ಕೊಚ್ಚಿ : ಕೇರಳದ ತೃಶ್ಶೂರು ಜಿಲ್ಲೆಯ ಚೆತ್ತುವಾ ಕರಾವಳಿಯ ದೂರ ಸಮುದ್ರದಲ್ಲಿ ಅಪರಿಚಿತ ಹಡಗೊಂದು ಮೀನುಗಾರಿಕೆ ಬೋಟಿಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಕನಿಷ್ಠ ಮೂವರು ಮೀನುಗಾರರು ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ.
ಇಂದು ನಸುಕಿನ 3.30ರ ಹೊತ್ತಿಗೆ ನಡೆದ ಈ ಘಟನೆಯಲ್ಲಿ ಇನ್ನೂ ಕೆಲ ಮೀನುಗಾರರು ಗಾಯಗೊಂಡರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೋಟಿನಲ್ಲಿ 15 ಮಂದಿ ಮೀನುಗಾರರು ಇದ್ದರು. ಇವರು ಎರ್ನಾಕುಲಂ ಜಿಲ್ಲೆಯ ಮುನಂಬಾಮ್ ಪ್ರದೇಶದವರಾಗಿದ್ದು ಚೆತ್ತುವಾ ಕರಾವಳಿಯ ದೂರ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದರು.
ಮೀನುಗಾರಿಕೆ ಬೋಟಿಗೆ ಢಿಕ್ಕಿ ಹೊಡೆದ ನಾವೆಯು ಅಲ್ಲಿಂದ ಮುಂದಕ್ಕೆ ಹೋಗಿದೆ. ಕೇರಳ ಮೀನುಗಾರಿಕಾ ಸಚಿವ ಜೆ ಮರ್ಸಿಕುಟ್ಟಿ ಅಮ್ಮ ಅವರು ಟಿವಿ ಚ್ಯಾನಲ್ ಗೆ ನೀಡಿರುವ ಹೇಳಿಕೆಯಲ್ಲಿ “ಆರಂಭಿಕ ಮಾಹಿತಿಗಳ ಪ್ರಕಾರ ಮೂವರು ಮೀನುಗಾರರು ಮೃತಪಟ್ಟಿದ್ದಾರೆ’ ಎಂದು ತಿಳಿಸಿದ್ದಾರೆ.
ಈ ಘಟನೆಯ ಬಗ್ಗೆ ಕೋಸ್ಟ್ ಗಾರ್ಡ್ ಮತ್ತು ನೌಕಾ ಪಡೆಯನ್ನು ಜಾಗೃತಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ವಿವರಗಳನ್ನು ಎದುರು ನೋಡಲಾಗುತ್ತಿದೆ.
ಕಳೆದ ಜೂನ್ 7ರಂದು ವಿದೇಶೀ ನಾವೆಯೊಂದು ಮೀನುಗಾರಿಕಾ ಬೋಟಿ ಢಿಕ್ಕಿ ಹೊಡೆದಿದ್ದ ಘಟನೆಯಲ್ಲಿ ಇಬ್ಬರು ಮೀನುಗಾರರು ಗಾಯಗೊಂಡಿದ್ದರು.