ಲಕ್ನೋ : ವೈದ್ಯರನ್ನು ದೇವಸ್ವರೂಪಿ ಎಂದು ಕರೆಯಲಾಗುತ್ತೆ. ಆದರೆ, ಇಲ್ಲೊಂದು ಖಾಸಗಿ ಆಸ್ಪತ್ರೆಯ ವೈದ್ಯರು ಪುಟ್ಟ ಕಂದಮ್ಮನ ಪಾಲಿಗೆ ಯಮರಾಗಿದ್ದಾರೆ. ಬಾಕಿ ಹಣ ನೀಡಲಿಲ್ಲವೆಂದು ಶಸ್ತ್ರಚಿಕಿತ್ಸೆ ನಂತರ ಸರಿಯಾಗಿ ಹೊಲಿಗೆ ಹಾಕದೆ 3 ವರ್ಷದ ಹೆಣ್ಣು ಮಗುವಿನ ಪ್ರಾಣ ಬಲಿ ಪಡೆದಿದ್ದಾರೆ.
ಈ ಅಮಾನವೀಯ ಘಟನೆ ನಡೆದಿರುವುದು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ. ಫೆ.15 ರಂದು ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕೌಶಂಬಿ ಗ್ರಾಮದ ಬಾಲಕಿಯನ್ನು ಪ್ರಯಾಗ್ ರಾಜ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾರ್ಮಲ್ ಚೆಕಪ್ ಮಾಡಿ ಚಿಕತ್ಸೆ ನೀಡಿದ್ದ ವೈದ್ಯರು ಮನೆಗೆ ಕಳುಹಿಸಿದ್ದರು. ಆದರೆ,ನೋವು ಕಡಿಮೆಯಾಗದ ಹಿನ್ನೆಲೆ ಫೆ.24ಕ್ಕೆ ಅದೇ ಆಸ್ಪತ್ರೆಗೆ ಕರೆತಂದಿದ್ದರು. ಫೆ.24 ರಂದು ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು 5 ಲಕ್ಷ ರೂ.ಬಿಲ್ ಮಾಡಿದ್ದರು. ಬಾಲಕಿಯ ಕುಟುಂಬ 2 ಲಕ್ಷ ರೂ.ಪಾವತಿಸಿ,ಬಾಕಿ ಹಣ ಕಟ್ಟಲು ಸಮಯಾವಕಾಶ ಕೇಳಿದ್ದರು. ಇದಕ್ಕೆ ಒಪ್ಪದ ಆಸ್ಪತ್ರೆಯವರು ಸರಿಯಾಗಿ ಹೊಲಿಗೆ ಹಾಕದೆ ಡಿಸ್ಚಾರ್ಜ್ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ :ತಂದೆ ಯಾರೆಂದು ಕೇಳಿದ ಮಗ: ಅತ್ಯಾಚಾರವಾಗಿ 27 ವರ್ಷಗಳ ಬಳಿಕ ದೂರು ದಾಖಲಿಸಿದ ಸಂತ್ರಸ್ತೆ !
ಬಾಲಕಿಯ ಕುಟುಂಬ ಫೆ.26 ರಂದು ಶಸ್ತ್ರಚಿಕಿತ್ಸೆ ಮಾಡಿದ ಜಾಗದಲ್ಲಿಯ ನೋವು ಕಡಿಮೆಯಾಗದ ಕಾರಣ ಬೇರೊಂದು ಆಸ್ಪತ್ರೆಯ ಮೊರೆ ಹೋಗಿತ್ತು. ಇದರಿಂದ ಯಾವುದೇ ಪ್ರಯೋಜನವಾಗಿರಲಿಲ್ಲ. ಆಪರೇಷನ್ ಮಾಡಿದ ವೈದ್ಯರ ಬಳಿ ಕರೆದೊಯ್ಯುವಂತೆ ಅವರು ಸೂಚಿಸಿದ್ದರು. ಇದರಿಂದ ಮರಳಿ ಶಸ್ತ್ರಚಿಕಿತ್ಸೆ ನಡೆಸಿದ ಆಸ್ಪತ್ರೆಗೆ ಕರೆತಂದಾಗ ವೈದ್ಯರು ಮಗುವಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದರು. ಪರಿಣಾಮ ಮಾರ್ಚ್ 4 ರಂದು ಬಾಲಕಿ ಕೊನೆಯುಸಿರೆಳೆದಿದ್ದಾಳೆ.
ಮಗುವಿನ ಸಾವಿಗೆ ಆಸ್ಪತ್ರೆಯ ಸಿಬ್ಬಂದಿಯೇ ಕಾರಣ ಎಂದು ಬಾಲಕಿಯ ಚಿಕ್ಕಪ್ಪ ಸೂರಜ್ ಮಿಶ್ರಾ ಆರೋಪಿಸಿದ್ದಾರೆ. ಪೋಷಕರ ದೂರಿನ ಆಧಾರದ ಮೇಲೆ ಆಸ್ಪತ್ರೆಯ ವೈದ್ಯರಲ್ಲಿ ಒಬ್ಬರಾದ ಅಂಕಿತ್ ಗುಪ್ತಾ ವಿರುದ್ಧ ಕೌಶಂಬಿ ಪೊಲೀಸರು ಶನಿವಾರ ಎಫ್‌ಐಆರ್ ದಾಖಲಿಸಿದ್ದಾರೆ.