ಕೋಲ್ಕತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ)ನ ಮುಖಂಡನ ಮನೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಪಶ್ಚಿಮಬಂಗಾಳದ ಮೇದಿನಿಪುರ್ ನಲ್ಲಿ ಶುಕ್ರವಾರ(ಡಿಸೆಂಬರ್ 02) ನಡೆದಿದೆ.
ಇದನ್ನೂ ಓದಿ:ತಮಿಳುನಾಡಿನ ಎಲ್ಲಾ ದೇವಾಲಯಗಳಲ್ಲಿ ಮೊಬೈಲ್ ಫೋನ್ ಬಳಕೆ ನಿಷೇಧ: ಮದ್ರಾಸ್ ಹೈಕೋರ್ಟ್
ನರಾಯ್ ಬಿಲಾ ಗ್ರಾಮದಲ್ಲಿರುವ ತೃಣಮೂಲ ಕಾಂಗ್ರೆಸ್ ನ ಬೂತ್ ಅಧ್ಯಕ್ಷನ ಮನೆಯಲ್ಲಿ ಈ ಸ್ಫೋಟ ಸಂಭವಿಸಿದ್ದು, ಸ್ಫೋಟದಿಂದಾಗಿ ಮನೆ ಧ್ವಂಸಗೊಂಡಿರುವುದಾಗಿ ವರದಿ ತಿಳಿಸಿದೆ.
ಬಾಂಬ್ ಸ್ಫೋಟದ ಕಾರಣ ಇನ್ನಷ್ಟೇ ತನಿಖೆಯಿಂದ ತಿಳಿದು ಬರಬೇಕಾಗಿದೆ. ಆದರೆ ಸ್ಫೋಟದ ತೀವ್ರತೆ ಗಂಭೀರವಾಗಿದ್ದು, ಮಣ್ಣಿನ ಮನೆಯ ಗೋಡೆ, ಮೇಲ್ಛಾವಣಿ ಧ್ವಂಸಗೊಂಡಿರುವುದಾಗಿ ಪಿಟಿಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ತೃಣಮೂಲ ಕಾಂಗ್ರೆಸ್ ಮುಖಂಡನ ಮನೆಯಲ್ಲಿ ದೇಶೀಯ ಕಚ್ಛಾ ಬಾಂಬ್ ತಯಾರಿಸಲಾಗುತ್ತಿತ್ತು ಎಂದು ಭಾರತೀಯ ಜನತಾ ಪಕ್ಷ ಆರೋಪಿಸಿದೆ. ರಾಜ್ಯದಲ್ಲಿ ಕೇವಲ ಬಾಂಬ್ ತಯಾರಿಕೆಯ ಕೈಗಾರಿಕೆ ಬಿಟ್ಟರೆ ಬೇರೇನೂ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ವಾಗ್ದಾಳಿ ನಡೆಸಿದ್ದಾರೆ.