ಹೊಸದಿಲ್ಲಿ : 1984ರ ಸಿಕ್ಖ್ ವಿರೋಧಿ ಗಲಭೆ ಪ್ರಕರಣದಲ್ಲಿ ಅಪರಾಧಿ ಎಂದು ಪರಿಗಣಿಸಲ್ಪಟ್ಟು ದಿಲ್ಲಿ ಹೈಕೋರ್ಟಿನಿಂದ ಈಚೆಗೆ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಹಿರಿಯ ಮಾಜಿ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಅವರು ಕೋರ್ಟ್ ಮುಂದೆ ಶರಣಾಗುವುದಕ್ಕೆ ತನಗೆ ಇನ್ನೂ 30 ದಿನಗಳ ಕಾಲಾವಕಾಶ ಬೇಕೆಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಸಜ್ಜನ್ ಕುಮಾರ್ ಸಲ್ಲಿಸಿರುವ ಈ ಅರ್ಜಿ ಇದೇ ಶುಕ್ರವಾರ ವಿಚಾರಣೆಗೆ ಬರಲಿದೆ ಎಂದು ಎಎನ್‌ಐ ವರದಿ ಮಾಡಿದೆ.
ದಿಲ್ಲಿ ಕಂಟೋನ್ಮೆಂಟ್ ಪ್ರದೇಶದಲ್ಲಿ 1984ರಲ್ಲಿ ನಡೆದಿದ್ದ ಸಿಕ್ಖರ ಹತ್ಯೆಗೆ ಸಂಬಂಧಿಸಿ ಸಾಕ್ಷಿದಾರರೋರ್ವರು ಸುಪ್ರೀಂ ಕೋರ್ಟಿಗೆ ಕೇವಿಯಟ್ ಸಲ್ಲಿಸಿರುವ ಹೊರತಾಗಿಯೂ ಸಜ್ಜನ್ ಕುಮಾರ್, ಕೋರ್ಟ್ ಮುಂದೆ ಶರಣಾಗುವುದಕ್ಕೆ ತನಗೆ ಇನ್ನೂ 30 ದಿನಗಳ ಕಾಲಾವಕಾಶ ಬೇಕೆಂದು ಕೋರಿರುವುದು ಗಮನಾರ್ಹವಾಗಿದೆ ಎಂದು ವರದಿಗಳು ಹೇಳಿವೆ.
ಸಜ್ಜನ್ ಕುಮಾರ್ ದಿಲ್ಲಿ ಹೈಕೋರ್ಟ್ ನೀಡಿರುವ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಒಂದೊಮ್ಮೆ ಸುಪ್ರೀಂ ಕೋರ್ಟ್ ಮೆಟ್ಟಲು ಹತ್ತಿದ್ದೇ ಆದರೆ ಅವರ ಅರ್ಜಿಯನ್ನು ತೀರ್ಮಾನಿಸುವ ಮುನ್ನ ಸಂತ್ರಸ್ತರ ಅಭಿಪ್ರಾಯಗಳನ್ನು ಸರ್ವೋಚ್ಚ ನ್ಯಾಯಾಲಯ ಆಲಿಸಬೇಕು ಎಂದು ಸಾಕ್ಷಿದಾರ ವ್ಯಕ್ತಿ ತನ್ನ ಕೇವಿಯಟ್ ನಲ್ಲಿ ಆಗ್ರಹಿಸಿದ್ದಾರೆ.
ಹಾಗಿದ್ದರೂ ಸಂತ್ರಸ್ತರನ್ನು ಪ್ರತಿನಿಧಿಸುತ್ತಿರುವ ವಕೀಲ ಎಚ್ ಎಸ್ ಫೂಲ್ಕ ಅರು “ಸಂತ್ರಸ್ತರಿಗೆ ನಾನು ಸುಪ್ರೀಂ ಕೋರ್ಟಿಗೆ ಹೋಗದಿರುವಂತೆ ಸಲಹೆ ನೀಡಿದ್ದೇನೆ’ ಎಂದು ಹೇಳಿದ್ದಾರೆ.