Advertisement

ವಸತಿ-ವಾಣಿಜ್ಯಕ್ಕೆ ಶೇ.3, ಕೈಗಾರಿಕೆಗೆ ಶೇ.5 ತೆರಿಗೆ ಹೆಚ್ಚಳ

12:58 PM Mar 22, 2022 | Team Udayavani |

ವಾಡಿ: ಪಟ್ಟಣದ ಪುರಸಭೆಯಲ್ಲಿ ಸೋಮವಾರ ನಡೆದ ವಸತಿ, ವಾಣಿಜ್ಯ ಮತ್ತು ಕೈಗಾರಿಕೆಗಳ ತೆರಿಗೆ ಪರಿಷ್ಕರಣಾ ಸಭೆಯಲ್ಲಿ ಗುತ್ತಿಗೆ ಪೌರಕಾರ್ಮಿಕರ ವೇತನ ಸುಲಿಗೆ ವಿಷಯ ಚರ್ಚೆಗೆ ಬಂದು ಭಾರಿ ಗದ್ದಲಕ್ಕೆ ಕಾರಣವಾಯಿತು.

Advertisement

ಹೊರಗುತ್ತಿಗೆ ಪೌರಕಾರ್ಮಿಕರ ಮಾಸಿಕ 12000ರೂ. ವೇತನದಲ್ಲಿ ಕೇವಲ 8000ರೂ. ಮಾತ್ರ ಕೈಸೇರುತ್ತಿದೆ. ಉಳಿದ 4000ರೂ. ಗುತ್ತಿಗೆದಾರನ ಪಾಲಾಗುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕಾದ ಕಾಂಗ್ರೆಸ್‌ ಆಡಳಿತ ಸುಲಿಗೆಕೋರರಿಗೆ ಸಹಕಾರ ನೀಡುತ್ತಿದೆ ಎಂದು ಫುರಸಭೆ ವಿರೋಧ ಪಕ್ಷದ ನಾಯಕ, ಬಿಜೆಪಿಯ ಭೀಮಶಾ ಜಿರೊಳ್ಳಿ ಸೇರಿದಂತೆ ಕಮಲ ಸದಸ್ಯರಾದ ಕಿಶನ್‌ ಜಾಧವ, ರಾಜೇಶ ಅಗರವಾಲ, ವೀರಣ್ಣ ಯಾರಿ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಸಾವಿರಾರು ಜನತೆ ಮಲಮೂತ್ರ ಶುಚಿ ಮಾಡುವ ಬಡ ಕಾರ್ಮಿಕರ ಹೊಟ್ಟೆಗೆ ಹೊಡೆಯುವುದು ಮಾನವೀಯತೆಯಲ್ಲ. ಕಾರ್ಮಿಕರ ಆರೋಗ್ಯ ಮತ್ತು ಜೀವ ಸುರಕ್ಷತೆಗಾಗಿ ಮುಖ್ಯಾಧಿಕಾರಿಗಳು ಮತ್ತು ಕಾಂಗ್ರೆಸ್‌ ಆಡಳಿತ ಕಿಂಚಿತ್ತೂ ಕಾಳಜಿ ವಹಿಸಿಲ್ಲ. ಹೊರಗುತ್ತಿಗೆ ಪೌರಕಾರ್ಮಿಕರ ಇಎಸ್‌ಐ ಮತ್ತು ಪಿಎಫ್‌ ಕಡಿತವಾಗುವಂತೆ ಕ್ರಮಕೈಗೊಳ್ಳಬೇಕು. ಪ್ರತಿ ತಿಂಗಳು ವೇತನ ನೇರವಾಗಿ ಕಾರ್ಮಿಕರ ಖಾತೆಗೆ ಜಮೆಯಾಗುತ್ತಿದ್ದರೆ ಮಾತ್ರ ಗುತ್ತಿಗೆದಾರನನ್ನು ಮುಂದುವರಿಸಬೇಕು. ಕೆಲಸ ಮಾಡದೇ ಹಾಜರಿಗೆ ಸಹಿ ಹಾಕಿ ಹೋಗುವವರನ್ನು ಕೆಲಸದಿಂದ ತೆಗೆದುಹಾಕಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು.

ವಾರ್ಡ್‌-14 ಮತ್ತು 4ರಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಹೊಸ ಪೈಪ್‌ ಜೋಡಿಸಿದರೂ ನೀರು ಸರಬರಾಜು ಆಗುತ್ತಿಲ್ಲ. ಅಕ್ರಮ ನಳ ಸಂಪರ್ಕ ಪಡೆದವರ ಪಟ್ಟ ನೀಡಿದರೂ ಕ್ರಮಕ್ಕೆ ಮುಂದಾಗಿಲ್ಲ. ಕಳ್ಳರು, ಭ್ರಷ್ಟರು, ವಂಚಕರ ಜತೆ ಕೈಜೋಡಿಸಿ ಕಾಂಗ್ರೆಸ್‌ ಆಡಳಿತ ನಡೆಸುತ್ತಿದೆ ಎಂದು ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪುರಸಭೆ ಉಪಾಧ್ಯಕ್ಷ ದೇವಿಂದ್ರ ಕರದಳ್ಳಿ, ಪೌರಕಾರ್ಮಿಕರಿಗೆ ಅನ್ಯಾಯವಾಗಲು ಕಾಂಗ್ರೆಸ್‌ ಬಿಡುವುದಿಲ್ಲ. ವೇತನದಲ್ಲಿ ಮೋಸವಾಗಿದ್ದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.

Advertisement

ದೂರಿಗೆ ಸ್ಪಂದಿಸುತ್ತಿಲ್ಲ

ಬಸವನಗುಡಿ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಭುಗಿಲೆದ್ದಿದೆ. ವೈಯಕ್ತಿಕ ಶೌಚಾಲಯಗಳು ಕಳಪೆಯಾಗಿವೆ. ಬಡಾವಣೆ ಜನರೆಲ್ಲರೂ ಬಯಲು ಶೌಚಾಲಯ ಅವಲಂಬಿಸಿದ್ದಾರೆ. ಇದರಿಂದ ನೈರ್ಮಲ್ಯ ಹದಗೆಟ್ಟಿದೆ. ಪದೇಪದೆ ದೂರು ಕೊಟ್ಟರೂ ಪುರಸಭೆ ಆಡಳಿತ ಸ್ಪಂದಿಸುತ್ತಿಲ್ಲ ಎಂದು ಬಿಜೆಪಿಯ ನಾಮನಿರ್ದೇಶಿತ ಸದಸ್ಯ ಕಿಶನ್‌ ಜಾಧವ ದೂರಿದರು.

ವಾರ್ಡ್‌-4ರ ಅರ್ಧ ಭಾಗದ ಜನರಿಗೆ ನೀರು ಪೂರೈಕೆಯಾಗುತ್ತಿಲ್ಲ ಎಂದು ರವಿ ನಾಯಕ ದೂರಿದರು. ನಗರದ ವಿವಿಧ ಬಡಾವಣೆಗಳಲ್ಲಿ ಬಯಲು ಶೌಚಾಲಯದ ಪದ್ಧತಿ ಇನ್ನೂ ಜೀವಂತವಿದೆ. ಹೀಗಿದ್ದಲ್ಲಿ ಸ್ವಚœ ಭಾರತ ಯೋಜನೆ ಅನುದಾನ ಎಲ್ಲಿ ಖರ್ಚಾಗಿದೆ ಎನ್ನುವ ಲೆಕ್ಕ ಕೊಡಿ ಎಂದು ಬಿಜೆಪಿಯ ವೀರಣ್ಣ ಯಾರಿ ಪಟ್ಟು ಹಿಡಿದರು.

ಪುರಸಭೆ ಅಧ್ಯಕ್ಷೆ ಝರೀನಾಬೇಗಂ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ದೇವಿಂದ್ರ ಕರದಳ್ಳಿ, ಮುಖ್ಯಾಧಿಕಾರಿ ಡಾ| ಚಿದಾನಂದ ಸ್ವಾಮಿ, ಕಂದಾಯ ಅಧಿಕಾರಿ ಎ.ಪಂಕಜಾ, ಜೆಇ ಅಶೋಕ ಪುಟ್‌ಪಾಕ್‌, ವ್ಯವಸ್ಥಾಪಕ ಮಲ್ಲಿಕಾರ್ಜುನ ಹಾರಕೂಡ, ಹಿರಿಯ ಆರೋಗ್ಯ ನೈರ್ಮಲ್ಯ ನಿರೀಕ್ಷಕಿ ಲತಾಮಣಿ, ಕೆ.ವಿರೂಪಾಕ್ಷಿ, ಮನೋಜಕುಮಾರ ಹಿರೋಳಿ, ವಾರ್ಡ್‌ ಸದಸ್ಯರಾದ ಶರಣು ನಾಟೀಕಾರ, ಪೃಥ್ವಿರಾಜ ಸೂರ್ಯವಂಶಿ, ಮಲ್ಲಯ್ಯ ಗುತ್ತೇದಾರ, ಮಹ್ಮದ್‌ ಗೌಸ್‌, ಶುಶಿಲಾಬಾಯಿ ಮೊಸಲಗಿ, ಸುಗಂದಾ ಜೈಗಂಗಾ, ಅಂಬ್ರಿàಶ ಕುರಕುಂಟಾ, ರವಿ ರಾಠೊಡ ಪಾಲ್ಗೊಂಡಿದ್ದರು.

ಕಾಂಗ್ರೆಸ್‌ನ ಬಹುತೇಕ ಸದಸ್ಯರು ಸಭೆಗೆ ಗೈರಾಗಿದ್ದು ಎದ್ದು ಕಂಡಿತು.ತೆರಿಗೆ ಹೆಚ್ಚಳಕ್ಕೆ ಕಾಂಗ್ರೆಸ್‌-ಬಿಜೆಪಿ ಸಹಮತ ಚಾಲ್ತಿ ಸಾಲಿನ ಮಾರುಕಟ್ಟೆ ಮಾಲ್ಯದ ಮಾರ್ಗಸೂಚಿ ಬೆಲೆಗಳ ಅಧಾರದ ಮೇರೆಗೆ ತೆರಿಗೆ ಹೆಚ್ಚಳಕ್ಕೆ ಆದೇಶ ನೀಡಿದ ಸರ್ಕಾರದ ಸುತ್ತೋಲೆಯನ್ನು ಅಧಿಕಾರಿಗಳು ಸಭೆ ಗಮನಕ್ಕೆ ತಂದರು. ವಸತಿ, ವಾಣಿಜ್ಯ ಹಾಗೂ ಕೈಗಾರಿಕೆಗಳ ತೆರಿಗೆ ಶೇ.3ರಿಂದ ಶೇ.5ರ ವರೆಗೆ ಹೆಚ್ಚಿಸುವ ಚರ್ಚೆಗೆ ಆರಂಭದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಸದಸ್ಯ ನಡುವೆ ಪರ, ವಿರೋಧ ನಿಲುವು ವ್ಯಕ್ತವಾದರೂ ಅಂತಿಮವಾಗಿ ಸಹಮತ ಮೂಡಿತು.

ಕೊರೊನಾ ಸಂಕಷ್ಟದಲ್ಲಿ ಜನತೆಗೆ ಮತ್ತು ವ್ಯಾಪಾರಿಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿದ್ದರಿಂದ ವಸತಿಗೆ ಶೇ.3 ಮತ್ತು ವಾಣಿಜ್ಯಕ್ಕೆ ಶೇ.3 ತೆರಿಗೆ ಹೆಚ್ಚಿಸಲು ತೀರ್ಮಾನ ಕೈಗೊಳ್ಳಲಾಯಿತು. ನಗರದ ಕೈಗಾರಿಕೆಗಳಿಗೆ ಶೇ.5ರಷ್ಟು ತೆರಿಗೆ ಹೆಚ್ಚಳ ನಿರ್ಣಯ ಕೈಗೊಂಡು ಸಹಮತ ಪ್ರದರ್ಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next