ಮೈಸೂರು: ನ.29 ರಿಂದ 3 ದಿನಗಳ ಕಾಲ ಮೈಸೂರಿನಲ್ಲಿ ರಾಜ್ಯಮಟ್ಟದ 25ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಂದೀಪ್ ಡಿ.ತಿಳಿಸಿದರು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿವಿಧ ಇಲಾಖೆಗಳ ಸಹಯೋಗದೊಂದಿಗೆ ರಾಜ್ಯ ವಿಜ್ಞಾನ ಪರಿಷತ್ತು ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ-ತಂತ್ರಜ್ಞಾನ ಮತ್ತು ನವೀನ ಅನ್ವಯಗಳ ಬಳಕೆ ಆಶಯದೊಂದಿಗೆ ಆಯೋಜಿಸಿರುವ ಸಮಾವೇಶದ ಉದ್ಘಾಟನಾ ಸಮಾರಂಭ ಮೈಸೂರು ವಿವಿ ಸೆನೆಟ್ ಭವನದಲ್ಲಿ ನಡೆಯಲಿದ್ದು, ತಾಂತ್ರಿಕ ಸಮಾವೇಶಗಳು ರಾಜ್ಯ ಮುಕ್ತ ವಿವಿ ಆವರಣದಲ್ಲಿ ನಡೆಯಲಿವೆ ಎಂದರು.
ನ.29ರ ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾವೇಶ ಉದ್ಘಾಟಿಸಲಿದ್ದಾರೆ. ರಜತ ಮಹೋತ್ಸವದ ಅಂಗವಾಗಿ ಹೊರತರಲಾಗಿರುವ ಸ್ಮರಣ ಸಂಚಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಬಿಡುಗಡೆ ಮಾಡಲಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್.ಸೀತಾರಾಂ ತಾಂತ್ರಿಕ ಅಧಿವೇಶನ ಉದ್ಘಾಟಿಸಲಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ವಸ್ತು ಪ್ರದರ್ಶನ ಉದ್ಘಾಟಿಸಲಿದ್ದು, ಶಾಸಕ ವಾಸು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ವಿಜ್ಞಾನಿ ಪೊ›.ಸಿ.ಎನ್.ಆರ್.ರಾವ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆಂದರು. ಡಿ.1ರ ಮಧ್ಯಾಹ್ನ 2ಕ್ಕೆ ನಡೆಯಲಿರುವ ಸಮಾರೋಪದಲ್ಲಿ ಇಸ್ರೋ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಭಾಷಣ ಮಾಡಲಿದ್ದಾರೆ.
ಸಚಿವ ತನ್ವೀರ್, ರಾಜ್ಯ ಯುವ ವಿಜ್ಞಾನಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ವಿಧಾನಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ ಬಹುಮಾನ ವಿತರಣೆ ಮಾಡಲಿದ್ದಾರೆ. ಸಚಿವೆ ಉಮಾಶ್ರೀ ಸ.ಜ.ನಾಗಲೋಟಿ ಮಠ ದತ್ತಿನಿಧಿ ಬಹುಮಾನ ವಿತರಣೆ ಮಾಡಲಿದ್ದಾರೆ. ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷರಾದ ವಿಧಾನಪರಿಷತ್ ಸದಸ್ಯ ಎಸ್.ವಿ.ಸಂಕನೂರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಸಮಾವೇಶಕ್ಕೆ 30 ಲಕ್ಷ ರೂ. ವೆಚ್ಚ ಅಂದಾಜು ಮಾಡಲಾಗಿದೆ. ಈ ಪೈಕಿ 15 ಲಕ್ಷ ರೂ.ಗಳನ್ನು ಸರ್ಕಾರ ನೀಡುತ್ತಿದ್ದು, ಇನ್ನುಳಿದ 15 ಲಕ್ಷ ರೂ.ಗಳನ್ನು ಸಮಿತಿ ವತಿಯಿಂದ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಬರುವ ಪ್ರತಿನಿಧಿಗಳಿಗೆ ಊಟ-ವಸತಿ- ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಪ್ರಾತ್ಯಕ್ಷಿಕೆ: ರಾಕೆಟ್ ಉಡಾವಣೆ ಕುರಿತು ಪ್ರಾತ್ಯಕ್ಷಿಕೆ, ಹಾವುಗಳ ಬಗ್ಗೆ ಉಪನ್ಯಾಸ, ಪವಾಡ ರಹಸ್ಯ ಬಯಲು, ನಿತ್ಯ ಜೀವನದಲ್ಲಿ ಗಣಿತ ಕುರಿತು ಉಪನ್ಯಾಸದ ಜತೆಗೆ 3 ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಸಮಾವೇಶದಲ್ಲಿ ಕಿರಿಯ-ಹಿರಿಯ ಹಾಗೂ ಗ್ರಾಮೀಣ ಮತ್ತು ನಗರ ವಿಭಾಗದಿಂದ ಒಟ್ಟು 4 ವಿಭಾಗಗಳಲ್ಲಿ ವಿದ್ಯಾರ್ಥಿಗಳು ತಾವು ರೂಪಿಸಿರುವ ವೈಜ್ಞಾನಿಕ ಯೋಜನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ ಎಂದು ಸಮಾವೇಶದ ಸಂಯೋಜಕ ಸಿ.ಕೃಷ್ಣೇಗೌಡ ತಿಳಿಸಿದರು. ಪರಿಷತ್ತಿನ ಪದಾಧಿಕಾರಿಗಳಾದ ಪೊ›.ಎಸ್.ಎಂ.ಗುರುನಂಜಯ್ಯ, ಹರಿ ಪ್ರಸಾದ್, ಎನ್.ಎಂ.ಶಿವಪ್ರಕಾಶ್, ಎನ್.ಆರ್.ಮಂಜುನಾಥ್ ಇದ್ದರು.