Advertisement

ಟೊಮೆಟೋ ಕೆಜಿಗೆ3 ರೂ: ರೈತ ಕಂಗಾಲು

11:38 AM May 28, 2018 | Team Udayavani |

ಗೌರಿಬಿದನೂರು: ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ಭಾರೀ ಕುಸಿತ ಕಂಡಿರುವುದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಇಲ್ಲಿನ ಎಪಿಎಂಸಿ ಮಾರುಕಟ್ಟೆ ಯಲ್ಲಿ 15 ಕೆಜಿ ತೂಕದ ಟೊಮೆಟೋ ಬಾಕ್ಸ್‌ ಕೇವಲ 60 ರೂ.ಗೆ ಮಾರಾಟವಾಗುತ್ತದೆ. ಅಂದರೆ ಕೆಜಿಗೆ ಬರೀ 3 ರೂ. ಮಾತ್ರ ದೊರೆಯುತ್ತಿದೆ.

Advertisement

ಕಳೆದವಾರ 15 ಕೆಜಿ ತೂಕದ ಬಾಕ್ಸ್‌ 120 ರೂ.ಗೆ ಮಾರಾಟವಾಗುತ್ತಿತ್ತು. ಒಂದು ವಾರದ ಅವಧಿಯಲ್ಲಿ ಅರ್ಧದಷ್ಟು ದರ ಕುಸಿತವಾಗಿದೆ ಎಂದು ಟೊಮೆಟೋ ಬೆಳೆಗಾರರು ಅವಲತ್ತುಕೊಂಡಿದ್ದಾರೆ.

ತಾಲೂಕಿನಲ್ಲಿ ಸುಮಾರು 100 ಹೆಕ್ಟೇರ್‌ ಪ್ರದೇಶದಲ್ಲಿ ಟೊಮೆಟೋ ಬೆಳೆಯಲಾಗಿದೆ. ಇಲ್ಲಿನ ಟೊಮೆಟೋ
ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತಿತರ ಪ್ರದೇಶಗಳಿಗೆ ಸಾಗಣೆಯಾಗುತ್ತದೆ. ಆದರೆ, ಇತ್ತೀಚಿನ
ದಿನಗಳಲ್ಲಿ ಬೇಡಿಕೆ ಕುಸಿದಿದ್ದು, ಇದರಿಂದ ಟೊಮೆಟೋ ಧಾರಣೆ ಕಡಿಮೆಯಾಗಿದೆ.

ಆಲಿಕಲ್ಲಿಗೆ ಬೆಳೆ ಹಾನಿ: ಜೊತೆಗೆ ಕಳೆದ 15 ದಿನಗಳ ಹಿಂದೆ ಸುರಿದ ಆಲಿಕಲ್ಲು ಮಳೆಯಿಂದ ಅಪಾರ ಪ್ರಮಾಣದಲ್ಲಿ ಟೊಮೆಟೋ ಬೆಳೆ ಹಾನಿಯಾಗಿದೆ. ಇದರ ಜೊತೆಗೆ ಉಳಿಸಿಕೊಂಡಿರುವ ಟೊಮೆಟೋಗೂ ಕೂಡ ಬೆಲೆ ಪಾತಾಳ ಕುಸಿದಿರುವುದು ರೈತರನ್ನು ಚಿಂತಗೀಡು ಮಾಡಿದೆ. ಬೆಳೆಗೆ ಹಾಕಿದ ಬಂಡವಾಳ ಕೂಡ ಸಿಗುತ್ತಿಲ್ಲ. ಸಾಗಾಣಿಕೆ ವೆಚ್ಚ ಕೂಡ ಸಿಗದಂತಾಗಿದೆ. ಇದರಿಂದಾಗಿ ಬೀದಿಗೆ ಬಿಸಾಡುವಂತಾಗಿದೆ ಎಂದು ರೈತರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. 

ಎರಡು ಎಕರೆ ಜಮೀನಿನಲ್ಲಿ ಹನಿ ನೀರಾವರಿ ಅಳವಡಿಸಿ, ಟೊಮೆಟೋ ಬೆಳೆದಿದ್ದು, ಬೆಳೆ ಕೂಡ ಉತ್ತಮವಾಗಿತ್ತು. ಆದರೆ, ಇದೀಗ ಬೆಲೆ ಕುಸಿತದಿಂದ ಅಪಾರ ಪ್ರಮಾಣದಲ್ಲಿ ನಷ್ಟ ಆಗಿದೆ ಎಂದು ತಾಲೂಕಿನ ದೊಡ್ಡಮಲ್ಲೇ ಕೆರೆ ಗ್ರಾಮದ ರೈತ ಭೀಮೇಶ್‌ ಅಳಲು ತೋಡಿಕೊಂಡಿದ್ದಾರೆ.

Advertisement

ಟೊಮೆಟೋ ಬೆಲೆ ಕುಸಿತದ ಕುರಿತು ಪ್ರತಿಕ್ರಿಯಿಸಿರುವ ತೋಟಗಾರಿಕೆ ಅಧಿಕಾರಿ ರವಿಕುಮಾರ್‌, ಆಲಿಕಲ್ಲು ಮಳೆಯಿಂದಾಗಿ ನಷ್ಟಕ್ಕೆ ಒಳಗಾಗಿರುವ ಟೊಮೆಟೋ ಬೆಳೆಗಾರರಿಗೆ ಸರ್ಕಾರದಿಂದ ಹೆಕ್ಟೇರ್‌ಗೆ 16 ಸಾವಿರ
ರೂ. ಪರಿಹಾರ ದೊರೆಯಲಿದೆ. 

ರೈತರು ಬೇಡಿಕೆಗೆ ಅನುಗುಣವಾಗಿ ಬೆಳೆ ಬೆಳೆಯಬೇಕು. ಎಲ್ಲರೂ ಒಂದೇ ತರಹದ ಬೆಳೆ ಬೆಳೆಯುವ ಬದಲಾಗಿ
ಬೆಂಡೆಕಾಯಿ, ನುಗ್ಗೆಕಾಯಿ, ಆಲೂಗಡ್ಡೆ, ಮೆಣಸಿನಕಾಯಿ, ಕೋಸು ಮತ್ತಿತರ ತರಕಾರಿ ಬೆಳೆದರೆ ಈ ಉತ್ತಮ
ಧಾರಣೆ ದೊರೆಯಲಿದೆ. ಈ ರೀತಿ ನಷ್ಟ ಸಂಭವಿಸುವುದಿಲ್ಲ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next