ಧಾರವಾಡ: ರಾಜ್ಯದ ಅರಣ್ಯೀಕರಣ ಪ್ರದೇಶವನ್ನು ಹೆಚ್ಚಿಸುವ ಸದುದ್ದೇಶದಿಂದ ಆ.15ರಿಂದ ಆರಂಭವಾಗಿರುವ ಹಸಿರು ಕರ್ನಾಟಕ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಆ.18ರ ವರೆಗೆ ಅಂದಾಜು 30 ಸಾವಿರ ಸಸಿಗಳನ್ನು ನಾಟಿ ಮಾಡಲಾಗಿದೆ ಎಂದು ಧಾರವಾಡ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ. ಮಹೇಶಕುಮಾರ ಹೇಳಿದರು.
ನಗರದ ನವಲೂರು ಅರಣ್ಯೀಕರಣ ಪ್ರದೇಶದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಸಿರು ಕರ್ನಾಟಕ ಕಾರ್ಯಕ್ರಮದಡಿ ಜಿಲ್ಲೆಗೆ ಬೇಡಿಕೆಗೆ ಅನುಗುಣವಾಗಿ 23 ಸಾವಿರ ಸಸಿಗಳ ನೆಡುವ ಗುರಿ ಹೊಂದಲಾಗಿತ್ತು. ಆದರೆ ಇಂದಿನ ವರೆಗೆ 30 ಸಾವಿರ ಸಸಿಗಳನ್ನು ವಿತರಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಹಾಗೂ ನಗರ ಪ್ರದೇಶದಲ್ಲಿ 1,3 ಮತ್ತು 5 ರೂ.ಗಳ ರಿಯಾಯತಿ ದರದಲ್ಲಿ ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಲಾಗಿದೆ ಎಂದರು.
ಗಾಮಗಟ್ಟಿ ಕೈಗಾರಿಕೆ ಪ್ರದೇಶದಲ್ಲಿನ ಅರಣ್ಯೀಕರಣಗೊಳಿಸಿದ ಪ್ರದೇಶದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ವ್ಹಿ. ಮಂಜುನಾಥ ಮಾತನಾಡಿ, ಕಳೆದ 2 ವರ್ಷದಲ್ಲಿ ಸುಮಾರು 7 ಸಾವಿರ ಸಸಿಗಳನ್ನು ಗಾಮಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ನೆಡಲಾಗಿದೆ. ಶೇ.99ರಷ್ಟು ಸಸಿಗಳು ಇಲ್ಲಿ ಬದುಕಿ, ಬೆಳೆದಿವೆ. ಮಾನವ ಮತ್ತು ಪ್ರಾಣಿಗಳ ತೊಂದರೆಗಳಿಂದ ಕಾಪಾಡಿದರೆ ನೆಟ್ಟಿರುವ ಸಸಿಗಳನ್ನು ಶೇ.100ರಷ್ಟು ಉಳಿಸಿ, ಬೆಳೆಸಬಹುದು. ಇದಕ್ಕೆ ಸಾರ್ವಜನಿಕರ ಸಹಕಾರವು ಮುಖ್ಯ ಎಂದರು.
ನವಲೂರ ಗುಡ್ಡ ಜೊತೆಗೆ ಹುಬ್ಬಳ್ಳಿ ತಾಲೂಕಿನ ಬುದ್ನಾಳ ಗುಡ್ಡವನ್ನು ಸಾಲುಮರದ ತಿಮ್ಮಕ್ಕಾ ವೃಕ್ಷ ಉದ್ಯಾನವನವನ್ನಾಗಿ ಮಾಡಲು ಶ್ರಮಿಸಲಾಗುತ್ತಿದೆ. ಈಗಾಗಲೇ ಸಾವಿರಾರು ಗಿಡಗಳನ್ನು ನೆಡಲಾಗಿದ್ದು, ನಮ್ಮ ಸಿಬ್ಬಂದಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಸಾರ್ವಜನಿಕರು ಸಹಕಾರ ನೀಡಿದರೆ ಮತ್ತಷ್ಟು ಉತ್ತಮವಾಗಿ ಕೆಲಸ ಮಾಡಬಹುದು ಎಂದರು.
ನವಲೂರ ಗುಡ್ಡದಲ್ಲಿ ಜೈವಿಕ್ ಇಂಧನ ಗಿಡಗಳು, ಹೊಂಗೆ, ಬೇವು, ಸೀಮರೂಟ್ ಸೇರಿದಂತೆ ವಿವಿಧ ಜಾತಿಯ ಸಸಿಗಳನ್ನು ನೆಡಲಾಗಿದ್ದು, ಮುಂದೆ ನವಲೂರು ಗುಡ್ಡವನ್ನು ಸಂಜೀವಿನಿ ಉದ್ಯಾನವನದ ಹಾಗೆ ಅಭಿವೃದ್ಧಿ ಪಡಿಸಲಾಗುವುದು ಎಂದರು. ಸಹಾಯಕ ಅರಣ್ಯ ಸಂರಕ್ಷಣಾಧಿ ಕಾರಿ ಬಿ.ವೈ. ಈಳಗೇರಿ, ವಲಯ ಅರಣ್ಯಾಧಿಕಾರಿಗಳಾದ ವಿಜಯಕುಮಾರ.ಸಿ, ಬಿ.ಆರ್. ಚಿಕ್ಕಮಠ, ಉಪವಲಯ ಅರಣ್ಯಾಧಿಕಾರಿಗಳಾದ ಸಿ.ಎಚ್. ಗುಜಮಾಗಡಿ, ಕುಲಕರ್ಣಿ, ಅರಣ್ಯ ರಕ್ಷಕ ವಿಠ್ಠಲ ಜೋನಿ ಇದ್ದರು.
ನಗರ ಹಸರಿಕರಣ ಯೋಜನೆ ಅಡಿಯಲ್ಲಿ ಅರಣ್ಯ ಇಲಾಖೆ ಇಲ್ಲಿನ ನವಲೂರಿನ ಗುಡ್ಡವನ್ನು ಸಾಲು ಮರದ ತಿಮ್ಮಕ್ಕಾ ವೃಕ್ಷ ಉದ್ಯಾನವನವನ್ನಾಗಿ ಮಾರ್ಪಡಿಸಲು ಅಗತ್ಯ ಕಾರ್ಯ ಯೋಜನೆ ಹಮ್ಮಿಕೊಂಡಿದೆ. ಈಗಾಗಲೇ 130 ಎಕರೆಯಲ್ಲಿ (85 ಹೆಕ್ಟೇರ್) 19027 ವಿವಿಧ ಜಾತಿಯ ಸಸಿಗಳನ್ನು ನೆಡಲಾಗಿದೆ.
. ಟಿ.ವಿ. ಮಂಜುನಾಥ,
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ