Advertisement

ಪಳನಿಸ್ವಾಮಿ ಪ್ರಮಾಣವಚನ ಸ್ವೀಕಾರ, ಬೆಂಗಳೂರಲ್ಲಿ ರಿಮೋಟ್ ಕಂಟ್ರೋಲ್!

04:41 PM Feb 16, 2017 | Sharanya Alva |

ಚೆನ್ನೈ: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ನಟರಾಜನ್ ಆಯ್ಕೆ ಮಾಡಿದ್ದ ಇ.ಪಳನಿಸ್ವಾಮಿ ಗುರುವಾರ ಸಂಜೆ ರಾಜಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಜೊತೆಗೆ 30 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ತಮಿಳುನಾಡಿನ ಹಂಗಾಮಿ ರಾಜ್ಯಪಾಲರಾದ ವಿದ್ಯಾಸಾಗರ ರಾವ್ ಅವರು ಪಳನಿಸ್ವಾಮಿ ಹಾಗೂ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ಮೂಲಕ ಕಳೆದ ಕೆಲವು ದಿನಗಳಿಂದ ತಮಿಳುನಾಡು ರಾಜಕಾರಣದಲ್ಲಿ ತಲೆದೋರಿದ್ದ ಬಿಕ್ಕಟ್ಟಿಗೆ ರಾಜ್ಯಪಾಲರ ಅಂತಿಮ ನಿರ್ಧಾರ ಹೊರಬೀಳುವ ಮೂಲಕ ತೆರೆಬಿದ್ದಂತಾಗಿದೆ.

Advertisement

ಪಳನಿಸ್ವಾಮಿ ಸಚಿವ ಸಂಪುಟದಲ್ಲಿ ಶಶಿಕಲಾ ಆಪ್ತರಿಗೆ ಹೆಚ್ಚಿನ ಮಣೆ ಹಾಕಲಾಗಿದೆ. ಶಶಿಕಲಾ ಸಂಬಂಧಿ ದಿನಕರನ್ ಗೂ ಕ್ಯಾಬಿನೆಟ್ ದರ್ಜೆ ನೀಡಲಾಗಿದೆ. ಕೋವತ್ತೂರಿನ ಗೋಲ್ಡನ್ ಬೇ ರೆಸಾರ್ಟ್ ನಲ್ಲಿ ಠಿಕಾಣಿ ಹೂಡಿದ್ದ ಶಾಸಕರು ಚೆನ್ನೈಗೆ ಆಗಮಿಸಿದ್ದು, ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ರಿಮೋಟ್ ಕಂಟ್ರೋಲ್ ಬೆಂಗಳೂರಲ್ಲಿ!

ಶತಾಯಗತಾಯ ಪನ್ನೀರ್ ಸೆಲ್ವಂಗೆ ಸಿಎಂ ಪಟ್ಟ ಸಿಗಬಾರದೆಂಬ ಹಠಕ್ಕೆ ಬಿದ್ದಿದ್ದ ವಿಕೆ ಶಶಿಕಲಾ ನಟರಾಜನ್, ಸುಪ್ರೀಂಕೋರ್ಟ್ ದೋಷಿ ಎಂದು ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದ ಬಳಿಕ ಬೆಂಗಳೂರಿನ ವಿಶೇಷ ಕೋರ್ಟ್ ಗೆ ಶರಣಾಗುವ ಮುನ್ನ ಗೋಲ್ಡನ್ ಬೇ ರೆಸಾರ್ಟ್ ನಲ್ಲೇ ರಣತಂತ್ರ ಹೆಣೆಯಲಾಗಿತ್ತು. ಅದರಂತೆ ಎಐಎಡಿಎಂಕೆ ಶಾಸಕಾಂಗ ಪಕ್ಷದ ನೂತನ ನಾಯಕನ್ನಾಗಿ ಪಳನಿಸ್ವಾಮಿಯನ್ನು ನೇಮಕ ಮಾಡಿ, ಪನ್ನೀರ್ ಸೆಲ್ವಂ ಹಾಗೂ 20 ಮಂದಿಯನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಇದೀಗ ಕೊನೆಗೂ ಶಶಿಕಲಾ ಮೇಲುಗೈ ಸಾಧಿಸಿದಂತಾಗಿದ್ದು, ಸರ್ಕಾರದ ಹಿಡಿದ ಶಶಿಕಲಾ ಹಿಡಿತಕ್ಕೆ ಸಿಕ್ಕಂತಾಗಿದೆ.

Advertisement

ಯಾರು ಇ.ಪಳನಿಸ್ವಾಮಿ?
1954 ಮಾರ್ಚ್ 2ರಂದು ಆಂಧಿಯೂರ್ ನಲ್ಲಿ ಜನಿಸಿದ ಪಳನಿಸ್ವಾಮಿ, ವಿದ್ಯಾರ್ಥಿ ನಾಯಕನಾಗಿ ಹೊರಹೊಮ್ಮಿದ್ದರು. ಬಿಎಸ್ಸಿ ಪದವೀಧರರಾಗಿರುವ ಪಳನಿಸ್ವಾಮಿ 1983ರಲ್ಲಿ ಎಐಎಡಿಎಂಕೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. 1987ರಲ್ಲಿ ಎಂಜಿಆರ್ ನಿಧನರಾದ ಸಂದರ್ಭದಲ್ಲಿ ಪಕ್ಷ ಇಬ್ಭಾಗವಾದ ವೇಳೆ ಪಳನಿಸ್ವಾಮಿ ಜಯಾ ಪಾಳಯದಲ್ಲಿ ಗುರುತಿಸಿಕೊಂಡಿದ್ದರು. 1989ರಲ್ಲಿ ಮೊದಲ ಬಾರಿಗೆ ಸೇಲಂನ ಎಡಪ್ಪಾಡಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ 1991, 2011 ಹಾಗೂ 2016ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. 

ಜಯಲಲಿತಾ ಸಂಪುಟದಲ್ಲಿ ಪನ್ನೀರ್ ಸೆಲ್ವಂ, ವಿಶ್ವನಾಥನ್ ಬಳಿಕ 3ನೇ ಪ್ರಭಾವಿ ಸಚಿವರಾಗಿದ್ದವರು ಪಳನಿಸ್ವಾಮಿ. ಜಯಾ ಅವರ ನಂಬಿಗಸ್ಥ ನಾಲ್ವರು ಸಚಿವರ ಕೂಟ “ನಾಲ್ವರ್ ಅಣಿ”ಯಲ್ಲಿ ಪಳನಿಸ್ವಾಮಿ ಕೂಡಾ ಒಬ್ಬರಾಗಿದ್ದರು ಎಂಬುದು ಗಮನಾರ್ಹ. 

ಏತನ್ಮಧ್ಯೆ 1998-99ರಲ್ಲಿ ಸಂಸದರಾಗಿದ್ದರು. ಎಂಜಿಆರ್ ನಂತರ ಜಯಲಲಿತಾ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಪಳನಿಸ್ವಾಮಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಎಐಎಡಿಎಂಕೆ ಪಕ್ಷದೊಳಗಿನ ಪ್ರಭಾವಿ ಗೌಂಡರ್ ಸಮುದಾಯದ ನಾಯಕ ಕೂಡ ಹೌದು. ಈಗ ಜೈಲುಶಿಕ್ಷೆ ಅನುಭವಿಸುತ್ತಿರುವ ವಿಕೆ ಶಶಿಕಲಾ ನಟರಾಜನ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

ಪಳನಿಸ್ವಾಮಿ ವಿರುದ್ಧದ ಪಿಐಎಲ್ ವಜಾ:
ಇ.ಪಳನಿಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲು ತಡೆ ನೀಡಬೇಕೆಂದು ಕೋರಿ ಎಐಎಡಿಎಂಕೆಯ ಕಾರ್ಯಕರ್ತರೊಬ್ಬರು ಸಲ್ಲಿಸಿದ್ದ ಪಿಐಎಲ್ ಅನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next