ಧಾರವಾಡ: ಜಿಪಂ, ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮದ ಸಹಯೋಗದಲ್ಲಿ ಮೇ 26ರಿಂದ 28ರ ವರೆಗೆ ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಮಚಂದ್ರ ಮಡಿವಾಳ ಸುದ್ದಿಗೊಷ್ಠಿಯಲ್ಲಿ ಹೇಳಿದರು.
26ರಂದು ಮಧ್ಯಾಹ್ನ 3 ಗಂಟೆಗೆ ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಿಎಂ ಜಗದೀಶ ಶೆಟ್ಟರ, ಸಂಸದ ಪ್ರಹ್ಲಾದ ಜೋಶಿ, ಶಾಸಕರಾದ ಸಿ.ಎಂ. ನಿಂಬಣ್ಣವರ, ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ಜಿಲ್ಲಾಧಿಕಾರಿ ಡಾ| ಎಸ್.ಬಿ.ಬೊಮ್ಮನಹಳ್ಳಿ ಹಾಗೂ ಜಿಪಂ ಸಿಇಒ ಆರ್. ಸ್ನೇಹಲ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದರು.
ರೈತರಿಂದ ಗ್ರಾಹಕರಿಗೆ ನೇರವಾಗಿ ಹಣ್ಣು ತಲುಪಿಸಲು ಈ ಮೇಳ ವೇದಿಕೆ ಆಗಿದ್ದು, ರಾಸಾಯನಿಕ ಮುಕ್ತ ಹಣ್ಣುಗಳ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. 31 ರೈತರು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದು, ಒಟ್ಟು 31 ಮಳಿಗೆ ತೆರೆಯಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮೇಳದಲ್ಲಿ ಮಾರಾಟಕ್ಕೆ ಹತ್ತಾರು ತಳಿಯ ಹಣ್ಣುಗಳು ಇರಲಿದ್ದು, 50ಕ್ಕೂ ಹೆಚ್ಚಿನ ತಳಿಯ ಹಣ್ಣುಗಳು ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪ್ರಸ್ತುತ 12,540 ಹೆಕ್ಟೇರ್ ಪ್ರದೇಶದಲ್ಲಿ ಉತ್ಕೃಷ್ಟ ಗುಣಮಟ್ಟದ 1,07,217 ಮೆಟ್ರಿಕ್ ಟನ್ ಮಾವು ಬೆಳೆಯುತ್ತಿದ್ದು, ಹೆಚ್ಚಿನ ಉತ್ಪನ್ನವು ರಫ್ತು ಗುಣಮಟ್ಟದಿಂದ ಕೂಡಿದೆ. ಸದ್ಯ ಮಳೆ ಅಭಾವ ಹಾಗೂ ವಿವಿಧ ಕಾರಣದಿಂದ ಪ್ರಸಕ್ತ ಸಾಲಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಮಾವು ಇಳುವರಿ ಕಡಿಮೆ ಆಗಿದೆ. ಇನ್ನೂ ಕಳೆದ ಸಾಲಿನ ಮಾವು ಮೇಳದಲ್ಲಿ 5975 ಡಜನ್ ಮಾವು ಮಾರಾಟ ಮಾಡಲಾಗಿತ್ತು ಎಂದು ವಿವರಿಸಿದರು.
ಈ ಮೇಳದಲ್ಲಿ ತೋಟಗಾರಿಕಾ ಬೆಳೆ ಪ್ರೋತ್ಸಾಹ ದೃಷ್ಟಿಯಿಂದ ವಿವಿಧ ತೋಟಗಾರಿಕಾ ಸಸಿ ಮಾರಾಟ ಮಾಡುವ ಉದ್ದೇಶದಿಂದ ಸಸ್ಯ ಸಂತೆ ಸಂಘಟಿಸಲಾಗಿದೆ. ರಿಯಾಯಿತಿ ದರದಲ್ಲಿ ಇಲಾಖೆ ದರಪಟ್ಟಿಯಂತೆ ಮಾವು, ಪೇರಲ, ಕರಿಬೇವು ಸೇರಿದಂತೆ ವಿವಿಧ ಸಸಿ ಮಾರಾಟ ಮಾಡಲಾಗುತ್ತದೆ. ಪ್ರತಿದಿನ ಬೆಳಗ್ಗೆ 9ರಿಂದ ರಾತ್ರಿ 9 ಗಂಟೆವರೆಗೆ ಮಾವು ಮಾರಾಟ ನಡೆಯಲಿದೆ ಎಂದು ತಿಳಿಸಿದರು.