ಮಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಮುಂದಿನ 3 ತಿಂಗಳ ಒಳಗೆ ರಾಷ್ಟ್ರೀಯ ಸಮಿತಿಯಿಂದ ಬೂತ್ ಮಟ್ಟದ ವರೆಗೆ ಕಾಂಗ್ರೆಸ್ ಪಕ್ಷದ ಪುನರ್ ಸಂಘಟನೆ ನಡೆಯಲಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಕೇಂದ್ರದ ಮಾಜಿ ಸಚಿವ ಎಂ. ವೀರಪ್ಪ ಮೊಲಿ ತಿಳಿಸಿದರು.
ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಂದಿನ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪಕ್ಷ ಸಂಘಟನೆಯ ರೋಡ್ ಮ್ಯಾಪ್ ಸಿದ್ಧಗೊಳ್ಳುತ್ತಿದೆ. ಸೋಲಿನ ಮೇಲೆ ಸೋಲುಂಡವರ ಬದಲಾವಣೆ ಅನಿವಾರ್ಯ. ರಾಜ್ಯದಲ್ಲೂ ಅಗತ್ಯ ಇರುವ ಕಡೆ ಬದಲಾವಣೆಯಾಗಲಿದೆ ಎಂದರು. ಜನರ ವಿಶ್ವಾಸ ಗಳಿಸಬೇಕಾದರೆ ಯುವಕರನ್ನು ಸೇರಿಸಿಕೊಂಡು ಜನಪರ ಚಟುವಟಿಕೆ ನಡೆಸಬೇಕು ಎಂದರು.
ಸಿದ್ದುಗೆ ಹೆಚ್ಚಿನ ಜವಾಬ್ದಾರಿ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಬಂದ ಬಳಿಕ ಅವರು ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಸಹಜವಾಗಿಯೇ ಅವರು ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಜವಾಬ್ದಾರಿ ಹೊಂದಿರುತ್ತಾರೆ. ಸಾಮಾಜಿಕ ನ್ಯಾಯ ಹಾಗೂ ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಸರಕಾರ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಪಕ್ಷ ಈ ಅವಧಿಗಿಂತ ಹೆಚ್ಚಿನ ಸ್ಥಾನ ಗೆಲ್ಲಲಿದೆ ಎಂಬ ವಿಶ್ವಾಸವಿದೆ ಎಂದರು.
ಪಕ್ಷ ಒಡೆಯಲು ದಲಿತ ವಿಷಯ ದಲಿತ ಮುಖ್ಯಮಂತ್ರಿ ಚರ್ಚೆ ನಡೆಯುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಗತಿಪರ ಮನೋಭೂಮಿಕೆ ಹಾಗೂ ಪಕ್ಷದ ಸಿದ್ಧಾಂತವನ್ನು ಶೇ. 100ರಷ್ಟು ಅಳವಡಿಸಿರುವ ವ್ಯಕ್ತಿ ಮುಖ್ಯಮಂತ್ರಿಯಾಗುವುದು ಮುಖ್ಯ. ಕಾಂಗ್ರೆಸ್ ಜಾತ್ಯತೀತ ಪಕ್ಷ. ಆದರೆ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷ ಒಡೆಯುವ ಉದ್ದೇಶದಿಂದ ದಲಿತ ಮುಖ್ಯಮಂತ್ರಿ ಚರ್ಚೆ ಬೆಳೆಸುತ್ತಿದ್ದಾರೆ ಎಂದರು.
ಕಾಂಗ್ರೆಸ್‌ಗೆ ಹಾನಿಯಾಗಿಲ್ಲ: ಎಸ್.ಎಂ. ಕೃಷ್ಣ ಪಕ್ಷ ತೊರೆದಿರುವುದರಿಂದ ಕಾಂಗ್ರೆಸ್‌ಗೆ ಹಾನಿಯಾಗಿಲ್ಲ. ಅವರು ಬಿಜೆಪಿ ಪರ ಪ್ರಚಾರ ನಡೆಸಿರುವುದರಿಂದ ಕಾಂಗ್ರೆಸ್‌ಗೆ ಲಾಭವೇ ಆಗಿದೆ ಎಂದರು. ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ತಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಪಕ್ಷದಲ್ಲಿ ತಾನು ಈಗಾಗಲೇ ಅತ್ಯುತ್ತಮ ಅವಕಾಶ ಪಡೆದಿದ್ದೇನೆ ಎಂದರು.
ಪುತ್ರ ಹರ್ಷ ಮೊಲಿ ಅವರನ್ನು ಚುನಾವಣಾ ಕಣಕ್ಕೆ ಇಳಿಸುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ, ಈ ಬಗ್ಗೆ ನಾನು ಯಾವುದೇ ಉತ್ತೇಜನ ನೀಡುವುದಿಲ್ಲ. ಪುತ್ರನಿಗೆ ಆಸಕ್ತಿ ಮತ್ತು ಧೈರ್ಯ ಇದ್ದರೆ ರಾಜಕೀಯಕ್ಕೆ ಬರಲಿ; ನನ್ನ ಅಭ್ಯಂತರ ಇಲ್ಲ ಎಂದು ಹೇಳಿದರು.
ಗಣ್ಯರಾದ ಕೆ. ತೋಜೋಮಯ, ಹಯಾತುಲ್ಲಾ ಕಾಮಿಲ್, ಅಶೋಕ್ ಕುಮಾರ್ ಡಿ.ಕೆ., ಪ್ರಭಾಕರ ಶ್ರೀಯಾನ್ ಮೊದಲಾದವರು ಉಪಸ್ಥಿತರಿದ್ದರು.
ಇವಿಎಂ ಇತ್ಯರ್ಥಕ್ಕೆ ಸಮಿತಿ ರಚಿಸಬೇಕು
ಕೆಲವು ರಾಜ್ಯಗಳಲ್ಲಿ ಚುನಾವಣೆ ಸಂದರ್ಭ ಎಲೆಕ್ಟ್ರಾನಿಕ್ಸ್ ಮತ ಯಂತ್ರದ ಲೋಪದ ಕುರಿತು ವಿಪಕ್ಷಗಳು ಮುಂದಿಟ್ಟಿರುವ ಅನುಮಾನಗಳನ್ನು ಇತ್ಯರ್ಥಪಡಿಸುವಂತೆ ಕಾಂಗ್ರೆಸ್ ನಿಯೋಗ ರಾಷ್ಟ್ರಪತಿಗೆ ಮನವಿಸಲ್ಲಿಸಿದೆ. ಈ ಕುರಿತು ಸಂಶಯ ನಿವಾರಣೆಗೆ ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗ ಕ್ರಮಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಬೇಕು.
– ವೀರಪ್ಪ ಮೊಲಿ