ಶ್ರೀನಗರ : ದಕ್ಷಿಣ ಕಾಶ್ಮೀರದಲ್ಲಿ ನಡೆದಿರುವ ಎನ್‌ಕೌಂಟರ್‌ಗೆ ಇಬ್ಬರು ಪಾಕಿಗಳ ಸಹಿತ ಮೂವರು ಲಷ್ಕರ್ ಎ ತಯ್ಯಬ ಸಂಘಟನೆಯ ಮೂವರು ಉಗ್ರರು ಹತರಾಗಿದ್ದಾರೆ.
ಈ ಹತ ಉಗ್ರರು ಈ ವರ್ಷ ಜುಲೈನಲ್ಲಿ ಅಮರನಾಥ ಯಾತ್ರಿಗಳ ಮೇಲೆ ನಡೆದಿದ್ದ ದಾಳಿಗೆ ಹೊಣೆಗಾರರಾಗಿದ್ದರು ಎಂದು ಸೇನಾ ಮೂಲಗಳು ತಿಳಿಸಿವೆ.
ಈ ಎನ್‌ಕೌಂಟರ್ ನಡೆದ ಸ್ಥಳದಿಂದ ಪರಾರಿಯಾಗಿದ್ದ 4ನೇ ಉಗ್ರನನ್ನು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿನ ಹೆರಿಗೆ ಆಸ್ಪತ್ರೆಯಲ್ಲಿ ಪೊಲೀಸರು ಬಂಧಿಸಿದರು.
ನಿನ್ನೆ ಸೋಮವಾರ ಮಧ್ಯಾಹ್ನ ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿನ ಕಾಜೀಗುಂದ್ ಎಂಬಲ್ಲಿ, ಶ್ರೀನಗರದತ್ತ ಹೋಗುತ್ತಿದ್ದ ಸೇನೆಯ ಸರತಿ ವಾಹನಗಳ ಮೇಲೆ ಈ ಉಗ್ರರು ಗುಂಡಿನ ದಾಳಿ ನಡೆಸಿದಾಗಲೇ ಎನ್‌ಕೌಂಟರ್ ಆರಂಭಗೊಂಡಿತ್ತು.
ಭದ್ರತಾ ಪಡೆಗಳು ಗುಂಡಿನ ಪ್ರತ್ಯುತ್ತರ ನೀಡಿದಾಗ ಉಗ್ರರು ಪಲಾಯನಗೈದು ಅಡಗಿಕೊಂಡರು. ಅನಂತರ ನಡೆದ ಶೋಧ ಕಾರ್ಯಾಚರಣೆಯಲ್ಲಿ ಮೂವರು ಉಗ್ರರು ಹತರಾದರು.