ಢಾಕಾ: ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿ ಸೋತ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ವೇಗಿ ದೀಪಕ್ ಚಾಹರ್ ಗಾಯಗೊಂಡಿದ್ದರಿಂದ ಭಾರತ ಹಿನ್ನಡೆ ಅನುಭವಿಸಿತ್ತು. ಇದೀಗ ಇಬ್ಬರೂ ಆಟಗಾರರು ಮೂರನೇ ಏಕದಿನ ಪಂದ್ಯಕ್ಕೆ ಲಭ್ಯವಿರುವುದಿಲ್ಲ ಎಂದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಅಲ್ಲದೆ ಎರಡನೇ ಏಕದಿನ ಪಂದ್ಯದಲ್ಲೂ ಗಾಯದ ಸಮಸ್ಯೆಯಿಂದ ಹೊರಗುಳಿದಿತ್ತ ಕುಲದೀಪ್ ಸೇನ್ ಅವರು ಸರಣಿಯ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ.
ಬುಧವಾರದ ಪಂದ್ಯದ ಬಳಿಕ ನಡೆದ ಪ್ರೆಸ್ ಮೀಟ್ ನಲ್ಲಿ ರಾಹುಲ್ ದ್ರಾವಿಡ್ ನಲ್ಲಿ ಮೂವರು ಆಟಗಾರರ ಅಲಭ್ಯತೆಯ ಬಗ್ಗೆ ಮಾತನಾಡಿದರು. ತಜ್ಞರೊಂದಿಗೆ ಸಮಾಲೋಚಿಸಲು ರೋಹಿತ್ ಮುಂಬೈಗೆ ಹಿಂತಿರುಗಲಿದ್ದಾರೆ. ಸಂಪೂರ್ಣ ವಿಶ್ಲೇಷಣೆ ಮಾಡಿದ ನಂತರವೇ ಬಾಂಗ್ಲಾದೇಶ ವಿರುದ್ಧದ ಮುಂಬರುವ ಟೆಸ್ಟ್ ಸರಣಿಯಲ್ಲಿ ರೋಹಿತ್ ಭಾಗವಹಿಸುವುದು ಖಚಿತವಾಗುತ್ತದೆ ಎಂದು ದ್ರಾವಿಡ್ ಹೇಳಿದರು.
ಇದನ್ನೂ ಓದಿ:ಫಲಿತಾಂಶದ ದಿನವೇ ಸಂಸತ್ತಿನಲ್ಲಿ ಕಾಂಗ್ರೆಸ್ ಸಂಸದರ ಸಭೆ ಕರೆದ ಸೋನಿಯಾ ಗಾಂಧಿ
ಬುಧವಾರದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ರೋಹಿತ್ ಕೈಬೆರಳಿಗೆ ಗಾಯ ಮಾಡಿಕೊಂಡಿದ್ದರು. ನಂತರ ಮೈದಾನ ತೊರೆದಿದ್ದ ಅವರು 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಆಗಮಿಸಿದ್ದರು. ಗಾಯದ ಕೈಯಲ್ಲೇ ಆಡಿ ಅಜೇಯ ಅರ್ಧಶತಕ ಬಾರಿಸಿದ್ದರು. ಹೀಗಿದ್ದರೂ ಭಾರತ ಐದು ರನ್ ಅಂತರದ ಸೋಲನುಭವಿಸಿತ್ತು.
ರೋಹಿತ್ ಅಲಭ್ಯತೆಯ ಕಾರಣದಿಂದ ಅಂತಿಮ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ.