ಯಲಹಂಕ: ಯಲಹಂಕ ವ್ಯಾಪ್ತಿಯಲ್ಲಿ ಇನ್ನೂ ಮೂರು ಮೇಲ್ಸೇತುವೆ ಕಾಮಗಾರಿ ಸದ್ಯದಲ್ಲೇ ಪ್ರಾರಂಭವಾಗಲಿದ್ದು, ಕಾಮಗಾರಿಗಳ ಗುಣಮಟ್ಟಗಳ ಬಗ್ಗೆ ಸ್ಥಳೀಯರು ಗಮನಹರಿಸಬೇಕು ಎಂದು ಶಾಸಕ ಎಸ್.ಆರ್. ವಿಶ್ವನಾಥ್ ನಾಗರಿಕರಿಗೆ ಮನವಿ ಮಾಡಿದರು.
ಯಲಹಂಕ ಉಪನಗರ ವಾರ್ಡ್-4ರಲ್ಲಿ 2019-20ನೇ ಸಾಲಿನ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿಯಲ್ಲಿ 23ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಮೇಲ್ಸೇತುವೆ ಕಾಮಗಾರಿ ಮುಂದೂಡಲಾಗಿತ್ತು. ಈಗ 1.ಎಂ. ಎಸ್. ಪಾಳ್ಯ, 2.ಯಲಹಂದ ಪೊಲೀಸ್ ಠಾಣೆ ವೃತ್ತದಿಂದ ಸಂದೀಪ್ ಉನ್ನಿಕೃಷ್ಣನ್ ರಸ್ತೆಯವರೆಗೆ ಮತ್ತು 3.ಯಲಹಂಕ ರೈಲ್ವೆ ಮೇಲ್ಸೇತುವೆ ಬಳಿ ಇರುವ ಇಂಡಿಯನ್ ಮೋಟಾರ್‌ನಿಂದ ಕೋಗಿಲು ಸರ್ಕಲ್‌ವರೆಗೆ ಮೂರು ಮೇಲ್ಸೇತುವೆ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.
ಹಳೇ ಯಲಹಂಕ ಮತ್ತು ಯಲಹಂಕ ಉಪನಗರ ಅವಳಿ ನಗರಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಕೆಳಸೇತುವೆ ಕಾಮಗಾರಿ ವಿಚಾರವಾಗಿ ಹಲವು ದಿನಗಳಿಂದ ಗೊಂದಲವಿತ್ತು. ಈಗ ಸಮಸ್ಯೆ ಬಗೆಹರಿದಿದೆ. ಈಗ ಮರು ಟೆಂಡರ್ ಕರೆಯಲಾಗಿದೆ ಎಂದರು.
85 ಕೋಟಿ ರೂ. ಕಾಮಗಾರಿಗೆ ಪೂಜೆ: ಅಟ್ಟೂರು, ವೀರಸಾಗರ, ಅಳ್ಳಾಳ ಸಂದ್ರ ಯಲಹಂಕ ಕೆರೆ ಅಭಿವೃದ್ಧಿ ಕಾಮಗಾರಿಗೆ 20ಕೋಟಿ ರೂ., ವಾರ್ಡ್ 3 ರಸ್ತೆ ಅಭಿವೃದ್ಧಿ ಚರಂಡಿ ಕಾಮಗಾರಿ 40ಕೋಟಿ ರೂ. ವೆಚ್ಚದಲ್ಲಿ ಹಾಗೂ ವಾರ್ಡ್-4ರಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.