ಜೆರುಸಲೇಂ: ಇಸ್ರೇಲ್, ಹಮಾಸ್ ನಡುವಿನ ಯುದ್ಧ ಸತತ 17ನೇ ದಿನವೂ ಮುಂದುವರಿದಿದ್ದು, ಸಮರ ತಾರಕಕ್ಕೇರಿದ್ದು, ಸೋಮವಾರ (ಅಕ್ಟೋಬರ್ 23) ಇಸ್ರೇಲ್ ಪಡೆಯ ವೈಮಾನಿಕ ದಾಳಿಗೆ ಗಾಜಾದಲ್ಲಿನ ಕಟ್ಟಡಗಳು ಧ್ವಂಸವಾಗಿದ್ದು, ಕನಿಷ್ಠ 30 ಮಂದಿ ಪ್ಯಾಲೆಸ್ತೇನಿಯರು ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:BIGG BOSS: ಬಿಗ್ ಬಾಸ್ ಮನೆಯಿಂದಲೇ ಸ್ಪರ್ಧಿ ವರ್ತೂರು ಸಂತೋಷ್ ಬಂಧನ
ಗಾಜಾದ ಅಲ್ ಶುಹಾದಾ ಪ್ರದೇಶದಲ್ಲಿನ ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ಪಡೆ ದಾಳಿ ನಡೆಸಿರುವುದಾಗಿ ವರದಿಯಾಗಿದೆ. ಗಾಜಾ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, 117 ಮಕ್ಕಳು ಸೇರಿದಂತೆ 266 ಪ್ಯಾಲೆಸ್ತೇನಿಯರು ಕಳೆದ 24 ಗಂಟೆಯಲ್ಲಿ ಸಾವಿಗೀಡಾಗಿರುವುದಾಗಿ ತಿಳಿಸಿದೆ.
ಅಕ್ಟೋಬರ್ 7ರಂದು ಇಸ್ರೇಲ್-ಹಮಾಸ್ ನಡುವೆ ಯುದ್ಧ ಆರಂಭಗೊಂಡಿದ್ದು, ಈವರೆಗೆ ಇಸ್ರೇಲ್ ನ ಬಾಂಬ್ ದಾಳಿಗೆ 4,600 ಮಂದಿ ಗಾಜಾದಲ್ಲಿ ಕೊನೆಯುಸಿರೆಳೆದಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ಹಮಾಸ್ ನಡೆಸಿದ ದಾಳಿಗೆ 1,400 ಇಸ್ರೇಲ್ ಪ್ರಜೆಗಳು ಸಾವನ್ನಪ್ಪಿದ್ದಾರೆ ಎಂದು ವರದಿ ವಿವರಿಸಿದೆ.
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಿಂದಾಗಿ ಜಗತ್ತಿನಾದ್ಯಂತ ಕಳವಳ ಹೆಚ್ಚಳವಾಗತೊಡಗಿದೆ. ಒಂದು ವೇಳೆ ಹಿಜಬುಲ್ಲಾ ಯುದ್ಧಕ್ಕೆ ಕೈಜೋಡಿಸಿದರೆ ಇದು ಎರಡನೇ ಲೆಬನಾನ್ ಯುದ್ಧಕ್ಕೆ ನಾಂದಿ ಹಾಡಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.