ಬೆಂಗಳೂರು: ರಾಜ್ಯದಲ್ಲಿ ರವಿವಾರ ಸಂಜೆಯ ನಂತರ ಒಟ್ಟು 28 ಪ್ರಕರಣಗಳು ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 642ಕ್ಕೆ ಏರಿಕೆಯಾಗಿದೆ. ಹೊಸ 28 ಸೋಂಕಿತರ ಪೈಕಿ 21 ಪ್ರಕರಣಗಳು ದಾವಣಗೆರೆಯಲ್ಲಿ ದೃಢವಾಗಿದೆ.
ಉಳಿದಂತೆ ಹಾವೇರಿಯಲ್ಲಿ ಮೊದಲ ಸೋಂಕು ಪ್ರಕರಣ ಪತ್ತೆಯಾಗಿದ್ದರೆ, ಮಂಡ್ಯದಲ್ಲಿ ಎರಡು, ಕಲಬುರಗಿಯಲ್ಲಿ ಎರಡು, ಚಿಕ್ಕಬಳ್ಳಾಪುರ ವಿಜಯಪುರದಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ.
ದಾವಣಗೆರೆಯಲ್ಲಿ ಸೋಂಕಿತ ಸಂಖ್ಯೆ 533ರ ಸಂಪರ್ಕದಿಂದ 18 ಜನರಿಗೆ ಸೋಂಕು ತಾಗಿದ್ದರೆ, ಸೋಂಕಿತ ಸಂಖ್ಯೆ 556ರ ಸಂಪರ್ಕದಿಂದ ಇಬ್ಬರಿಗೆ ಸೋಂಕು ದೃಢವಾಗಿದೆ.
ಮುಂಬೈಗೆ ಪ್ರಯಾಣ ಮಾಡಿದ ಹಿನ್ನಲೆ ಇರುವ ಮಂಡ್ಯ 20 ಮತ್ತು 19 ವರ್ಷದ ಇಬ್ಬರು ಯುವತಿಯರಿಗೆ ಸೋಂಕು ದೃಢವಾಗಿದೆ. ಮುಂಬೈ- ಪುಣೆ ಪ್ರಯಾಣ ಮಾಡಿದ್ದ ಹಾವೇರಿ ಸವಣೂರಿನ ಯುವಕನಿಗೂ ಸೋಕು ತಾಗಿರುವುದು ದೃಢವಾಗಿದೆ.
ಸೋಂಕಿತ ಸಂಖ್ಯೆ 604ರ ಸಂಪರ್ಕದಿಂದ ಕಲಬುರಗಿಯ 36 ವರ್ಷದ ಮಹಿಳೆಗೆ ಸೋಂಕು ತಾಗಿದ್ದರೆ, ಹೈದರಾಬಾದ್ ಗೆ ಪ್ರಯಾಣ ಮಾಡಿದ್ದ 37 ವರ್ಷದ ಚಿಂಚೋಳಿಯ ಯುವಕನಿಗೂ ಸೋಂಕು ದೃಢವಾಗಿದೆ.
ಸೋಂಕಿತ ಸಂಖ್ಯೆ 586ರ ಸಂಪರ್ಕದಿಂದ ಚಿಕ್ಕಬಳ್ಳಾಪುರದ 30 ವರ್ಷದ ವ್ಯಕ್ತಿಗೆ ಸೋಂಕು ತಾಗಿದೆ. ವಿಜಯಪುರದ 62 ವರ್ಷದ ವೃದ್ಧೆಗೆ ಸೋಂಕು ದೃಢವಾಗಿದೆ.
ರಾಜ್ಯದಲ್ಲಿ ಸೋಂಕು ಕಾರಣದಿಂದ 26 ಜನರು ಸಾವನ್ನಪ್ಪಿದರೆ, 304 ಜನರು ಗುಣಮುಖರಾಗಿದ್ದಾರೆ.