ವಿದಿಶಾ: ಬಾವಿಗೆ ಬಿದ್ದ ಬಾಲಕಿಯನ್ನು ರಕ್ಷಿಸಲು ಹೋಗಿ 30 ಮಂದಿ ಬಾವಿಗೆ ಬಿದ್ದ ಘಟನೆ ಮಧ್ಯ ಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ.
ವಿದಿಶಾ ಪಟ್ಟಣದಿಂದ 50 ಕಿ.ಮೀ ದೂರದಲ್ಲಿರುವ ಗಂಜ್ ಬಸೋಡಾದಲ್ಲಿ ಈ ಘಟನೆ ನಡೆದಿದೆ. ಸುಮಾರು 50 ಅಡಿಗಳಷ್ಟು ಆಳವಿರುವ ಬಾವಿಯಲ್ಲಿ ಸುಮಾರು 20 ಅಡಿಗಳಷ್ಟು ನೀರಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ನಾಲ್ಕು ಶವಗಳು ಪತ್ತೆಯಾಗಿದ್ದು, 15 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಇನ್ನೂ 13 ಜನರು ಕಾಣೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಶ್ರೀನಗರ: ಇಬ್ಬರು ಲಷ್ಕರ್ ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು
ಸಂಜೆ ಆರು ಗಂಟೆ ಸುಮಾರಿಗೆ ಓರ್ವ ಬಾಲಕಿ ಬಾವಿಗೆ ಬಿದ್ದಿದ್ದಳು. ಇವಳನ್ನು ರಕ್ಷಿಸಲು ಕೆಲವರು ಬಾವಿಗೆ ಇಳಿದಿದ್ದಾರೆ. ಇನ್ನು ಕೆಲವರು ಅವರಿಗೆ ಸಹಾಯ ಮಾಡಲು ಬಾವಿ ದಂಡೆಯಲ್ಲಿ ನಿಂತಿದ್ದರು. ಆದರೆ ಬಾವಿ ದಂಡೆ ಕುಸಿದು, ಅದರ ಮೇಲಿದ್ದವರು ಬಾವಿಗೆ ಬಿದ್ದಿದ್ದಾರೆ. ಕೆಲವರು ನೀರಿಗೆ ಬಿದ್ದಿರುವ ದಂಡೆಯ ಅವಶೇಷಗಳಡಿ ಸಿಲುಕಿದ್ದಾರೆ.
ರಾತ್ರಿ ಸುಮಾರು 11 ಗಂಟೆ ಸಮಯಕ್ಕೆ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಟ್ರಾಕ್ಟರ್, ನಾಲ್ವರು ಪೊಲೀಸರು ಕೂಡಾ ಜಾರಿ ಬಾವಿಗೆ ಬಿದ್ದಿದ್ಧಾರೆ ಎಂದು ವರದಿಯಾಗಿದೆ.
ವಿದಿಶಾದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ ಎಂದು ಮಧ್ಯಪ್ರದೇಶ ಸಿಎಂ ಹೇಳಿದರು.