ಹಾವೇರಿ: ಹಾವೇರಿ ಜಿಲ್ಲಾ ಪಂಚಾಯಿತಿ ಕಾರ್ಯಕ್ರಮಗಳ 2019-20ನೇ ಸಾಲಿನ 30979.67 ಲಕ್ಷ ರೂ.ಗಳ ವಾರ್ಷಿಕ ಕ್ರಿಯಾ ಯೋಜನೆಗೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಸರ್ವಾನುಮತದಿಂದ ಅನುಮೋದನೆ ನೀಡಿತು.
ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜಿಪಂ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ 31 ಇಲಾಖೆಗಳಿಗೆ ಅನುದಾನ ಹಂಚಿಕೆ ಮಾಡಿ ಲಿಂಕ್ ಡಾಕ್ಯೂಮೆಂಟ್ ಅಡಿ 2019-20ನೇ ಸಾಲಿನಲ್ಲಿ ತಯಾರಿಸಲಾದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು.
ಸಂದರ್ಭದಲ್ಲಿ ಜಿಪಂನ ಶಾಸನಬದ್ಧ ಅಭಿವೃದ್ಧಿ ಅನುದಾನದ 2019-20ನೇ ಸಾಲಿನ 565 ಲಕ್ಷ ರೂ.ಗೆ ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದಿಂದ ತಯಾರಿಸಲಾದ ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು.
ಶಾಸನಬದ್ಧ ಅನುದಾನದಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿ ಕಟ್ಟಡದ ಮಳೆ ನೀರು ಕೊಯ್ಲು, ಶೆಡ್ ನಿರ್ಮಾಣ, ಕೊಠಡಿಗೆ ಪಿಓಪಿ, ಪ್ಯಾನ್, ವಾಲ್ ಪ್ಯಾನ್, ವಾರ್ಡ್‌ರೋಬ್ ಹಾಗೂ ನೆಲ ಹಾಸಿಗೆ ಪ್ಲೋರಿಂಗ್ ಮ್ಯಾಟ್ ಅಳವಡಿಕೆ, ನೀರಿನ ಟ್ಯಾಂಕ್ ನಿರ್ಮಾಣ, ಹಳೆ ಕಚೇರಿ ನಿರ್ವಹಣೆಗಾಗಿ 75 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ. ಈ ಕುರಿತಂತೆ ಸದಸ್ಯರು ಆಕ್ಷೇಪಣೆ ವ್ಯಕ್ತಪಡಿಸಿ, ಯಾವುದೇ ಸದಸ್ಯರ ಗಮನಕ್ಕೆ ತರದೆ ಅನುದಾನ ಒದಗಿಸಲಾಗಿದೆ ಎಂದರು. ಆಕ್ಷೇಪಣೆ ಹಿನ್ನೆಲೆಯಲ್ಲಿ ಈ ಕಾಮಗಾರಿಗಳನ್ನು ಬದಲಿಸಿ ಜಿಪಂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಅತಿಥಿ ಗೃಹದ ವಿನ್ಯಾಸಕ್ಕೆ ಬಳಸಲು ತಿದ್ದುಪಡಿಯೊಂದಿಗೆ ಶಾಸನಬದ್ಧ ಅನುದಾನದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು.
ಯಾವ ಇಲಾಖೆಗೆ ಎಷ್ಟು ಹಣ?.. ಶಿಕ್ಷಣ ಇಲಾಖೆ 15902.47 ಲಕ್ಷ ರೂ., ಲೋಕ ಶಿಕ್ಷಣ ಇಲಾಖೆಗೆ 32.67 ಲಕ್ಷ ರೂ., ಕ್ರೀಡೆ ಮತ್ತು ಯುವಜನ ಸೇವಾ ಇಲಾಖೆಗೆ 202.94 ಲಕ್ಷ ರೂ., ವೈದ್ಯಕೀಯ ಮತ್ತು ಜನಾರೋಗ್ಯಕ್ಕೆ 3390.38 ಲಕ್ಷ ರೂ., ಆಯುಷ್ ಇಲಾಖೆಗೆ 246.29 ಲಕ್ಷ ರೂ., ಕುಟುಂಬ ಕಲ್ಯಾಣ ಇಲಾಖೆಗೆ 1417.56 ಲಕ್ಷ ರೂ., ಪರಿಶಿಷ್ಟ ಜಾತಿ ಕಲ್ಯಾಣಕ್ಕೆ 1839.50 ಲಕ್ಷ ರೂ., ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕೆ 706.91 ಲಕ್ಷ ರೂ., ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 2715.83 ಲಕ್ಷ ರೂ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 135.06 ಲಕ್ಷ ರೂ., ಕೃಷಿ ಇಲಾಖೆಗೆ 471.29 ಲಕ್ಷ ರೂ., ತೋಟಗಾರಿಕೆ ಇಲಾಖೆಗೆ 495.35 ಲಕ್ಷ ರೂ., ಪಶುಸಂಗೋಪನೆ ಇಲಾಖೆಗೆ 342.27 ಲಕ್ಷ ರೂ. , ಮೀನುಗಾರಿಕೆ ಇಲಾಖೆಗೆ 87.17 ಲಕ್ಷ ರೂ., ಅರಣ್ಯ ಇಲಾಖೆಗೆ 511.26 ಲಕ್ಷ ರೂ., ಸಹಕಾರ ಇಲಾಖೆಗೆ 20.10 ಲಕ್ಷ ರೂ., ಪ್ರದೇಶಾಭಿವೃದ್ಧಿ ಮತ್ತು ಇತರೆ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಕ್ಕೆ 395.38 ಲಕ್ಷ ರೂ., ಸಣ್ಣ ನೀರಾವರಿ ಇಲಾಖೆಗೆ 62.48 ಲಕ್ಷ ರೂ., ಗ್ರಾಮೋದ್ಯಮ ಮತ್ತು ಸಣ್ಣ ಉದ್ಯಮಕ್ಕೆ 67.27 ಲಕ್ಷ ರೂ., ರೇಷ್ಮೆ ಇಲಾಖೆಗೆ 185.16 ಲಕ್ಷ ರೂ., ರಸ್ತೆ ಮತ್ತು ಸೇತುವೆಗೆ 620 ಲಕ್ಷ ರೂ., ಸಚಿವಾಲಯ ಆರ್ಥಿಕ ಸೇವೆಗಳಿಗೆ 73.27 ಲಕ್ಷ ರೂ., ಕೈಮಗ್ಗ ಮತ್ತು ಜವಳಿ ಇಲಾಖೆಗೆ 38.25 ಲಕ್ಷ ರೂ., ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ 7 ಲಕ್ಷ ರೂ., ಕಲೆ ಮತ್ತು ಸಂಸ್ಕೃತಿಗೆ 10 ಲಕ್ಷ ರೂ., ಉದ್ಯೋಗ ಮತ್ತು ತರಬೇತಿಗೆ 103.05 ಲಕ್ಷ ರೂ., ಅಂಗವಿಕಲರ ಮತ್ತು ಹಿರಿಯರ ಕಲ್ಯಾಣ ನಾಗರಿಕರ ಕಲ್ಯಾಣಕ್ಕೆ 118.02 ಲಕ್ಷ ರೂ., ಕೃಷಿ ಮಾರುಕಟ್ಟೆಗೆ 20 ಲಕ್ಷ ರೂ., ಅಲ್ಪ ಸಂಖ್ಯಾತರ ಕಲ್ಯಾಣಕ್ಕೆ 323.40 ಲಕ್ಷ ರೂ., ಲೋಕೋಪಯೋಗಿ ಕಾರ್ಯಕ್ರಮಗಳಿಗೆ 439.34 ಲಕ್ಷ ರೂ. ಒಳಗೊಂಡಂತೆ 30979.67 ಲಕ್ಷ ರೂ. ಮೊತ್ತಕ್ಕೆ ಅನುಮೋದನೆ ನೀಡಲಾಯಿತು.
ಶಾಸನಬದ್ಧ ಅನುದಾನದಲ್ಲಿ ಮುಂದುವರೆದ ಕಾಮಗಾರಿಗಳಿಗೆ 6.50 ಲಕ್ಷ ರೂ., ಸಾಮಾನ್ಯ ಕಾಮಗಾರಿಗೆ 387.85 ಲಕ್ಷ ರೂ., ವಿಕಲಚೇತನರ ಅಭಿವೃದ್ಧಿ ಕಾಮಗಾರಿಗಳಿಗೆ 33.90 ಲಕ್ಷ ರೂ. ಒಳಗೊಂಡಂತೆ ಇತರ 267 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು 565 ಲಕ್ಷ ರೂ.ಗಳ ಕ್ರಿಯಾ ಯೋಜನೆ ರೂಪಿಸಲಾಗಿದೆ.
ಅಮಾನತಿಗೆ ಆಗ್ರಹ: ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಗ್ರಾಮೀಣ ಕುಡಿಯುವ ನೀರು ಯೋಜನೆಗಾಗಿ ತಯಾರಿಸಲಾದ 43.89 ಕೋಟಿ ರೂ. ಕ್ರಿಯಾ ಯೋಜನೆಗೆ ಕಳೆದ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲು ನಿರಾಕರಿಸಿದಂತೆ ಈ ಸಭೆಯಲ್ಲೂ ಅನುಮೋದನೆ ನೀಡಲಿಲ್ಲ. ಸದಸ್ಯರ ಅಭಿಪ್ರಾಯಗಳನ್ನು ಕಡೆಗಣಿಸಿ ಅಧಿಕಾರಿಗಳೇ ಕ್ರಿಯಾಯೋಜನೆ ತಯಾರಿಸಿ ಅನುಮೋದನೆ ಪಡೆದಿದ್ದಾರೆ. ಈ ಕ್ರಿಯಾ ಯೋಜನೆಯನ್ನು ರದ್ದುಪಡಿಸಬೇಕು. ಕ್ರಿಯಾ ಯೋಜನೆ ತಯಾರಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.
ಜಿಪಂ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಮಾತನಾಡಿ, ಜಿಲ್ಲಾ ಪಂಚಾಯಿತಿ ಸದಸ್ಯರ ಅನುಮೊದನೆ ಪಡೆಯದೇ, ಶಾಸಕರ ಗಮನಕ್ಕೆ ತರದೆ ಕ್ರಿಯಾ ಯೋಜನೆಯನ್ನು ಅಧಿಕಾರಿಗಳ ಹಂತದಲ್ಲಿ ಅನುಮೋದನೆ ಪಡೆಯಲಾಗಿದೆ. ಬೆಳಗಾವಿಯಲ್ಲಿ ಸೆ.9ರಂದು ಗ್ರಾಮೀಣಾಭಿವೃದ್ಧಿ ಸಚಿವರು ಬೆಳಗಾವಿಯಲ್ಲಿ ಸಭೆ ಕರೆದಿದ್ದಾರೆ. ಈ ಕುರಿತಂತೆ ಸಚಿವರ ಗಮನಕ್ಕೆ ತರಲಾಗುವುದು. ಸದಸ್ಯರ ಶಿಫಾರಸ್ಸಗಳನ್ನು ಪರಿಗಣಿಸುವಂತೆ ಮನವಿ ಮಾಡುವುದಾಗಿ ಸಭೆಗೆ ತಿಳಿಸಿದರು.
ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಗಿರಿಜವ್ವ ಬ್ಯಾಲದಹಳ್ಳಿ, ಶಾಸಕ ನೆಹರು ಓಲೇಕಾರ, ಜಿಪಂ ಪ್ರಭಾರ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ, ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ಜಿ.ಪಂ ಉಪಕಾರ್ಯದರ್ಶಿ ಜಿ.ಗೋವಿಂದಸ್ವಾಮಿ ಇದ್ದರು.