ನ್ಯೂಯಾರ್ಕ್: ಮಹಾಮಾರಿ ಕೋವಿಡ್-19ನ ಹಾವಳಿಗೆ ತತ್ತರಿಸುವ ಅಮೆರಿಕದಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚುತ್ತಲೇ ಇದೆ. ಸುಮಾರು 30 ಮಿಲಿಯನ್‌ಗೂ ಹೆಚ್ಚು ಮಂದಿ ನಿರುದ್ಯೋಗ ಭತ್ಯೆಗೆ ಅರ್ಜಿ ಸಲ್ಲಿಸಿದ್ದಾರೆ.
ಐದು ವಾರಗಳಲ್ಲಿ ಸರಿಸುಮಾರು 26 ದಶಲಕ್ಷ ಜನರು ನಿರುದ್ಯೋಗ ಸಹಾಯಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಒಂದೇ ವಾರದಲ್ಲಿ 3. 8 ಲಕ್ಷ ಮಂದಿಯಷ್ಟು ಜನರು ಅರ್ಜಿ ಸಲ್ಲಿಸಿದ್ದಾರೆ.
ಇದು ದಾಖಲೆಯ ಉದ್ಯೋಗ ಕಡಿತವಾಗಲಿದ್ದು, ಈ ಮೊದಲೇ ಎಪ್ರಿಲ್‌ನಲ್ಲಿ ನಿರುದ್ಯೋಗ ದರವು ಶೇ 20ರಷ್ಟು ಹೆಚ್ಚಾಗಬಹುದು ಎಂದಿದ್ದರು ಅರ್ಥಶಾಸ್ತ್ರಜ್ಞರು. ಆ ಮಾತು ಈಗ ನಿಜವಾಗಿದೆ. ಸರಕಾರ ಆರ್ಥಿಕ ಪುನಶ್ಚೇತನಕ್ಕೆ ಯೋಜನೆ ರೂಪಿಸುತ್ತಿದ್ದರೂ ಎಲ್ಲರಿಗೂ ಮರಳಿ ಉದ್ಯೋಗ ಸಿಗುವ ಸಾಧ್ಯತೆ ಕಡಿಮೆ ಇದೆ.
ಬಾಡಿಗೆ ಕೈಬಿಡಿ ಚಳವಳಿ
ಅಮೆರಿಕದ ಕೆಲವು ಪ್ರದೇಶಗಳಲ್ಲಿ ಮನೆಗಳ ಬಾಡಿಗೆ ವಸೂಲು ಮಾಡದಂತೆ ಮನೆ ಮಾಲಕರಿಗೆ ಸೂಚನೆ ನೀಡಬೇಕೆಂದು ಸರಕಾರವನ್ನು ಆಗ್ರಹಿಸಿ ಜನರು ಬೀದಿಗಿಳಿದಿದ್ದಾರೆ.
ನ್ಯೂಯಾರ್ಕ್, ಕ್ಯಾಲಿಫೋರ್ನಿಯಾ ಸೇರಿದಂತೆ ಹಲವೆಡೆ ಜನರು ಪ್ರತಿಭಟನೆಗೆ ಇಳಿದಿದ್ದು, ಕೋವಿಡ್ ಲಾಕ್‌ಡೌನ್‌ನಿಂದ ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಎಲ್ಲ ಕುಟುಂಬಗಳೂ ಆರ್ಥಿಕ ಸಂಕಷ್ಟದಲ್ಲಿವೆ. ಹಾಗಾಗಿ ಬಾಡಿಗೆ ಪಾವತಿಸುವಂತೆ ಒತ್ತಡ ಹೇರಬಾರದೆಂಬುದು ಜನರ ಬೇಡಿಕೆಯಾಗಿದೆ.