Advertisement

ಶಿವಾಜಿನಗರದಲ್ಲಿ 30 ಜನರಿಗೆ ಸೋಂಕು‌

04:08 AM May 17, 2020 | Lakshmi GovindaRaj |

ಬೆಂಗಳೂರು: ನಗರದ ಹೋಟೆಲ್‌ವೊಂದರಲ್ಲಿ ಸಹಾಯಕ ಸಿಬ್ಬಂದಿಯಾಗಿದ್ದವರ (ರೋಗಿ ಸಂಖ್ಯೆ 653) ಮೂಲಕ ಕಾಣಿಸಿಕೊಂಡ ಸೋಂಕು, ಶನಿವಾರ 14 ಮಂದಿ ಸಂಪರ್ಕಿತರಿಗೆ ಹರಡುವ ಮೂಲಕ 30ಜನರನ್ನು ಆವರಿಸಿದೆ. ಶಿವಾಜಿನಗರದ ಹೋಟೆಲ್‌ವೊಂದರಲ್ಲಿ ಹಲವು ಕೊರೊನಾ ಶಂಕಿತರನ್ನು ಕ್ವಾರಂಟೈನ್‌ ಮಾಡಲಾಗಿತ್ತು. ಇವರ ಕ್ವಾರಂಟೈನ್‌ ಅವಧಿ ಮುಕ್ತಾಯವಾಗುವ ವೇಳೆ ಹೋಟೆಲ್‌ನ ಎಲ್ಲ ಸಿಬ್ಬಂದಿಗಳನ್ನು ಸೋಂಕು ಪರೀಕ್ಷೆಗೆ  ಒಳಪಡಿಸಲಾಗಿತ್ತು.

Advertisement

ಈ ವೇಳೆ ಸಹಾಯಕ ಸಿಬ್ಬಂದಿಗೂ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದ ಪ್ರಾಥಮಿಕ, ದ್ವಿತೀಯ ಸಂಪರ್ಕಿತರನ್ನು  ಕ್ವಾರಂಟೈನ್‌ ಮಾಡಲಾಗಿತ್ತು. ಈ ಸಂಬಂಧ ಉದಯವಾಣಿಯೊಂದಿಗೆ ಮಾತನಾಡಿದ ಪೂರ್ವವಲಯದ ಜಂಟಿ ಆಯುಕ್ತೆ ಪಲ್ಲವಿ ಅವರು, ಈ ಭಾಗದಲ್ಲಿ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ನೆಲೆಸಿದ್ದ ಇಡೀ  ಕಟ್ಟಡದಲ್ಲಿದ್ದ 91 ಜನರನ್ನು ಕ್ವಾರಂಟೈನ್‌ ಮಾಡಲಾಗಿತ್ತು. ಇವರಲ್ಲಿ ಬಹುತೇಕರು ಬೇರೆ ರಾಜ್ಯಗಳಿಂದ ಇಲ್ಲಿ ಕೆಲಸಕ್ಕೆ ಬಂದವರಿದ್ದಾರೆ.

ಲಾಕ್‌ಡೌನ್‌ ಘೋಷಣೆಯಾದ ಹಿನ್ನೆಲೆಯಲ್ಲಿ ಎಲ್ಲರೂ ಮನೆಯಲ್ಲೇ ಇದ್ದರು. ಹೀಗಾಗಿ, ಸೋಂಕಿನ ಪ್ರಮಾಣ ಹಬ್ಬುವುದು ಕಡಿಮೆಯಾಗಿದೆ. ಕ್ವಾರಂಟೈನ್‌ ನಲ್ಲಿ ಇರುವವರೆಲ್ಲರನ್ನು ಹಂತ ಹಂತವಾಗಿ ಸೋಂಕು ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಶನಿವಾರ 20 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಲ್ಲಿಯವರೆಗೆ  30ಜನರಲ್ಲಿ ಕೊರೊನಾ ದೃಢಪಟ್ಟಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲರನ್ನು ಕ್ವಾರಂಟೈನ್‌ ಮಾಡಿರುವುದರಿಂದ ಇವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚುವುದು ತಪ್ಪಿದೆ. ಅಲ್ಲದೆ, ಇಲ್ಲಿನ ಮೂರು  ವಾರ್ಡ್‌ಗಳಲ್ಲಿನ ಎಲ್ಲ ಮಳಿಗೆಗಳನ್ನು ಮುಂಜಾಗ್ರತಾ ಕ್ರಮವಾಗಿ ಮುಚ್ಚಿಸಲಾಗಿದೆ.

ಒಟ್ಟಾರೆ ಕಂಟೈನ್ಮೆಂಟ್‌ಗೆ ಪಾಲಿಕೆ ಹಿಂದೇಟು: ಸೋಂಕು ಈ ಭಾಗದಲ್ಲಿ ಒಟ್ಟು 30 ಜನರಲ್ಲಿ ಕಾಣಿಸಿಕೊಂಡರೂ ಶಿವಾಜಿನಗರದಲ್ಲಿ ಸೋಂಕು ಕಾಣಿಸಿಕೊಂಡ ಇಡೀ ಪ್ರದೇಶವನ್ನು ಪಾಲಿಕೆ ಕಂಟೈನ್ಮೆಂಟ್‌ ಮಾಡಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿಲ್ಲ. ಮೊದಲು ಕೊರೊನಾ ಸೋಂಕು ಕಾಣಿಸಿಕೊಂಡವರೊಂದಿಗೆ ಇದ್ದ ಎಲ್ಲ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿ ತರಲ್ಲಿ ಇದ್ದ ಎಲ್ಲರನ್ನು ಕ್ವಾರಂಟೈನ್‌ ಮಾಡಲಾಗಿದೆಯಾದರೂ ಇವರಿಂದ ಈ ಭಾಗದಲ್ಲಿ ಬೇರೆಯಾರಿಗಾದರೂ ಕೊರೊನಾ ಸೋಂಕು  ಹಬ್ಬಿದ್ದರೆ ಏನು ಎನ್ನುವ ಆತಂಕ ಈಗ ಶುರುವಾಗಿದೆ. ಉಳಿದ ಭಾಗದಲ್ಲಿ ಕಂಟೈನ್ಮೆಂಟ್‌ ಎಂದು ಘೋಷಣೆ ಮಾಡಿದ ಮೇಲೆ ನಡೆಯುವ ಮನೆ ಮನೆ ಆರೋಗ್ಯ ತಪಾಸಣೆ, ಆರೋಗ್ಯ ಕೇಂದ್ರ  ಸ್ಥಾಪನೆ ಕಾರ್ಯಾಚರಣೆಗಳು ಇಲ್ಲಿ  ನಡೆದಿರುವುದು ವರದಿ ಯಾಗಿಲ್ಲ. ಶಿವಾಜಿನಗರವೂ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿದೆ. ಹೀಗಾಗಿ ಆತಂಕ ಹೆಚ್ಚಿದೆ.

ಪಾದರಾಯನಪುರದಲ್ಲಿ ಮುಂದುವರಿದ ಪರೀಕ್ಷೆ: ಪಾದರಾಯನಪುರದಲ್ಲಿ ರ್‍ಯಾಂಡಮ್‌ ಸೋಂಕು ಪರೀಕ್ಷೆ ಮುಂದುವರಿದಿದ್ದು, ಕಳೆದ ಎರಡು ದಿನಗಳಿಗಿಂತ ಶನಿವಾರ ಒಂದೇ ದಿನ 68 ಜನರಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ. ಕಿಯೋಸ್ಕ್ನ ಮೂಲಕ 38 ಜನರಿಗೆ ಹಾಗೂ  ಕೆಎಸ್‌ಆರ್‌ಟಿಸಿ ಬಸ್‌ ಕ್ಲಿನಿಕ್‌ನ ಮೂಲಕ 30 ಜನ ಸೇರಿ ಒಟ್ಟು 68 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ. ಸಮುದಾಯ ಮಟ್ಟದ ಸೋಂಕು ಪರೀಕ್ಷೆ ಪ್ರಾರಂಭವಾದ ಮೊದಲ ದಿನ ಗುರುವಾರ ಪರೀಕ್ಷೆಗೆ ಒಳಗಾಗಿದ್ದ 11 ಜನರ  ವರದಿ ನೆಗೆಟಿವ್‌ ಬಂದಿದೆ. ಶನಿವಾರ 16 ಜನರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಇವರ ವರದಿ ಇಂದು (ಮೇ.17)ಕ್ಕೆ ಬರುವ ಸಾಧ್ಯತೆ ಇದೆ ಎಂದು ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ ಮಾಹಿತಿ ನೀಡಿದ್ದಾರೆ.

Advertisement

ಆತಂಕಕ್ಕೆ ಒಳಗಾಗಬೇಡಿ: ಶಿವಾಜಿನಗರದಲ್ಲಿ ಸೋಂಕು ಒಬ್ಬರಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಆತನ ಸಂಪರ್ಕದಲ್ಲಿದ್ದ ಎಲ್ಲರನ್ನು ಕ್ವಾರಂಟೈನ್‌ ಮಾಡಲಾಗಿದೆ. ಕಳೆದ ಎರಡು ದಿನಗಳಿಂದ ಕ್ವಾರಂಟೈನ್‌ನಲ್ಲಿ ಇರುವವರಲ್ಲೇ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ, ಇಲ್ಲಿ ಸಮುದಾಯಕ್ಕೆ ಹಬ್ಬಿದೆ ಎಂದು ಜನ ಆತಂಕಕ್ಕೆ ಒಳಗಾಗುವ  ಅಗತ್ಯವಿಲ್ಲ. ಕ್ವಾರಂಟೈನ್‌ನಲ್ಲಿ ಇರುವವರಲ್ಲಿ ಮಾತ್ರ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು  ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next