Advertisement

ದಿನಕ್ಕೆ 3 ತಾಸು ಅಘೋಷಿತ ಲೋಡ್‌ ಶೆಡ್ಡಿಂಗ್‌

03:00 PM Nov 09, 2017 | |

ದಾವಣಗೆರೆ: ಕಲ್ಲಿದ್ದಲು ಕೊರತೆಯಿಂದಾಗಿ ಇದೀಗ ರಾಜ್ಯದಲ್ಲಿ ವಿದ್ಯುತ್‌ ಸಮಸ್ಯೆ ತಲೆದೋರಿದ್ದು, ಪರಿಸ್ಥಿತಿ ನಿಭಾಯಿಸಲು ಕೆಪಿಟಿಸಿಎಲ್‌ ಅಘೋಷಿತ ಲೋಡ್‌ ಶೆಡ್ಡಿಂಗ್‌ ಜಾರಿ ಮಾಡಿದೆ.

Advertisement

ಕಲ್ಲಿದ್ದಲು ವಿದ್ಯುತ್‌ ಉತ್ಪಾದನಾ ಘಟಕಗಳಿಗೆ ಕಲ್ಲಿದ್ದಲು ಪೂರೈಕೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ವಿದ್ಯುತ್‌ ಉತ್ಪಾದನಾ ಪ್ರಮಾಣ ತೀರಾ ಕಡಿಮೆಯಾಗಿರುವುದು ಸಮಸ್ಯೆಗೆ ಕಾರಣವಾಗಿದೆ. ಪ್ರತಿದಿನ ರಾಜ್ಯಕ್ಕೆ ಕನಿಷ್ಠ 6000 ಮೆಗಾ ವ್ಯಾಟ್‌, ಗರಿಷ್ಠ 9000 ಮೆಗಾವ್ಯಾಟ್‌ ವಿದ್ಯುತ್‌ನ ಅವಶ್ಯಕತೆ ಇದೆ. ಅಂದರೆ ವಿದ್ಯುತ್‌ ಅವಲಂಬನೆ ಅತಿ ಕಡಿಮೆ ಇರುವ ಮಧ್ಯಾಹ್ನ 2ರಿಂದ 4 ಗಂಟೆವರೆಗೆ 6000 ಮೆ.ವ್ಯಾ., ಅತಿ ಹೆಚ್ಚಿರುವ ಸಂಜೆ 6 ಗಂಟೆಯಿಂದ ಮಧ್ಯರಾತ್ರಿಯವರೆಗೆ 9000 ಮೆ.ವ್ಯಾ. ಬೇಕಿದೆ. ಆದರೆ, ಈಗ ಉತ್ಪಾದನೆಯಾಗುತ್ತಿರುವ ಪ್ರಮಾಣ ಶೇ.30ರಷ್ಟು ಕುಸಿತ ಕಂಡಿದೆ. ಜಲ ವಿದ್ಯುತ್‌ ಉತ್ಪಾದಕಾ ಘಟಕಗಳಲ್ಲಿ ಸ್ವಾಭಾವಿಕವಾಗಿ ಕ್ರಮೇಣ ಉತ್ಪಾದನಾ ಪ್ರಮಾಣ ಇಳಿಕೆ ಆಗುತ್ತದೆ. ಇನ್ನೂ ಚಳಿಗಾಲದ ಎಫೆಕ್ಟ್ನಿಂದ ಸೋಲಾರ್‌ ಉತ್ಪಾದನೆ ಸಹ ಕಳೆದ ಕೆಲ ದಿನಗಳಿಂದ ತೀರಾ ಇಳಿಕೆಯಾಗಿದೆ. ಪವನ ವಿದ್ಯುತ್‌ ಉತ್ಪಾದನೆ ನಿರೀಕ್ಷೆಗೆ ತಕ್ಕಂತೆ ಆಗುತ್ತಿಲ್ಲ.

ಪ್ರಮುಖವಾಗಿ ಶಾಖೋತ್ಪನ್ನ ವಿದ್ಯುತ್‌ ಉತ್ಪಾದನೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ರಾಯಚೂರಿನ ಆರ್‌ಟಿಪಿಎಸ್‌, ಯರಮರಾಸ್‌ ಶಾಖೋತ್ಪನ್ನ ಉತ್ಪಾದನಾ ಘಟಕ (ವೈಟಿಪಿಎಸ್‌) ಬಳ್ಳಾರಿಯ ಬಿಟಿಪಿಎಸ್‌, ಉಡುಪಿಯ ಯುಪಿಸಿಎಲ್‌ಗ‌ಳಲ್ಲಿ ಇಂಧನದ ಕೊರತೆ ಉಂಟಾಗಿ ಉತ್ಪಾದನಾ ಪ್ರಮಾಣ ಗರಿಷ್ಠ ಇಳಿಕೆ ಕಂಡಿದೆ. ರಾಯಚೂರಿನ ಆರ್‌ಟಿಪಿಎಸ್‌ನ 8 ಘಟಕಗಳಿಂದ 
ಒಟ್ಟು 1720 ಮೆ.ವ್ಯಾ. (ದಿನಕ್ಕೆ 216 ಮೆಗಾ ಯುನಿಟ್‌) ಉತ್ಪಾದಿಸಬಹುದು. ಆದರೆ, ಹಾಲಿ ಒಂದು ಘಟಕ ಸ್ಥಗಿತಗೊಂಡಿದ್ದು ಉಳಿದ 7 ಘಟಕಗಳಿಂದ ದಿನಪೂರ್ತಿ ಉತ್ಪಾದನೆಯಾಗಿರುವ ವಿದ್ಯುತ್‌ ಪ್ರಮಾಣ 23.8 ಮೆಗಾ ಯುನಿಟ್‌ ಮಾತ್ರ. ಬಳ್ಳಾರಿಯ ಬಿಟಿಪಿಎಸ್‌ನ 3 ಘಟಕಗಳಿಂದ 1700 ಮೆಗಾ ವ್ಯಾಟ್‌ನಂತೆ ದಿನಕ್ಕೆ 40.8 ಮೆಗಾ ಯುನಿಟ್‌ ವಿದ್ಯುತ್‌ ಉತ್ಪಾದಿಸುವ ಶಕ್ತಿ ಇದೆ. ಆದರೆ, ಈಗ ಬಿಟಿಪಿಎಸ್‌ ದಿನಕ್ಕೆ 10.34 ಮೆಗಾ ಯುನಿಟ್‌ ವಿದ್ಯುತ್‌ ಮಾತ್ರ ಉತ್ಪಾದಿಸುತ್ತಿದೆ. ಉಡುಪಿಯ ಪವರ್‌ ಕಾರ್ಪೋರೇಷನ್‌ನಿಂದಲೂ ಸಹ ಇದೀಗ ಉತ್ಪಾದನಾ ಪ್ರಮಾಣ ಇಳಿಕೆ ಆಗಿದೆ. 1200 ಮೆ.ವ್ಯಾ. ಉತ್ಪಾದನಾ ಸಾಮರ್ಥ್ಯ ಹೊಂದಿರುವ ಆ ಘಟಕ 28.8 ಮೆಗಾ ಯುನಿಟ್‌ ವಿದ್ಯುತ್‌ ಪೂರೈಸಬಲ್ಲದು. ಆದರೆ, ಹಾಲಿ 11.65 ಮೆಗಾ ಯುನಿಟ್‌ ಮಾತ್ರ ಉತ್ಪಾದಿಸುತ್ತಿದೆ. ಇದಲ್ಲದೆ ಜಲ ವಿದ್ಯುತ್‌ ಉತ್ಪಾದನೆ ಪ್ರಮಾಣ ಸಹ ಇಳಿಕೆ ಕಂಡಿದೆ.

ಇದೇ ಕಾರಣಕ್ಕೆ ಎಸ್ಕಾಂಗಳ ಮೇಲೆ ಕೆಪಿಟಿಸಿಎಲ್‌ ಅಘೋಷಿತ ಲೋಡ್‌ ಶೆಡ್ಡಿಂಗ್‌ ಮಾಡುವಂತೆ ಒತ್ತಡ ಹೇರಿದೆ. ಪ್ರಮುಖ ಅವಧಿಯಲ್ಲಿ ಕನಿಷ್ಠ 2 ತಾಸು ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸಲು ಸೂಚಿಸಿದೆ. ಬೆಳಗ್ಗೆ 6.30ರಿಂದ 8, 8ರಿಂದ ಮದ್ಯಾಹ್ನ 2 ಗಂಟೆಯವರೆಗೆ, ಸಂಜೆ 4ರಿಂದ 6, 6ರಿಂದ 9 ಹಾಗೂ ರಾತ್ರಿ 9 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್‌ ಸ್ಥಗಿತಗೊಳಿಸಿ, ಕೊರತೆ ನಿಭಾಯಿಸುವಂತೆ ಕೆಪಿಟಿಸಿಎಲ್‌ ಅಧಿಕಾರಿಗಳು ಎಸ್ಕಾಂಗಳಿಗೆ ಸೂಚನೆ ನೀಡುತ್ತಿವೆ. ಚಳಿಗಾಲದಕ್ಕೆ ಕಾಲಿಟ್ಟಿರುವ ಈ ದಿನಗಳಲ್ಲೇ ವಿದ್ಯುತ್‌ ಬರ ಕಾಡಲು ಆರಂಭವಾಗಿರುವುದನ್ನು ನೋಡಿದರೆ ಬೇಸಿಗೆ
ಕಳೆಯುವುದು ಹೇಗೆ ಎಂಬ ಲೆಕ್ಕಾಚಾರವನ್ನ ಜನರು ಈಗಲೇ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next