ಹೊಸದಿಲ್ಲಿ : ಮುಖ್ಯಮಂತ್ರಿ ಸಹಿತವಾಗಿ ನೂತನ ತ್ರಿಪುರ ಸರಕಾರದ ಸಂಪುಟ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ 9 ಮಂದಿ ಸಚಿವರ ಪೈಕಿ ಮೂವರ ವಿರುದ್ಧ ಕ್ರಿಮಿನಲ್ ಕೇಸುಗಳಿವುದು ಅವರೇ ಸಲ್ಲಿಸಿರುವ ಅಫಿದಾವಿತ್ ಮೂಲಕ ಬಹಿರಂಗವಾಗಿದೆ.
ಅಸೋಸಿಯೇಶನ್ ಆಫ್ ಡೆಮೋಕ್ರಾಟಿಕ್ ರಿಫಾರ್ಮ್ (ಎಡಿಆರ್) ನಡೆಸಿರುವ ವಿಶ್ಲೇಷಣೆಯ ಪ್ರಕಾರ ಕ್ರಿಮಿನಲ್ ಕೇಸ್ ಹೊಂದಿರುವ ಮೂವರ ಪೈಕಿ ಇಬ್ಬರು ಸಚಿವರ ವಿರುದ್ಧ ಗಂಭೀರ ಅಪರಾಧಗಳ ಕೇಸುಗಳಿವೆ.
ಬಿಜೆಪಿಯ ರತನ್ ಲಾಲ್ ನಾಥ್ ವಿರುದ್ಧ ನಾಲ್ಕು ಗಂಭೀರ ಕ್ರಿಮಿನಲ್ ಕೇಸುಗಳಿವೆ. ಇವುಗಳಲ್ಲಿ ಕೊಲೆ ಯತ್ನ, ದೊಂಬಿ, ಮಾನನಷ್ಟ ದಾವೆಯೂ ಸೇರಿವೆ.
ಇನ್ನೋರ್ವ ಬಿಜೆಪಿ ಸಚಿವ ಸುದೀಪ್ ರಾಯ್ ಬರ್ಮನ್ ಅವರು ದೊಂಬಿ, ಹಲ್ಲೆ, ಮಾರಕಾಯುಧಗಳಿಂದ ಗಾಯ ಎಸಗಿರುವಂತಹ ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿದ್ದಾರೆ.
ಮನೋಜ್ ಕಾಂತಿ ದೇಬ್ ಎಂಬ ಇನ್ನೋರ್ವ ಬಿಜೆಪಿ ಸಚಿವರು ಎರಡು ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿದ್ದಾರೆ. ಆದರೆ ಈ ಮೂರೂ ಬಿಜೆಪಿ ಸಚಿವರು ಈ ತನಕ ಯಾವುದೇ ಕೇಸುಗಳಲ್ಲಿ ಅಪರಾಧಿಗಳೆಂದು ಪರಿಗಣಿತರಾಗಿಲ್ಲ.
ಇನ್ನೊಂದು ಮುಖ್ಯ ವಿಷಯವೆಂದರೆ 9 ಸಚಿವರ ಪೈಕಿ ಆರು ಮಂದಿ ಕರೋಡ್‌ಪತಿಗಳಾಗಿದ್ದಾರೆ. ಈ ಪೈಕಿ ವಿಷ್ಣು ದೇವ್ ವರ್ಮಾ, ಪ್ರಣಜಿತ್ ಸಿಂಗ್ ರಾಯ್ ಮತ್ತು ಸುದೀಪ್ ರಾಯ್ ಬರ್ಮನ್ ಅತ್ಯಂತ ಸಿರಿವಂತ ಸಚಿವರಾಗಿದ್ದಾರೆ.
ಸಚಿವ ಜಿಷ್ಣು ಅವರು 11 ಕೋಟಿ ಆಸ್ತಿಪಾಸ್ತಿಗಳ ಒಡೆಯರು; ಪ್ರಣಜಿತ್ 5 ಕೋಟಿ ಆಸ್ತಿ ಪಾಸ್ತಿ ಹೊಂದಿದ್ದಾರೆ. ಸುದೀಪ್ ಅವರ ಬಳಿ 3 ಕೋಟಿ ಆಸ್ತಿ ಇದೆ.