ಚಿಂಚೋಳಿ: ತಾಲೂಕಿನ ಕೆಳದಂಡೆ ಮುಲ್ಲಾಮಾರಿ ಅಚ್ಚುಕಟ್ಟು ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ಜಲಾಶಯದ ಸುರಕ್ಷತೆ ಕಾಪಾಡಲು ಮತ್ತು ಪ್ರವಾಹ ಪರಿಸ್ಥಿತಿ ಎದುರಾಗದಂತೆ ನಿಯಂತ್ರಿಸಲು ಪ್ರತಿನಿತ್ಯ 300 ಕ್ಯೂಸೆಕ್ ನೀರನ್ನು ಮುಲ್ಲಾಮಾರಿ ನದಿಗೆ ಹರಿದು ಬಿಡಲಾಗುತ್ತಿದೆ. ಆದ್ದರಿಂದ ನದಿಪಾತ್ರದ ಗ್ರಾಮಸ್ಥರು ನದಿಗೆ ಇಳಿಯದಂತೆ ಎಚ್ಚರಿಕೆಯಿಂದ ಇರಬೇಕು ಎಂದು ಯೋಜನೆ ಎಇಇ ಹಣಮಂತರಾವ್ ಪೂಜಾರಿ ತಿಳಿಸಿದ್ದಾರೆ.
ಕೆಳದಂಡೆ ಮುಲ್ಲಾಮಾರಿ ಜಲಾಶಯದ ಒಟ್ಟು ಗರಿಷ್ಠ ನೀರಿನ ಮಟ್ಟ 491ಮೀಟರ್ ಇದೆ. ಅಚ್ಚುಕಟ್ಟು ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ನೀರು ಹರಿದು ಬಿಡಲಾಗುತ್ತಿದ್ದು, ಸದ್ಯ 489.5 ಮೀಟರ್ ನೀರು ಸಂಗ್ರಹವಿದೆ. ಕಳೆದ ವರ್ಷ ಜೂನ್ ತಿಂಗಳಿಂದ ಪ್ರಾರಂಭವಾದ ಮಳೆ ಅಕ್ಟೋಬರ್ ತಿಂಗಳ ಅಂತ್ಯದ ವರೆಗೆ ಸುರಿದ ಪರಿಣಾಮ ಜಲಾಶಯದಲ್ಲಿ ಒಳಹರಿವು ಒಮ್ಮೆಲೇ ಹೆಚ್ಚಾಗಿದೆ.
ಆದ್ದರಿಂದ ಮುಲ್ಲಾಮಾರಿ ನದಿಗೆ ಒಂದೇ ರಾತ್ರಿ 80 ಸಾವಿರ ಕ್ಯೂಸೆಕ್ ನೀರನ್ನು ಹರಿ ಬಿಡಲಾಗಿತ್ತು. ಇದರಿಂದಾಗಿ ಚಿಮ್ಮನಚೋಡ, ತಾಜಲಾಪುರ, ಕನಕಪುರ, ಗಾರಂಪಳ್ಳಿ, ಗೌಡನಹಳ್ಳಿ, ನಿಮಾಹೊಸಳ್ಳಿ, ಚಿಂಚೋಳಿ, ಚಂದಾಪುರ, ಅಣವಾರ, ಪರದಾರ ಮೋತಕಪಳ್ಳಿ, ಗರಗಪಳ್ಳಿ, ಬುರಗಪಳ್ಳಿ, ಕರ್ಚಖೇಡ, ಜಟ್ಟೂರ, ಹಲಕೋಡ, ಪೋತಂಗಲ್ ಹಾಗೂ ಸೇಡಂ ತಾಲೂಕಿನ ಕೆಲವು ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಸಾಕಷ್ಟು ಹಾನಿ ಉಂಟು ಮಾಡಿತ್ತು.
ಅನೇಕ ಮನೆಗಳಿಗೆ ನೀರು ನುಗ್ಗಿ ಹಾನಿ ಆಗಿತ್ತು. ಕಳೆದ ವರ್ಷದಂತೆ ಆಸ್ತಿಪಾಸ್ತಿಗೆ ಯಾವುದೇ ಹಾನಿಯಾಗದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಈ ವರ್ಷ ಜಲಾಶಯದಿಂದ ಪ್ರತಿನಿತ್ಯ ನದಿಗೆ ನೀರು ಹರಿ ಬಿಡಲಾಗುತ್ತಿದೆ. ನದಿ ಪಾತ್ರದ ಜನರು ಜನರು ಮತ್ತು ಜಾನು ವಾರುಗಳನ್ನು ನದಿಯತ್ತ ಬರದಂತೆ ಎಚ್ಚರಿಕೆ ವಹಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.