ನವದೆಹಲಿ: ಫ್ರಾನ್ಸ್ ನ ಡಸಾಲ್ಟ್ ಏವಿಯೇಷನ್ ಕಂಪನಿ ತಯಾರಿಸಿದ ಮೂರನೇ ಹಂತದ 3 ರಫೇಲ್ ಜೆಟ್ ಯುದ್ಧ ವಿಮಾನ ಬುಧವಾರ(ಮಾರ್ಚ್ 31) ಫ್ರಾನ್ಸ್ ನಿಂದ ಭಾರತಕ್ಕೆ ಆಗಮಿಸಲಿದೆ. ಏತನ್ಮಧ್ಯೆ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ವಾಯುಮಾರ್ಗದ ಮಧ್ಯೆ ರಫೇಲ್ ಜೆಟ್ ಗೆ ಇಂಧನ ತುಂಬಿಸುವ ಪ್ರಕ್ರಿಯೆ ನಡೆಯಲಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಕೇರಳ ಅಖಾಡ: ಕೋನ್ನಿ ಕ್ಷೇತ್ರ-ಐಕ್ಯರಂಗ, ಎಡರಂಗ ಕೋಟೆಯೊಳಗೆ ಕಮಲ ಅರಳುತ್ತಾ?
ಐಎಎಫ್ ನ ಮೂವರು ಪೈಲಟ್ ಗಳು ಈಗಾಗಲೇ ಫ್ರಾನ್ಸ್ ತಲುಪಿದ್ದು, ಇಂದು ಬೆಳಗ್ಗೆ 7ಗಂಟೆಗೆ ರಫೇಲ್ ಯುದ್ಧ ವಿಮಾನ ಹೊರಟಿದ್ದು, ರಾತ್ರಿ 7ಗಂಟೆಗೆ ಭಾರತಕ್ಕೆ ಆಗಮಿಸಲಿದೆ ಎಂದು ವರದಿ ವಿವರಿಸಿದೆ.
ಮತ್ತೆ ಮೂರು ರಫೇಲ್ ಯುದ್ಧ ವಿಮಾನ ಅಂಬಾಲಾದಲ್ಲಿರುವ ವಾಯುಪಡೆಯ ಗೋಲ್ಡನ್ ಆ್ಯರೋಸ್ ಸ್ಕ್ವಾಡ್ರನ್ ಗೆ ಸೇರ್ಪಡೆಯಾಗುವ ಮೂಲಕ ಅಂಬಾಲಾ ವಾಯುನೆಲೆಯಲ್ಲಿ 14 ರಫೇಲ್ ಯುದ್ಧ ವಿಮಾನ ನಿಯೋಜನೆಗೊಂಡಂತಾಗಿದೆ.
ಭಾರತದಲ್ಲಿರುವ ಫ್ರಾನ್ಸ್ ರಾಯಭಾರಿ ಇಮ್ಯಾನ್ಯುಯೆಲ್ ಲೆನೈನ್, ಏಪ್ರಿಲ್ ಅಂತ್ಯದೊಳಗೆ ಭಾರತಕ್ಕೆ ಮತ್ತೆ ಐದು ಹೆಚ್ಚುವರಿ ರಫೇಲ್ ಯುದ್ಧ ವಿಮಾನ ಬರಲಿದೆ ಎಂದು ಮಂಗಳವಾರ(ಮಾರ್ಚ್ 30) ತಿಳಿಸಿದ್ದರು.
2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಫ್ರಾನ್ಸ್ ಜತೆ 36 ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದು ಒಟ್ಟು 59 ಸಾವಿರ ಕೋಟಿ ರೂಪಾಯಿಗಳ ಒಪ್ಪಂದವಾಗಿತ್ತು ಎಂದು ವರದಿ ತಿಳಿಸಿದೆ.