Advertisement

ಗೋಷ್ಠಿ, ಸಂವಾದ, ಚರ್ಚೆಗಳಿಗೆ ಅವಕಾಶ ಕಲ್ಪಿಸಲು 3 ದಿನ ಸಮ್ಮೇಳನ

07:34 AM Feb 17, 2019 | Team Udayavani |

* ಈ ಬಾರಿಯ ಸಮ್ಮೇಳನದ ವಿಶೇಷತೆಗಳೇನು?
ಬಿ.ಎಸ್‌.ವಿನಯ್‌: 
ಇದು ಚಾಮರಾಜನಗರದ ಜಿಲ್ಲಾ ಕೇಂದ್ರದಲ್ಲಿ ಮೂರನೇ ಬಾರಿಗೆ ನಡೆಯುತ್ತಿರುವ ಸಮ್ಮೇಳನ. ಇಷ್ಟು ವರ್ಷವೂ ಎರಡು ದಿನ ನಡೆಯುತ್ತಿದ್ದ ಸಮ್ಮೇಳನ ಈ ಬಾರಿ ಮೂರು ದಿನಕ್ಕೆ ವಿಸ್ತರಿಸಿರುವುದು ವಿಶೇಷ. “ಅಕ್ಕ ಕೇಳವ್ವ’ ಎಂಬ ಚಾ.ನಗರ ಜಿಲ್ಲೆಯ ಪ್ರಾತಿನಿಧಿಕ ಮಹಿಳಾ ಕವನ ಸಂಕಲನ ಬಿಡುಗಡೆಯಾಗಲಿದೆ.

Advertisement

* ಮೂರು ದಿನ ವಿಸ್ತರಿಸಿರುವುದಕ್ಕೆ ವಿಶೇಷ ಕಾರಣಗಳಿವೆಯೇ ?
ವಿನಯ್‌: 
ಎರಡು ದಿನಗಳ ಸಮ್ಮೇಳನದಲ್ಲಿ ಶಿಷ್ಟಾಚಾರ ಪಾಲನೆ, ಉದ್ಘಾಟನೆ, ಮೆರವಣಿಗೆ ಮುಂತಾದವುಗಳೇ ಅರ್ಧ ಮುಕ್ಕಾಲು ದಿನ ಬೇಕಾಗುತ್ತಿತ್ತು. ಉಳಿದಂತೆ ಗೋಷ್ಠಿಗಳು, ಸಂವಾದ, ಚರ್ಚೆಗಳಿಗೆ ಸಮಯಾವಕಾಶ ಕಡಿಮೆ ಎನಿಸಿದ್ದರಿಂದ ಮೂರು ದಿನಗಳ ಕಾಲ ವಿಸ್ತರಿಸಿದ್ದೇವೆ. ಈ ಬಾರಿ ಪೂರ್ಣ ಎರಡು ದಿನಗಳು ಗೋಷ್ಠಿಗಳಿಗೆ ಮೀಸಲಿರಿಸಿದೆ. ಇಂತಹ ಗೋಷ್ಠಿಗಳೇ ಸಮ್ಮೇಳನದ ಮುಖ್ಯ ಉದ್ದೇಶ.

* ಯಾವ ವಿಷಯದ ಮೇಲೆ ಗೋಷ್ಠಿಗಳು ನಡೆಯುತ್ತವೆ?
ವಿನಯ್‌:
ಈ ಬಾರಿ ಪ್ರಮುಖವಾಗಿ ಚಾಮರಾಜನಗರ‌ ಜಿಲ್ಲೆಯ ಪ್ರಾಚೀನ ಸಾಹಿತ್ಯ ಕೃತಿಗಳ ಬಗ್ಗೆ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಚಾಮರಾಜನಗರ ಜಿಲ್ಲೆಯ ಪ್ರಾಚೀನ ಸಾಹಿತ್ಯ ಕೃತಿಗಳು ಹಾಗೂ ಸಾಹಿತ್ಯದ ಬಗ್ಗೆ ಸಾಹಿತಿ, ಹಿರಿಯ ವಿದ್ವಾಂಸರಿಂದ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ.

* ಪ್ರಾಚೀನ ಸಾಹಿತ್ಯದ ಅಗತ್ಯತೆ ಇಂದಿನ ತಲೆಮಾರಿನ ಸಾಹಿತಿಗಳಿಗೆ ಇದೆಯೇ?
ವಿನಯ್‌:
ಖಂಡಿತ. ಚಾಮರಾಜನಗರ ಎಂದಾಕ್ಷಣ ಹಿಂದುಳಿದ ಜಿಲ್ಲೆ, ಕತ್ತಲನಾಡು ಎಂಬ ವಿಶೇಷಣಗಳೇ ಜನಮಾನಸದಲ್ಲಿ ಹಾಸು ಹೊಕ್ಕಾಗಿದೆ. ಇಂದಿನ ತಲೆಮಾರಿಗೆ ಜಿಲ್ಲೆಯ ಸಾಹಿತ್ಯ ಕೃತಿಗಳು ಈ ಕಾಲಕ್ಕೂ ಎಷ್ಟು ಪ್ರಸ್ತುತ ಎಂಬುದನ್ನು ಅರಿವು ಮೂಡಿಸಬೇಕಾಗಿದೆ. ಡಾ. ಬಿ.ಅರ್‌.ಅಂಬೇಡ್ಕರ್‌ ಅವರೇ ಹೇಳಿದಂತೆ ಇತಿಹಾಸ ಅರಿಯದವನು ಇತಿಹಾಸ ಸೃಷ್ಟಿಸಲಾರ.

ಆದ್ದರಿಂದ ನಮ್ಮ ಇತಿಹಾಸ ಎಷ್ಟು ಉದಾತ್ತವಾಗಿದೆ ಹಾಗೂ ಇಂದಿಗೂ ಹೇಗೆ ಪ್ರಸ್ತುತವಾಗಿದೆ ಎಂಬುದನ್ನು ಅರ್ಥೈಸಬೇಕಾಗಿದೆ. ಮತ ಧರ್ಮದ ಮೇಲಾಟದಲ್ಲಿ ತೊಡಗಿರುವ ಇಂದಿನ ದಿನಗಳಲ್ಲಿ, ಅವರವರ ದರುಶನಕೆ, ಅವರವರ ವೇಷದಲಿ, ಅವರವರನ್ನು ಗುರು ನೀನೊಬ್ಬನೇ ಎಂಬ ಮಾತಿನ ವಿಸ್ತಾರವನ್ನು ಅರ್ಥ ಮಾಡಿಸಬೇಕಾಗಿದೆ.

Advertisement

* ಜಿಲ್ಲೆಯ ಎಲ್ಲಾ ಕವಿಗಳು, ಸಾಹಿತಿಗಳಿಗೂ ಅವಕಾಶ ನೀಡಲಾಗಿದೆಯೇ ?
ವಿನಯ್‌:
ಚಾಮರಾಜನಗರ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತವಾದ ಜಿಲ್ಲೆ. ಇಲ್ಲಿ ಕವಿಗಳು ಹಾಗೂ ಕಲಾವಿದರಿಗೆ ಎಂದು ಕೊರತೆಯಿಲ್ಲ. ಒಂದು ಅಂಕಿ ಅಂಶಗಳ ಪ್ರಕಾರ ಆರು ನೂರಕ್ಕೂ ಹೆಚ್ಚು ಕವಿಗಳು ಇಲ್ಲಿ ಹಾಲಿ ಕಾವ್ಯ ರಚನೆ ಮಾಡುತ್ತಿದ್ದಾರೆ. ಅವರೆ ನಮಗೆ ವರ್ಷಕ್ಕೆ ಒಂದು ಸಮ್ಮೇಳನ ನಡೆಸಲು ಅವಕಾಶವಿರುವುದು.

ಹಾಗಾಗಿ 20 ರಿಂದ 50 ಕವಿಗಳಿಗೆ ಮಾತ್ರ ಒಂದು ವರ್ಷಕ್ಕೆ ಜಿಲ್ಲಾ ಸಮ್ಮೇಳನದಲ್ಲಿ ಹಲವು ಜನ ಪ್ರತಿಭಾವಂತ ಕವಿಗಳನ್ನು ಕೈ ಬಿಡಲಾಗಿದೆ ಎಂಬ ಅರಿವು ನಮಗಿದೆ. ಏಕೆಂದರೆ ಹಿಂದಿನ ಎರಡು ಸಮ್ಮೇಳನಗಳಲ್ಲಿ ಕವನ ವಾಚನ ಮಾಡಿದ ಕವಿಗಳನ್ನು ಈ ಸಮ್ಮೇಳನದಲ್ಲಿ ಯಾವ ಕಾರಣಕ್ಕೂ ಪರಿಗಣಿಸಲಾಗಿಲ್ಲ.

* ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳ ವಿಶೇಷತೆ ಏನು?
ವಿನಯ್‌:
ಈ ಬಾರಿ ಚಾಮರಾಜನಗರ ಜಿಲ್ಲೆಯ ಸ್ಥಳೀಯರಿಗೆ ಆದ್ಯತೆ ನೀಡಲಾಗಿದೆ. ಅಲ್ಲದೇ ಜಿಲ್ಲೆಯಲ್ಲಿ ನೆಲೆಸಿರುವ ಬೇರೆ ಬೇರೆ ಊರಿನ ಕಲಾವಿದರಿಗೆ ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ಥಾನಿ ವಾದ್ಯಗೋಷ್ಠಿ, ಭರತನಾಟ್ಯ, ಕಂಸಾಳೆ ಮುಂತಾದ ಹಲವು ಕಾರ್ಯಕ್ರಮಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next