿಕೊಳ್ಳಲಾಗಿದೆ.

Advertisement

ಮಾ. 21 ರಂದು ದಾವಣಗೆರೆಯ ಎಲ್ಲ ಬ್ಯಾಂಕುಗಳ ಸಹಕಾರದೊಂದಿಗೆ ಲೀಡ್‌ ಬ್ಯಾಂಕ್‌ ನೇತೃತ್ವದಲ್ಲಿ ಜಿಲ್ಲಾ ಮಟ್ಟದಲ್ಲಿ ಜಾಗೃತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಮಾ. 31 ರೊಳಗೆ ಆಧಾರ್‌ ಜೋಡಣೆ ಪೂರ್ಣಗೊಳಿಸಲು ಪಲ್ಸ್‌ ಪೋಲೀಯೋ ರೀತಿಯಲ್ಲಿ ಮಾ. 17, 24 ಮತ್ತು 30 ರಂದು ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳ 241 ಶಾಖೆಗಳಲ್ಲಿ ಏಕಕಾಲಕ್ಕೆ ಆಧಾರ್‌ ಜೋಡಣೆ ಮಹಾ ಮೇಳ ಆಚರಿಸಲಾಗುವುದು ಎಂದು ತಿಳಿಸಿದರು. 

ಲೀಡ್‌ ಬ್ಯಾಂಕ್‌ ವಿಭಾಗೀಯ ವ್ಯವಸ್ಥಾಪಕ ಎನ್‌. ಟಿ. ಎರ್ರಿಸ್ವಾಮಿ  ಮಾತನಾಡಿ, ಹರಿಹರ ತಾಲ್ಲೂಕಿನಹರಗನಹಳ್ಳಿಯನ್ನು ಡಿಜಿಟಲ್‌ ಗ್ರಾಮವನ್ನಾಗಿ  ನಿರ್ಮಾಣ ಮಾಡುವ ಉದ್ದೇಶದಿಂದ ಲೀಡ್‌ ಬ್ಯಾಂಕ್‌ ಆ ಗ್ರಾಮವನ್ನು ದತ್ತು ತೆಗೆದುಕೊಂಡು, ಕಾರ್ಯೋನ್ಮುಖವಾಗಿದೆ. 15 ದಿನಗಳ ಒಳಗೆ ಹರಗನಹಳ್ಳಿಯಲ್ಲಿ ಸಂಪೂರ್ಣ ನಗದು ರಹಿತ ವ್ಯವಸ್ಥೆ ತರುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು. 

ಕೆನರಾ ಬ್ಯಾಂಕಿನ ಸಹಾಯಕ ಮಹಾ ಪ್ರಬಂಧಕ ಎಚ್‌. ಎಂ. ಕೃಷ್ಣಯ್ಯ ಮಾತನಾಡಿ, 10 ರೂಪಾಯಿ ನಾಣ್ಯವನ್ನು ಬ್ಯಾಂಕಿನಲ್ಲಿ ಸ್ವೀಕರಿಸಲಾಗುತ್ತಿದೆ. 10 ರೂಪಾಯಿ ನಾಣ್ಯ ಚಲಾವಣೆಯಲ್ಲಿ ಇಲ್ಲವೆಂಬ ಗಾಳಿ ಸುದ್ದಿಗೆ ಯಾರೂ ಕಿವಿಗೊಡದೆ ಚಲಾವಣೆ ಮಾಡಬೇಕು ಎಂದು ಕೋರಿದರು. ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್‌. ಅಶ್ವತಿ, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನ ರೀಜನಲ್‌ ಮ್ಯಾನೇಜರ್‌ ಭಾಸ್ಕರ್‌, ಸಿಂಡಿಕೇಟ್‌ ಬ್ಯಾಂಕಿನ ಜಯದೇವಪ್ಪ, ಎಸ್‌ಬಿಎಂ ಬ್ಯಾಂಕಿನ ರಾಮಚಂದ್ರ ಭಟ್‌, ಎಸ್‌ ಬಿಐನ ಮೋಹನ್‌ ನರಸಾಪುರ ಇತರರು ಸುದ್ದಿಗೋಷ್ಠಿಯಲ್ಲಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next