Advertisement

302 ಪಶು ಚಿಕಿತ್ಸಾ ಕೇಂದ್ರಗಳಿಗೆ ಮೇಲ್ದರ್ಜೆ ಭಾಗ್ಯ

06:20 AM Dec 18, 2017 | Team Udayavani |

ಬೆಂಗಳೂರು: ರಾಜ್ಯದ ಎಲ್ಲ ಹಳ್ಳಿಗಳಿಗೆ ಪರಿಣಿತ ಹಾಗೂ ಸುಧಾರಿತ ಪಶುವೈದ್ಯಕೀಯ ಸೇವೆಗಳನ್ನು ವಿಸ್ತರಿಸುವ ಗುರಿಯೊಂದಿಗೆ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳನ್ನು ಪಶು ಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ಮುಂದಾಗಿದ್ದು, ಅದರಂತೆ ಪ್ರಸ್ತಕ ಸಾಲಿನಲ್ಲಿ 302 ಪಶು ಚಿಕಿತ್ಸಾ ಕೇಂದ್ರಗಳು “ಮೇಲ್ದರ್ಜೆ ಭಾಗ್ಯ’ ಕಾಣಲಿವೆ.

Advertisement

ಇದರಿಂದ ಹೆಚ್ಚುವರಿ ಹುದ್ದೆಗಳು ಸೃಷ್ಟಿಯಾಗಿ ಒಂದು ಪಶುಚಿಕಿತ್ಸಾಲಯಕ್ಕೆ ಒಬ್ಬರು ಪಶುವೈದ್ಯಾಧಿಕಾರಿ ಹಾಗೂ ಒಬ್ಬರು ಡಿ ದರ್ಜೆ ನೌಕರ ಸೇರಿ ಒಟ್ಟು 604 ಮಂದಿಗೆ ಉದ್ಯೋಗ ಸಿಗಲಿದೆ. 302 ಪಶು ಚಿಕಿತ್ಸಾ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು 36 ಕೋಟಿ ರೂ. ವೆಚ್ಚ ಆಗಲಿದೆ.

ರಾಜ್ಯದಲ್ಲಿ ವಿವಿಧ ಹಂತದ ಒಟ್ಟು 4,215 ಪಶು ವೈದ್ಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 1,512 ಪಶು ಚಿಕಿತ್ಸಾ ಕೇಂದ್ರಗಳು ಜಿಲ್ಲಾ ಪಂಚಾಯತ್‌ ವಲಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಕೇಂದ್ರಗಳಲ್ಲಿ ಪದವೀಧರ ಪಶುವೈದ್ಯರಿಲ್ಲದೆ ಅರೆ ಪಶುವೈದ್ಯಕೀಯ ಸಿಬ್ಬಂದಿಯೇ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ, ರಾಷ್ಟ್ರೀಯ ಕೃಷಿ ಆಯೋಗ ಹಾಗೂ ಭಾರತೀಯ ಪಶುವೈದ್ಯಕೀಯ ಪರಿಷತ್ತಿನ ಶಿಫಾರಸಿನ ಪ್ರಕಾರ ಪಶುಚಿಕಿತ್ಸಾ ಸಂಸ್ಥೆಯಲ್ಲಿ ಪ್ರಾಣಿಗಳಿಗೆ ಸೂಕ್ತ ಹಾಗೂ ಪಕ್ವವಾದ ಚಿಕಿತ್ಸೆ ಸಿಗಬೇಕಾದರೆ ಪಶುಚಿಕಿತ್ಸಾ ಸಂಸ್ಥೆಗಳಲ್ಲಿ ಪದವೀಧರ ಪಶುವೈದ್ಯರು ಇರುವುದು ಕಡ್ಡಾಯ. ಹಾಗಾಗಿ ಪದವೀಧರ ಪಶುವೈದ್ಯರನ್ನು ನೇಮಕ ಮಾಡಲು ಸರ್ಕಾರ ತೀರ್ಮಾನಿಸಿದೆ.

ಈ ಹಿನ್ನೆಲೆಯಲ್ಲಿ 1,512 ಪಶು ಚಿಕಿತ್ಸಾ ಕೇಂದ್ರಗಳನ್ನು ಪದವೀಧರ ಪಶುವೈದ್ಯ ಅಧಿಕಾರಿಯ ಹುದ್ದೆಯೊಂದಿಗೆ ಪಶು ಚಿಕಿತ್ಸಾಲಯವನ್ನಾಗಿ ಮೇಲ್ದರ್ಜೆಗೇರಿಸುವಂತೆ ಪಶುಪಾಲನಾ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು. ಅದರಂತೆ, ಮೊದಲ ಹಂತದಲ್ಲಿ 2017-18ನೇ ಆರ್ಥಿಕ ವರ್ಷದಲ್ಲಿ 36.72 ಕೋಟಿ ರೂ. ವೆಚ್ಚದಲ್ಲಿ 302 ಪಶುಚಿಕಿತ್ಸಾ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದ್ದು, ಅದಕ್ಕೆ ಈಗಾಗಲೇ ಸರ್ಕಾರ ಅನುಮೋದನೆ ನೀಡಿದ್ದು, ಪ್ರಕ್ರಿಯೆ ಆರಂಭವಾಗಿದೆ.

ಐದು ವರ್ಷದಲ್ಲಿ ಎಲ್ಲ ಕೇಂದ್ರಗಳು ಮೇಲ್ದರ್ಜೆಗೆ: ಮುಂದಿನ ಐದು ವರ್ಷದಲ್ಲಿ ಎಲ್ಲಾ 1,512 ಪಶು ಚಿಕಿತ್ಸಾ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರ ಗುರಿ ಇಟ್ಟುಕೊಂಡಿದ್ದು, ಇದಕ್ಕೆ ಒಟ್ಟು 182 ಕೋಟಿ ರೂ. ವೆಚ್ಚವಾಗಲಿದೆ. ಅದರಂತೆ 2017-18ನೇ ಸಾಲಿನ 302 ಪಶು ಚಿಕಿತ್ಸಾ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದ್ದು, 2018-19 ಹಾಗೂ 2019-20ರಲ್ಲಿ ತಲಾ 400 ಮತ್ತು 2020-21ರಲ್ಲಿ 410 ಪಶು ಚಿಕಿತ್ಸಾ ಕೇಂದ್ರಗಳನ್ನು ಹಂತ-ಹಂತವಾಗಿ ಮೇಲ್ದರ್ಜೆಗೇರಿಸಲು ಯೋಜನೆ ರೂಪಿಸಲಾಗಿದೆ. ಐದು ವರ್ಷಗಳಲ್ಲಿ ಎಲ್ಲಾ 1,512 ಪಶು ಚಿಕಿತ್ಸಾ ಕೇಂದ್ರಗಳು ಮೇಲ್ದರ್ಜೆಗೇರಿದರೆ, ಅದಕ್ಕೆ ಸಮನಾಗಿ ಒಂದು ಪಶುವೈದ್ಯಾಧಿಕಾರಿ ಹಾಗೂ ಒಂದು ಡಿ ದರ್ಜೆ ನೌಕರ ಸೇರಿ ಒಟ್ಟು 3,024 ಹುದ್ದೆಗಳು ಸೃಷ್ಟಿಯಾಗಲಿವೆ.

Advertisement

ರಾಜ್ಯದ ಎಲ್ಲ 1,512 ಪಶು ಚಿಕಿತ್ಸಾ ಕೇಂದ್ರಗಳನ್ನು ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದ್ದು, ಈಗಾಗಲೇ ಅಧಿಕೃತ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಮೊದಲ ಹಂತದಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ 302 ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಉಳಿದ ಕೇಂದ್ರಗಳ ಬಗ್ಗೆ ಹಂತ  ಹಂತವಾಗಿ ಕ್ರಮ ಕೈಗೊಳ್ಳಲಾಗುವುದು.
– ಎಸ್‌. ಶೇಖರ್‌, ಆಯುಕ್ತರು, ಪಶುಪಾಲನೆ ಹಾಗೂ ಪಶುವೈದ್ಯಕೀಯ ಸೇವೆ ಇಲಾಖೆ

– ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next