ಕಲಬುರಗಿ: “ಮೂರು ಸಲ ನನಗೆ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಿದೆ. ಆದರೂ ಪಕ್ಷದ ವಿರುದ್ಧ ಮುನಿಸಿಕೊಂಡಿದ್ದೇನೆಯೇ’ ಎಂದು ಪ್ರಶ್ನಿಸುವ ಮೂಲಕ ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ| ಮಲ್ಲಿಕಾರ್ಜುನ ಖರ್ಗೆ ತಮ್ಮ ನೋವು ನಿವೇದಿಸಿಕೊಂಡರು.
ಶುಕ್ರವಾರ ತಾಲೂಕಿನ ಪಟ್ಟಣ ಗ್ರಾಮದಲ್ಲಿ ಪ್ರಚಾರ ವೇಳೆ ಮಾತನಾಡಿ, “ಬೇರೆ-ಬೇರೆ ಕಾರಣಗಳಿಂದ ಮೂರು ಸಲ ಮುಖ್ಯಮಂತ್ರಿ ಆಗುವ ಅವಕಾಶ ತಪ್ಪಿದೆ. ಹಾಗಂತ ನಾನೆಲ್ಲೂ ಬಹಿರಂಗವಾಗಿ ಮಾತನಾಡಿಲ್ಲ. ನನಗೆ ಪಕ್ಷ ಹಾಗೂ ಅದರ ಸಿದ್ಧಾಂತಗಳು ಮುಖ್ಯವಾಗಿದ್ದವು.
ಕಾಂಗ್ರೆಸ್‌ನಿಂದ ಹೊರಗೆ ಹೋದವರು ಯಾವುದೇ ಸಿದ್ಧಾಂತ ಪಾಲಿಸದೇ ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದ್ದಾರೆ. ನಾನು ಮಾಡಿದ ಅಭಿವೃದ್ಧಿ ಕೆಲಸಗಳೇ ನನ್ನನ್ನು 11 ಸಲ ಗೆಲ್ಲುವಂತೆ ಮಾಡಿದೆ. ಹೀಗಾಗಿ ಪ್ರಧಾನಿ ಮೋದಿ ಕಲಬುರಗಿಗೆ ಬಂದಿದ್ದರೂ ನನ್ನ ಬಗ್ಗೆ ಮಾತನಾಡಿಲ್ಲ. ಆದರೆ ಮೋದಿಯ ಇಲ್ಲಿನ ಮರಿಗಳು ನನ್ನ ಬಗ್ಗೆ ಮಾತನಾಡುತ್ತಿವೆ’ ಎಂದರು.
ನನ್ನ ವಿರುದ್ಧ ಹೊರಟ ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ, ಬಾಬುರಾವ ಚಿಂಚನಸೂರ ಅವರು ತಾವೇ ಮೊದಲು ಸೋತು ಸುಣ್ಣವಾಗಿದ್ದಾರೆ. ಆದರೆ ಈಗಲೂ ನನ್ನನ್ನು ಸೋಲಿಸುವ ಮಾತನಾಡುತ್ತಿದ್ದಾರೆ.
-ಡಾ| ಮಲ್ಲಿಕಾರ್ಜುನ ಖರ್ಗೆ, ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ