ಮುಂಬೈ: 28 ವರ್ಷದ ಮಹಿಳೆ ಡೆಬಿಟ್ ಕಾರ್ಡ್‌ನ ಮಾಹಿತಿ ನೀಡಿ ಖಾತೆಯಿಂದ 30 ಸಾವಿರ ರೂ. ಕಳೆದುಕೊಂಡ ಘಟನೆ ಮಹಾನಗರದಲ್ಲಿ ನಡೆದಿದೆ.
ಶೈಕ್ಷಣಿಕ ಸಂಸ್ಥೆಯೊಂದರಲ್ಲಿ ಕೌನ್ಸೆಲರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆ, ಖಾಸಗಿ ಬ್ಯಾಂಕೊಂದರಲ್ಲಿ ಖಾತೆ ಹೊಂದಿದ್ದಳು. ಸೆಪ್ಟೆಂಬರ್‌ನಲ್ಲಿ “ನಿಮಗೆ ಕ್ರೆಡಿಟ್ ಕಾರ್ಡ್ ಬಂದಿದೆ. ಆದಷ್ಟು ಬೇಗ ಕಲೆಕ್ಟ್ ಮಾಡಿಕೊಳ್ಳಿ’ ಎಂದು ಬ್ಯಾಂಕ್‌ನಿಂದ ಕರೆಬಂದಿತ್ತು. ಅದೇ ದಿನ ಖಾತೆಯಿಂದ 590 ರೂ. ಕಡಿತವಾಗಿತ್ತು. “ನಾನು ಯಾವ ಕಾರ್ಡ್‌ಗೂ ಅರ್ಜಿ ಸಲ್ಲಿಸಿಲ್ಲ. ನನಗೆ ಹಣ ರೀಫಂಡ್ ಮಾಡಿ’ ಎಂದು ಈಕೆ ಬ್ಯಾಂಕ್‌ನ ಟಾರ್ಡಿಯೊ ಶಾಖೆಯಲ್ಲಿ ದೂರು ದಾಖಲಿಸಿದ್ದಳು.
ಇದಾಗಿ ಕೆಲವೇ ದಿನಗಳಲ್ಲಿ ಬ್ಯಾಂಕ್‌ನ ದೆಹಲಿ ಶಾಖೆಯ ಮ್ಯಾನೇಜರ್ ಎಂದು ಹೇಳಿಕೊಂಡು, ಅಶುತೋಷ್ ಮಿಶ್ರಾ ಎಂಬಾತ ಆಕೆಗೆ ಕರೆಮಾಡಿದ್ದಾನೆ. “ನಿಮ್ಮ ಹಣ ರೀಫಂಡ್ ಆಗುತ್ತೆ. ಆದರೆ, ನೀವು ಡೆಬಿಟ್ ಕಾರ್ಡ್‌ನ ಮಾಹಿತಿ ನೀಡಬೇಕು. ನಿಮ್ಮ ಫೋನ್‌ಗೆ ಬರುವ ಒಟಿಪಿ ಹೇಳಬೇಕು’ ಎಂದು ಮಿಶ್ರಾ ಹೇಳಿದ್ದಾನೆ. ಆರಂಭದಲ್ಲಿ ಇದಕ್ಕೆ ನಿರಾಕರಿಸಿದ ಮಹಿಳೆ, 590 ರೂ. ರೀಫಂಡ್ ಆಗುವ ನಿರೀಕ್ಷೆಯಿಂದ ಕಾರ್ಡಿನ ಎಲ್ಲ ವಿವರದ ಜೊತೆಗೆ ಮೊಬೈಲ್‌ಗೆ ಬಂದ ಒಟಿಪಿಯನ್ನೂ ಹೇಳಿದ್ದಾಳೆ.
ಇದನ್ನೂ ಓದಿ:ಅಂತ್ಯ ಸಂಸ್ಕಾರಕ್ಕೆ ತೆರಳಿ ವಾಪಸ್ಸಾಗುತ್ತಿದ್ದವರ ವಾಹನ ಪಲ್ಟಿ: 30ಕ್ಕೂ ಹೆಚ್ಚು ಜನರಿಗೆ ಗಾಯ
ತಕ್ಷಣವೇ ಆಕೆಯ ಖಾತೆಯಿಂದ 30 ಸಾವಿರ ರೂ. ಹಣ ಕಡಿತವಾಗಿದೆ. ಈ ಕುರಿತು ಡಿ.ಬಿ. ಮಾರ್ಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.