ಮುಂಡಗೋಡ: ತಾಯಿ ಇಟ್ಟಿಗೆ ತಯಾರು ಮಾಡುವ ಕೆಲಸದಲ್ಲಿ ನಿರತರಾಗಿದ್ದಾಗ ಆಟವಾಡುತ್ತಿದ್ದ ಮೂರು ವರ್ಷದ ಹೆಣ್ಣು ಮಗುವೊಂದು ಇಟ್ಟಿಗೆ ತಯಾರಿಕೆಗೆ ಶೇಖರಿಸಲು ಇಟ್ಟ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಲಕ್ಕೊಳ್ಳಿ ಗ್ರಾಮದಲ್ಲಿ ಡಿ.22ರ ಶುಕ್ರವಾರ ಸಂಜೆ ನಡೆದಿದೆ.
ಇಂದೂರ ಗ್ರಾಮದ 3 ವರ್ಷದ ಮಾನ್ವಿತ ಮಲ್ಲಿಕಾರ್ಜುನ ಹೊಸೂರ ನೀರಿನಲ್ಲಿ ಮುಳುಗಿ ಮೃತಪಟ್ಟ ಮಗು.
ಘಟನೆಯ ವಿವರ: ತಾಯಿಯು ಇಟ್ಟಿಗೆ ಕೆಲಸಕ್ಕೆ ಹೋದಾಗ ಮಗುವನ್ನೂ ತನ್ನ ಜೊತೆ ಕರೆದುಕೊಂಡು ಹೋಗಿದ್ದಾಳೆ. ತಾಯಿ ತನ್ನ ಕೆಲಸದಲ್ಲಿ ನಿರತರಾಗಿದ್ದಾಗ ಮಗು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾಳೆ. ಕೂಡಲೇ ಮಗುವನ್ನು ಮುಂಡಗೋಡ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಅಷ್ಟರಲ್ಲಾಗಲೇ ಮಗು ಕೊನೆಯುಸಿರೆಳೆದಿದೆ ಎನ್ನಲಾಗಿದೆ. ಆದರೂ, ಆಸ್ಪತ್ರೆಯ ಸಿಬ್ಬಂದಿ ಮಗುವನ್ನು ಹುಬ್ಬಳ್ಳಿ ಕಿಮ್ಸ್ ಗೆ ಕಳಿಸಿಕೊಟ್ಟಿದ್ದಾರೆ. ಸತ್ತ ಮಗುವನ್ನು ಹುಬ್ಬಳ್ಳಿ ಕಿಮ್ಸ್ ಗೆ ಒಯ್ದಿರುವ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.
ಇಟ್ಟಿಗೆ ಭಟ್ಟಿ ಮಾಲಿಕ ತನಗೂ ಈ ಪ್ರಕರಣಕ್ಕೂ ಏನೂ ಸಂಬಂಧ ಇಲ್ಲದಂತೆ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದನು. ಆದರೆ ಶನಿವಾರ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.