Advertisement
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣ ದಲ್ಲಿ ಅಧ್ಯಕ್ಷೆ ಪದ್ಮಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಪುಟ್ಟಮ್ಮ, ವೆಳ್ಳಂಗಿರಿ ಇತರರು, ಈ ವಿಷಯ ಪ್ರಸ್ತಾಪಿಸಿ, ಇದಕ್ಕೆ ಪ್ರತಿಕ್ರಿಯೆ ನೀಡುವಂತೆ ಪಟ್ಟು ಹಿಡಿದರು.
Related Articles
Advertisement
ಟ್ಯಾಂಕರ್ ಮೂಲಕ ನೀರು ಕೊಡಿ: ಜಾಬಗೆರೆ, ದಲ್ಲಾಳು, ದಲ್ಲಾಳು ಕೊಪ್ಪಲು, ರಂಗಯ್ಯನ ಕೊಪ್ಪಲು, ಆಜಾದ್‌ನಗರ, ಕಳ್ಳಿ ಕೊಪ್ಪಲು, ಹಳ್ಳದ ಕೊಪ್ಪಲು, ಎರಡನೇ ಪಕ್ಷಿರಾಜಪುರ, ಅಂಬೇಡ್ಕರ್ ನಗರ, ಕಲ್ಲೂರಪ್ಪನಬೆಟ್ಟ, ಕಡೆಮನುಗನಹಳ್ಳಿ, ಸೋಮನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಕುಡಿಯುವ ನೀರಿನ ತತ್ವಾರ ಹೆಚ್ಚಿದೆ.
ಈ ಭಾಗಗಳಲ್ಲಿ ನೀರು ಪೂರೈಕೆಯೇ ದೊಡ್ಡ ಸಮಸ್ಯೆಯಾಗಿದೆ. ಟ್ಯಾಂಕರ್ ಮೂಲಕ ನೀರು ಒದಗಿಸಿ ಎಂದು ಒತ್ತಾಯಿಸಿದರು. ನೀರಿನ ಸಮಸ್ಯೆ ಬಗೆಹರಿಸಲು ಸರ್ಕಾರ 40 ಲಕ್ಷ ರೂ. ಬಿಡುಗಡೆ ಮಾಡಿದ್ದು, ಟ್ಯಾಂಕರ್ ಮೂಲಕ ನೀರು ಪೂರೈಕೆ ಸೇರಿದಂತೆ ಅಗತ್ಯ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುವುದೆಂದು ಎಇಇ ನಟರಾಜ್ ತಿಳಿಸಿದರು.
ತಾಪಂ ಅನುದಾನದಡಿ 15 ಲಕ್ಷ ರೂ. ಕ್ರಿಯಾಯೋಜನೆ ರೂಪಿಸಿದ್ದು, ಅಂಗನವಾಡಿ ದುರಸ್ತಿ ಮಾಡಲು ಇದುವರೆಗೂ ಗುತ್ತಿಗೆದಾರರನ್ನು ನೇಮಿಸಿಲ್ಲ. ಮಾರ್ಚ್‌ನೊಳಗೆ ಕಾಮಗಾರಿ ಪೂರ್ಣಗೊಳಿಸಲು ಆಗುವುದಿಲ್ಲ. ಕೆಲ ಸದಸ್ಯರು ಕ್ರಿಯಾಯೋಜನೆಯನ್ನು ಪರಿಷ್ಕರಿಸಬೇಕು ಎಂದು ಹೇಳಿ ಇದುವರೆಗೂ ಯಾವುದೇ ಸೂಚನೆ ನೀಡಿಲ್ಲ ಎಂದು ಜಿಪಂ.ಎಇಇ ಭೋಜರಾಜ್ ತಿಳಿಸಿದರು.
ಕ್ರಿಮಿನಲ್ ಮೊಕದ್ದಮೆ: ಇದಕ್ಕೆ ಪ್ರತಿಕ್ರಿಯಿಸಿದ ಇಒ, ಮಾರ್ಚ್ ಒಳಗೆ ಎಲ್ಲಾ ಕಾಮಗಾರಿಗಳು, ಅದರಲ್ಲೂ ಎಸ್‌ಇಪಿ ಹಾಗೂ ಟಎಸ್‌ಪಿ ಯೋಜನೆ ಕಾಮಗಾರಿಗಳು ಪೂರ್ಣಗೊಳ್ಳಬೇಕು. ಇಲ್ಲದಿದ್ದಲ್ಲಿ ವಿಳಂಬ ಮಾಡುವ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಾಗುವುದು ಎಂದು ಎಚ್ಚರಿಸಿದರು.
ಗೈರಾದ ಅಧಿಕಾರಿಗಳಿಗೆ ನೋಟಿಸ್: ಎಇಇಗಳಿಬ್ಬರು ಸಭೆಗೆ ಬಂದಿಲ್ಲ. ಯಾವುದೇ ಮಾಹಿತಿಯನ್ನೂ ನೀಡಿಲ್ಲವೆಂದು ಇಒ ಸಭೆಗೆ ತಿಳಿಸಿದಾಗ, ಅಧಿಕಾರಿಗಳು ಸದಸ್ಯರ ಫೋನ್ ಕರೆಗಳನ್ನು ಸ್ವೀಕರಿಸುವುದಿಲ್ಲ, ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ ಎಂದು ಸದಸ್ಯರು ದೂರಿದರು ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಅಧ್ಯಕ್ಷೆ ಪದ್ಮಮ್ಮ ತಿಳಿಸಿದರು.
ಸಭೆ, ಸಮಾರಂಭಗಳಿಗೆ ಸದಸ್ಯರಿಗೆ ಆಹ್ವಾನವಿಲ್ಲ: ಕ್ಷೇತ್ರದಲ್ಲಿ ಶಾಸಕರು ನಡೆಸುವ ಸಭೆ, ಸಮಾರಂಭಗಳಿಗೆ ಅಧಿಕಾರಿಗಳು ತಮ್ಮನ್ನು ಆಹ್ವಾನಿಸುತ್ತಿಲ್ಲ. ಇಂತಹ ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಮಂಡಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು. ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸುತ್ತೇವೆ ಎಂದು ಇಒ ಭರವಸೆ ನೀಡಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು.
ಅಂಗನವಾಡಿ ಸಹಾಯಕಿಗೆ ನಿರ್ಬಂಧ: ಹನಗೋಡು ಬಳಿಯ ಉಡುವೆಪುರ ಅಂಗನವಾಡಿ ಕೇಂದ್ರದ ಸಹಾಯಕಿ ಲಕ್ಷ್ಮೀ ಅವರನ್ನು ಅದೇ ಗ್ರಾಮದ ಮೇಲ್ವರ್ಗದವರು ಕಳೆದ ನಾಲ್ಕು ತಿಂಗಳಿನಿಂದ ಕೆಲಸ ಮಾಡಲು ಅವಕಾಶ ನೀಡುತ್ತಿಲ್ಲವೆಂದು ಸಿಡಿಪಿಒ ನವೀನ್ ಸಭೆಗೆ ತಿಳಿಸಿದರು. ಇದೊಂದು ಗಂಭೀರ ವಿಚಾರವಾಗಿದ್ದು, ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ, ಜನರಿಗೆ ಕಾನೂನು ತಿಳಿಸಬೇಕು. ಇದಕ್ಕೆ ಒಪ್ಪದಿದ್ದಲ್ಲಿ ಆಕೆಗೆ ರಕ್ಷಣೆ ನೀಡಿ ಕಾನೂನು ರೀತಿ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕೆಂದು ಸದಸ್ಯರು ನಿರ್ಣಯ ಕೈಗೊಂಡರು.
ಊಟ ಕೊಡ್ತಿಲ್ಲ, ಬೇಳೆಯಲ್ಲಿ ಹುಳು: ತಾಲೂಕಿನ ಯಲಚವಾಡಿ ಪ್ರಾಥಮಿಕ ಶಾಲೆಯಲ್ಲಿ ಪಡಿತರ ಕಡಿಮೆ ಬಂದಿದೆ ಎಂದು ವಾರದಲ್ಲಿ ನಾಲ್ಕುದಿನ ಮಕ್ಕಳನ್ನು ಊಟಕ್ಕೆ ಮನೆಗೆ ಕಳುಹಿಸಲಾಗುತ್ತಿದೆ. ಹುಳು ಇರುವ ಬೇಳೆ ವಿತರಿಸಲಾಗುತ್ತದೆ ಎಂದು ಸದಸ್ಯ ಶಿವಣ್ಣ ದೂರಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ಈ ವೇಳೆ ತಾಪಂ ಉಪಾಧ್ಯಕ್ಷ ಪ್ರೇಮ್‌ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಗಣಪತಿ ರಾವ್, ಇಂಡೋಲ್ಕರ್ ಇತರರು ಉಪಸ್ಥಿತರಿದ್ದರು.
ನೀರು ಕೊಡದಿದ್ದರೆ ಕೊಳವೆಬಾವಿ ಜಪ್ತಿಕುಡಿಯುವ ನೀರಿನ ಸಮಸ್ಯೆಗಳಿರುವ ಹಳ್ಳಿಗಳಲ್ಲಿ ಗ್ರಾಮದ ಪಕ್ಕದಲ್ಲೇ ರೈತರ ಪಂಪ್‌ಸೆಟ್‌ನಲ್ಲಿ ನೀರು ಸಿಗುತ್ತಿದ್ದರೆ ತಿಂಗಳ ಬಾಡಿಗೆ ಆಧಾರದ ಮೇಲೆ ನೀರು ಪಡೆಯಲಾಗುವುದು. ಜಮೀನು ಮಾಲಿಕರು ನೀರು ಕೊಡಲು ಒಪ್ಪದಿದ್ದರೆ ಸರ್ಕಾರವೇ ಕೊಳವೆಬಾವಿಯನ್ನು ಮುಟ್ಟುಗೋಲು ಹಾಕಿಕೊಂಡು ನೀರು ಪೂರೈಸುತ್ತದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಕುಮಾರ್ ತಿಳಿಸಿದರು. ಹುಣಸೂರು ತಾಲೂಕಿನ 33 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ. ತಕ್ಷಣಕ್ಕೆ ಹೆಬ್ಬಳ, ಬೋವಿ ಕಾಲೋನಿ, ಬಿ.ಕಾಲೋನಿ, ಶಂಕರೇಗೌಡನ ಕೊಪ್ಪಲು, ಜಾಬಗೆರೆ, ಕೆರೆಯೂರುಗಳಲ್ಲಿ ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ ಎಂದರು.