ಶ್ರೀನಗರ್:ಭಯೋತ್ಪಾದಕ ಚಟುವಟಿಕೆಯಲ್ಲಿ ಕೆಲವು ಮಕ್ಕಳು ಶಾಮೀಲಾಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮದರಸಾದ ಮೂವರು ಶಿಕ್ಷಕರನ್ನು ಸಾರ್ವಜನಿಕಾ ಸುರಕ್ಷಾ ಕಾಯ್ದೆ(ಪಿಎಸ್ ಎ)ಯಡಿ ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮಾಧ್ಯಮದ ವರದಿ ಪ್ರಕಾರ, ಇಡೀ ಶಿಕ್ಷಣ ಸಂಸ್ಥೆಯ ಕಾರ್ಯ ಚಟುವಟಿಕೆ, ವಿದ್ಯಾರ್ಥಿಗಳ ಬಗ್ಗೆ ಕೂಲಂಕಷ ತನಿಖೆ ನಡೆಸಿದ್ದ ಗುಪ್ತಚರ ಇಲಾಖೆಗೆ ಮದರಸಾದ ಸುಮಾರು 13 ವಿದ್ಯಾರ್ಥಿಗಳು ಉಗ್ರಗಾಮಿ ಸಂಘಟನೆಗೆ ಸೇರ್ಪಡೆಯಾಗಿರುವುದು ಪತ್ತೆಯಾಗಿತ್ತು ಎಂದು ವಿವರಿಸಿದೆ.
ಕುಲ್ಗಾಮ್, ಶೋಪಿಯಾನ್ ಮತ್ತು ಅನಂತ್ ನಾಗ್ ಸೇರಿದಂತೆ ಮೂರು ಜಿಲ್ಲೆಯ ವಿದ್ಯಾರ್ಥಿಗಳು ಈ ಮದರಸಾಕ್ಕೆ ದಾಖಲಾಗಿರುವುದಾಗಿ ವರದಿ ಹೇಳಿದೆ. ಈ ಮದರಸಾದ ಹಳೇ ವಿದ್ಯಾರ್ಥಿ ಸಾಜಾದ್ ಭಟ್, ಕಳೆದ ವರ್ಷ ಫೆಬ್ರುವರಿಯಲ್ಲಿ ಪುಲ್ವಾಮಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಆತ್ಮಾಹುತಿ ಬಾಂಬರ್ ಆಗಿ ದಾಳಿ ನಡೆಸಿದ್ದ ಪರಿಣಾಮ 40 ಮಂದಿ ಯೋಧರು ಹುತಾತ್ಮರಾಗಿದ್ದರು.
ಕಾಶ್ಮೀರ ಝೋನ್ ಐಜಿಪಿ ವಿಜಯ್ ಕುಮಾರ್ ಸುದ್ದಿಗಾರರ ಜತೆ ಮಾತನಾಡುತ್ತ, ಈ ಶಾಲೆ ನಿಷೇಧಿತ ಜಮಾತ್ ಎ ಇಸ್ಲಾಮಿ ಸಂಘಟನೆಯ ಅಂಗಸಂಸ್ಥೆಯಾಗಿದೆ ಎಂದು ತಿಳಿಸಿದ್ದಾರೆ. ಸಿರಾಜ್ ಉಲೂಮ್ ಇಮಾಮ್ ಸಾಹೀಬ್ ಮದರಸಾದ ಮೂವರು ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಹೇಳಿದರು.
ಮದರಸಾದ ಶಿಕ್ಷಕರಾದ ಅಬ್ದುಲ್ ಅಹಾದ್ ಭಟ್, ಮುಹಮ್ಮದ್ ಯೂಸೂಫ್ ವಾನಿ ಮತ್ತು ರೌಫ್ ಭಟ್ ವಿರುದ್ಧ ಪಿಎಸ್ ಎ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.