Advertisement

ಎರಡೇ ದಿನದಲ್ಲಿ ವಾಹನ ನೋಂದಣಿ ಶೇ.30 ಹೆಚ್ಚಳ

12:24 PM Apr 02, 2017 | Team Udayavani |

ಬೆಂಗಳೂರು: ಏಪ್ರಿಲ್‌ 1ರಿಂದ ಭಾರತ್‌ ಸ್ಟೇಜ್‌-3 (ಬಿಎಸ್‌-3) ಮಾದರಿಯ ವಾಹನಗಳ ಮಾರಾಟ ನಿಷೇಧದ ಹಿನ್ನೆಲೆಯಲ್ಲಿ ಗುರುವಾರ ಹಾಗೂ ಶುಕ್ರವಾರ ರಾಜ್ಯಾದ್ಯಂತ ಸಾರಿಗೆ ಇಲಾಖೆಯಲ್ಲಿ ವಾಹನಗಳ ನೋಂದಣಿ ಶೇ.30ರಷ್ಟು ಹೆಚ್ಚಳವಾಗಿದೆ.

Advertisement

ವಾಹನಗಳ ಮಾರಾಟಕ್ಕೆ ವಿಶೇಷ ರಿಯಾಯಿತಿ ಘೋಷಣೆ ಪರಿಣಾಮಬೆಂಗಳೂರಿನಲ್ಲಿ ಈ ಎರಡೂ ದಿನಗಳಲ್ಲಿ ಒಟ್ಟು 7,600 ವಾಹನಗಳು ನೋಂದಣಿಯಾಗಿವೆ! 

ವಾಯು ಮಾಲಿನ್ಯ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ಬಿಎಸ್‌-3 ಮಾದರಿಯ ವಾಹನಗಳ ಮಾರಾಟವನ್ನು ಏ.1ರಿಂದ ನಿಷೇಧಿಸಿ ಬುಧವಾರ ಮಹತ್ವದ ಆದೇಶ ನೀಡಿತ್ತು.

ರಾಜ್ಯಾದ್ಯಂತ ಸುಮಾರು 30,000ಕ್ಕೂ ಹೆಚ್ಚು ಬಿಎಸ್‌-3 ಮಾದರಿಯ ವಾಹನಗಳು ಮಾರಾಟಕ್ಕೆ ಸಿದ್ಧವಿದ್ದವು. ಈ ಹಿನ್ನೆಲೆಯಲ್ಲಿ ಕಂಪನಿ ಹಾಗೂ ಶೋ ರೂಂ ಮಾಲೀಕರು ವಿಶೇಷ ರಿಯಾಯ್ತಿಗಳನ್ನು ದಿಢೀರ್‌ ಪ್ರಕಟಿಸಿದ್ದರು. ಹಾಗಾಗಿ ಮಾರಾಟಕ್ಕೆ ಅವಕಾಶವಿದ್ದ ಎರಡು ದಿನಗಳಲ್ಲೇ ದಾಖಲೆ ಎನ್ನಬಹುದಾದ ಪ್ರಮಾಣದಲ್ಲಿ ವಾಹನಗಳು ಮಾರಾಟವಾಗಿವೆ. ಸುಪ್ರೀಂ ಕೋರ್ಟ್‌ ಬಿಎಸ್‌-3 ಮಾದರಿಯ ವಾಹನ ಮಾರಾಟಕ್ಕೆ ನೀಡಿದ್ದ ಗಡುವು ಮುಕ್ತಾಯವಾಗಿದ್ದು, ಶನಿವಾರದಿಂದ ಈ ಮಾದರಿಯ ವಾಹನಗಳ ನೋಂದಣಿ ನಿಷೇಧಗೊಂಡಿದೆ. 

ಆದರೆ ಮಾರ್ಚ್‌ 31ರೊಳಗೆ ಮಾರಾಟವಾಗಿದ್ದರೆ (ಇನ್‌ ವಾಯ್ಸ ಸೇರಿದಂತೆ ಶುಲ್ಕ ಪಾವತಿಯಾದವು) ಆ ವಾಹನಗಳಿಗೆ ಏಪ್ರಿಲ್‌ 1ರ ನಂತರವೂ ನೋಂದಣಿಗೆ ಅವಕಾಶವಿರಲಿದೆ. ಮೂರು ಪಟ್ಟು ನೋಂದಣಿ: ಮಾರ್ಚ್‌ 30 ಹಾಗೂ 31ರಂದು ರಾಜ್ಯಾದ್ಯಂತ ವಾಹನ ನೋಂದಣಿ ಶೇ.30ರಷ್ಟು ಹೆಚ್ಚಳವಾಗಿದೆ. ಸರಾಸರಿ ನಿತ್ಯ 3,000 ವಾಹನ ನೋಂದಣಿಯಾದರೆ, ಈ ಎರಡೂ ದಿನಗಳಲ್ಲಿ ಶೇ.30ರಷ್ಟು ಹೆಚ್ಚುವರಿ ವಾಹನಗಳು ನೋಂದಣಿಯಾಗಿವೆ. ಇನ್ನು 10 ಪ್ರಾದೇಶಿ ಸಾರಿಗೆ ಕಚೇರಿಗಳನ್ನು (ಆರ್‌ಟಿಒ) ಹೊಂದಿರುವ ಬೆಂಗಳೂರು ನಗರದಲ್ಲಿ ಈ ಎರಡೂ ದಿನಗಳಲ್ಲಿ ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚು ವಾಹನಗಳು ನೋಂದಣಿಯಾಗಿವೆ.

Advertisement

ಕೆಲ ಗಂಟೆಗಳಲ್ಲೇ ಬಿಕರಿ: ಬಿಎಸ್‌-3 ಮಾದರಿಯ ವಾಹನಗಳಲ್ಲಿ ಪ್ರಮುಖವಾಗಿ ದ್ವಿಚಕ್ರ ವಾಹನಗಳಿಗೆ ಭಾರಿ ರಿಯಾಯ್ತಿ, ಉಚಿತ ವಿಮಾ ಸೌಲಭ್ಯಗಳನ್ನು ಪ್ರಕಟಿಸಿದ್ದರಿಂದ ಗ್ರಾಹಕರು ಪೈಪೋಟಿಗೆ ಬಿದ್ದವರಂತೆ ಖರೀದಿಗೆ ಮುಂದಾದರು. ಏಪ್ರಿಲ್‌ 1ರ ನಂತರ ಒಂದು ಲಕ್ಷ ರೂ.ಗಿಂತ ಹೆಚ್ಚು ಮೊತ್ತದ ವಾಹನಕ್ಕೆ ತೆರಿಗೆ ಪ್ರಮಾಣ ಶೇ.12ರಿಂದ ಶೇ.18ರಷ್ಟಕ್ಕೆಏರಿಕೆಯಾಗುವ ಹಿನ್ನೆಲೆಯಲ್ಲಿ ಮಾ.31ರೊಳಗೆ ಖರೀದಿಗೆ ಮನಸ್ಸು ಮಾಡಿದ್ದರಿಂದ ಬಹಳಷ್ಟು ಮಳಿಗೆಗಳಲ್ಲಿ ಶುಕ್ರವಾರ ಕೆಲ ಗಂಟೆಗಳಲ್ಲೇ ಬಿಎಸ್‌ -3 ಮಾದರಿಯ ವಾಹನಗಳು ಬಿಕರಿಯಾಗಿದ್ದವು.

ಗ್ರಾಹಕರಿಂದ ಬೇಡಿಕೆ ಹೆಚ್ಚಾಗಿದ್ದರಿಂದ ಹಲವೆಡೆ “ಬಿಎಸ್‌-3 ಮಾದರಿಯ ವಾಹನಗಳಿಲ್ಲ’ ಎಂಬ ಫ‌ಲಕ ಅಳವಡಿಸಿದ್ದು ಕಂಡುಬಂತು.  ರಾಜ್ಯಾದ್ಯಂತ ನಿತ್ಯ ಸರಾಸರಿ 3000 ವಾಹನಗಳು ನೋಂದಣಿಯಾಗುತ್ತವೆ. ಆದರೆ ಮಾರ್ಚ್‌ 30 ಹಾಗೂ 31ರಂದು ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಶೇ.30ರಷ್ಟು ಹೆಚ್ಚುವರಿ ವಾಹನಗಳು ನೋಂದಣಿಯಾಗಿವೆ.
– ಬಿ.ದಯಾನಂದ, ಸಾರಿಗೆ ಇಲಾಖೆ ಆಯುಕ್ತ

ಬೆಂಗಳೂರಿನಲ್ಲಿ ಗುರುವಾರ 2,100 ಹಾಗೂ ಶುಕ್ರವಾರ 5,500 ವಾಹನಗಳು ನೋಂದಣಿಯಾಗಿದ್ದು, ಬಹುತೇಕ ದ್ವಿಚಕ್ರ ವಾಹನಗಳಾಗಿವೆ. ಬೆಂಗಳೂರಿನಲ್ಲಿ ನಿತ್ಯ ಸರಾಸರಿ 1,500 ವಾಹನಗಳು ನೋಂದಣೆಯಾಗುತ್ತಿದ್ದು, ಶುಕ್ರವಾರ ಮೂರು ಪಟ್ಟು ಹೆಚ್ಚು ವಾಹನಗಳು ನೋಂದಣಿಯಾಗಿವೆ. ಮಾ.31ರೊಳಗೆ ಇನ್‌ವಾಯ್ಸ ಮುಗಿದು ಶುಲ್ಕ ಪಾವತಿಸಿದ್ದರೆ ಅಂತಹ ಬಿಎಸ್‌-3 ಮಾದರಿಯ ವಾಹನ ನೋಂದಣಿಗೆ ಅವಕಾಶವಿರಲಿದೆ.
– ಜ್ಞಾನೇಂದ್ರ ಕುಮಾರ್‌, ಜಂಟಿ ಆಯುಕ್ತ (ಬೆಂಗಳೂರು ನಗರ)
 

Advertisement

Udayavani is now on Telegram. Click here to join our channel and stay updated with the latest news.

Next